ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನವೂ ಸಿಗೋಲ್ಲ

| Published : Apr 17 2024, 01:20 AM IST / Updated: Apr 17 2024, 01:21 AM IST

ಸಾರಾಂಶ

ರಾಜ್ಯದ ಜನ ಗ್ಯಾರಂಟಿಗೆ ಮರಳಾಗಿದ್ದಾರೆ, ಇನ್ನು ನಮ್ಮನ್ನು ಸೋಲಿಸುವವರು ಯಾರು ಅನ್ನೋ ಅಹಂಕಾರದಲ್ಲಿ ತೇಲಾಡುತ್ತಿದ್ದ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಿಡಿಲು ಬಡಿದಂತಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಕಾಂಗ್ರೆಸ್ ನವರು ಎಷ್ಟೇ ಸರ್ಕಸ್ಸು ಮಾಡಿದರೂ ರಾಜ್ಯದಲ್ಲಿ ಒಂದೂ ಲೋಕಸಭಾ ಕ್ಷೇತ್ರ ಗೆಲ್ಲಲಾರರು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಪ್ಪನವರ್‌ ಹೇಳಿದರು.

ಮುಳಬಾಗಿಲು ತಾಲ್ಲೂಕಿನ ನಂಗಲಿ ಮತ್ತು ಗುಡಿಪಲ್ಲಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅ‍ವರು, ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೊಟ್ಟಿದ್ದೇವೆ, ರಾಜ್ಯದ ಜನ ಗ್ಯಾರಂಟಿಗೆ ಮರಳಾಗಿದ್ದಾರೆ, ಇನ್ನು ನಮ್ಮನ್ನು ಸೋಲಿಸುವವರು ಯಾರು ಅನ್ನೋ ಅಹಂಕಾರದಲ್ಲಿ ತೇಲಾಡುತ್ತಿದ್ದ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಿಡಿಲು ಬಡಿದಂತಾಗಿದೆ ಎಂದರು.

ಗ್ಯಾರಂಟಿಗೆ ಜನತೆ ಬೇಸರ

ಕಾಂಗ್ರೆಸ್‌ ಗ್ಯಾರಂಟಿಗಳಿಂದ ಜನ ಬೇಸತ್ತಿದ್ದಾರೆ, ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೇಂದ್ರ ಸರ್ಕಾರ ಕೊಡುತ್ತಿರುವ ಐದು ಕೆ.ಜಿ ಅಕ್ಕಿನ್ನು ಮಾತ್ರ ನೀಡುತ್ತಿದ್ದಾರೆ. ೨೦೦ ಯೂನಿಟ್ ವಿದ್ಯುತ್ ಉಚಿತ ಕೊಡ್ತೀವಿ ಅಂತೇಳಿ ವಿದ್ಯುತ್ ದರ ಹೆಚ್ಚು ಮಾಡಿ ಕಂಡೀಷನ್ ಹಾಕಿ ವಿದ್ಯುತ್ ಯುನಿಟ್ ಗಳನ್ನು ನಿಗದಿಪಡಿಸಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದರು.ಯುವ ನಿಧಿ ಕೊಡುತ್ತೇವೆ ಅಂತೇಳಿ ಯಾವೊಬ್ಬ ವಿದ್ಯಾವಂತ ನಿರುದ್ಯೋಗಿಗೂ ಒಂದು ರುಪಾಯಿಯೂ ಯುವ ನಿಧಿ ಬಂದಿಲ್ಲ, ಗೃಹ ಲಕ್ಷ್ಮಿ ಹೆಸರಲ್ಲಿ ಅರ್ಧ ಜನರಿಗೆ ಕೊಟ್ಟು ಇನ್ನುಳಿದ ಅರ್ಧ ಜನರ ಹಣವನ್ನು ಸರ್ಕಾರ ತಿಂದು ತೇಗುತ್ತಿದೆ ಎಂದರು.ಅಭಿವೃದ್ಧಿ ಕಾರ್ಯಗಳು ಸ್ಥಗಿತ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದೇ ಒಂದು ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ, ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಹೊಡೆದ ದುಡ್ಡನ್ನು ಪಕ್ಕದ ರಾಜ್ಯಗಳ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ವ್ಯಯ ಮಾಡುತ್ತಿದೆ, ಈಗ ದೇಶದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ, ದೇಶದಲ್ಲಿ ಎಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳು ನಡೆಯುತ್ತವೋ ಅಲ್ಲೆಲ್ಲಾ ಕರ್ನಾಟಕದ ಭ್ರಷ್ಟಾಚಾರದ ಹಣ ವ್ಯಯಿಸಲಾಗುತ್ತಿದೆ ಎಂದರು.ದಲಿತರನ್ನು ಒಡೆದು ಆಳುವ ನೀತಿ

ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ಕೋಲಾರದಲ್ಲಿ ಕಾಂಗ್ರೆಸ್‌ನವರು ಎಡಗೈ, ಬಲಗೈ ಎಂದು ದಲಿತರ ವಿರುದ್ದ ದಲಿತರನ್ನೇ ಎತ್ತಿಕಟ್ಟಿ ಮತಬ್ಯಾಂಕ್ ಗಾಗಿ ದಲಿತರನ್ನು ಒಡೆದು ಆಳುತ್ತಿದ್ದಾರೆ, ಬಲಗೈ ಜನಾಂಗಕ್ಕೆ ಟಿಕೆಟ್ ಕೊಡಿಸುತ್ತೇವೆ ಎಂದು ರಾಜೀನಾಮೆಗೆ ಮುಂದಾದ ಕೋಲಾರ ಕಾಂಗ್ರೆಸ್ ನಾಯಕರೇ ಯಾಕೆ ಬಲಗೈ ಜನಾಂಗಕ್ಕೆ ಟಿಕೆಟ್ ಕೊಡಿಸಲಿಲ್ಲ. ಬಲಗೈ ಜನಾಂಗಕ್ಕೆ ನೀವು ಮಾಡಿದ ಅಪಮಾನಕ್ಕೆ ಜಿಲ್ಲೆಯ ಜನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಮೋದಿ ಮಾಡಿರುವ ಅಭಿವೃದ್ದಿ ಕಾರ್ಯಗಳೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ, ಇದು ದೇಶದ ಚುನಾವಣೆ, ಭಾರತ ದೇಶ ವಿಶ್ವಮಟ್ಟದಲ್ಲಿ ಇನ್ನಷ್ಟು ಅಭಿವೃದ್ದಿಯಾಗಬೇಕಾದರೆ ಮೂರನೇ ಭಾರಿಯೂ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಬೇಕು ಎಂದರು.

ಮತ ನೀಡಲು ಬಾಬು ಮನವಿ

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರುವುದರಿಂದ ಎಲ್ಲರೂ ನನಗೆ ಆಶೀರ್ವಾದ ಮಾಡಿದರೆ ಮೋದಿರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡೋಣ ಎಂದು ಮನವಿ ಮಾಡಿದರು.

ನಂಗಲಿ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಾಯಕರನ್ನು ಕಾರ್ಯಕ್ರಮದ ವೇದಿಕೆಗೆ ಕರೆದೊಯ್ದರು. ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡ ಸುಂದರ್, ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜು, ಮುಖಂಡರಾದ ಎನ್‌ಆರ್‌ಎಸ್ ಸತ್ಯಣ್ಣ, ನಲ್ಲೂರು ರಘುಪತಿರೆಡ್ಡಿ, ಶ್ರೀನಿವಾಸರೆಡ್ಡಿ, ಶ್ಯಾಮೇಗೌಡ, ಡಾ. ಸಿ.ಎನ್ ಪ್ರಕಾಶ್,ನಂಗಲಿ ವಿಶ್ವನಾಥರೆಡ್ಡಿ, ನಂಗಲಿ ಕಿಶೋರ್ ಇದ್ದರು.