ಹಾಸನ- ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿಗೆ ಸಿಗುವ ನಿರೀಕ್ಷೆ : ಪ್ರೀತಂಗೌಡ ವಿಶ್ವಾಸ

| Published : Feb 05 2024, 01:45 AM IST

ಹಾಸನ- ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿಗೆ ಸಿಗುವ ನಿರೀಕ್ಷೆ : ಪ್ರೀತಂಗೌಡ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ಹಾಸನ, ಮಂಡ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದುದು ನಿಜ. ಆದರೆ, ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರುವುದು ಈಗ ಒಂದು ಕ್ಷೇತ್ರದಲ್ಲಿ ಮಾತ್ರ. ಬಿಜೆಪಿ ಕೂಡ ಜೆಡಿಎಸ್‌ನಷ್ಟೇ ಪ್ರಾಬಲ್ಯವನ್ನು ಹೊಂದಿದೆ. ಅದಕ್ಕಾಗಿ ಕಾರ್‍ಯಕರ್ತರು ಮಂಡ್ಯ ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರವನ್ನು ಕೇಳುವುದೇ ತಪ್ಪು ಎನ್ನುವುದು ಸರಿಯಲ್ಲ. ಮಂಡ್ಯದ ಬಿಜೆಪಿಯಲ್ಲಿ ಹಲವರು ನಾಯಕರಿದ್ದಾರೆ. ಸುಮಲತಾ ಅವರೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರಗಳು ಬಿಜೆಪಿ ಪಾಲಾಗುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಪ್ರೀತಂಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್‍ಯಕಾರಿಣಿ ಸಭೆಯಲ್ಲಿ ಟಿಕೆಟ್ ಹಂಚಿಕೆ ಕುರಿತ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಎನ್‌ಡಿಎ ಮೈತ್ರಿ ಕೂಟಕ್ಕೆ ಸೇರಿದೆ ಅಷ್ಟೆ. ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಹಾಸನ ಮತ್ತು ಮಂಡ್ಯ ಎರಡೂ ಕ್ಷೇತ್ರಗಳು ಬಿಜೆಪಿಗೆ ಸಿಗುವುದೆಂಬ ವಿಶ್ವಾಸ ಕಾರ್‍ಯಕರ್ತರಲ್ಲಿದೆ. ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದಾದರೆ ನಮ್ಮ ಕಾರ್‍ಯಕರ್ತರ ಒಪ್ಪಿಗೆ ಪಡೆಯಬೇಕು. ಮೈತ್ರಿಯಾಗಿದೆ ಎಂಬ ಕಾರಣಕ್ಕೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್‍ಯಕರ್ತರು ಕುಂದುವ ಅವಶ್ಯಕತೆ ಇಲ್ಲ ಎಂದರು.

ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದೆಂಬುದು ಪಕ್ಷದ ಬಹುತೇಕ ಕಾರ್‍ಯಕರ್ತರ ಅಭಿಪ್ರಾಯವಾಗಿದೆ. ಈ ವಿಚಾರವನ್ನು ರಾಜ್ಯ ನಾಯಕರ ಗಮನಕ್ಕೆ ತರುತ್ತೇನೆ ಹಾಗೂ ರಾಜ್ಯಾಧ್ಯಕ್ಷರ ಜೊತೆಯೂ ಚರ್ಚಿಸುತ್ತೇನೆ ಎಂದು ಕಾರ್‍ಯಕರ್ತರಿಗೆ ಭರವಸೆ ನೀಡಿದರು.

ಹಿಂದೆ ಹಾಸನ, ಮಂಡ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದುದು ನಿಜ. ಆದರೆ, ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರುವುದು ಈಗ ಒಂದು ಕ್ಷೇತ್ರದಲ್ಲಿ ಮಾತ್ರ. ಬಿಜೆಪಿ ಕೂಡ ಜೆಡಿಎಸ್‌ನಷ್ಟೇ ಪ್ರಾಬಲ್ಯವನ್ನು ಹೊಂದಿದೆ. ಅದಕ್ಕಾಗಿ ಕಾರ್‍ಯಕರ್ತರು ಮಂಡ್ಯ ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರವನ್ನು ಕೇಳುವುದೇ ತಪ್ಪು ಎನ್ನುವುದು ಸರಿಯಲ್ಲ. ಮಂಡ್ಯದ ಬಿಜೆಪಿಯಲ್ಲಿ ಹಲವರು ನಾಯಕರಿದ್ದಾರೆ. ಸುಮಲತಾ ಅವರೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸದ್ಯ ಸುಮಲತಾ ಬಿಜೆಪಿ ಬೆಂಬಲಿತ ಸಂಸದರು. ಅವರ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ನಾಯಕರಿಗೆ ಮಾಹಿತಿ ನೀಡುತ್ತೇನೆ ಎಂದರು.

ಜೆಡಿಎಸ್‌ನವರು ಮಂಡ್ಯ ಮತ್ತು ಹಾಸನ ಕ್ಷೇತ್ರವನ್ನು ಕೇಳುತ್ತಿರುವುದು ಸತ್ಯ. ಆದರೆ, ಅದಿನ್ನೂ ಅಂತಿಮ ತೀರ್ಮಾನವಾಗಿಲ್ಲ. ಹಾಸನದಲ್ಲಿ ಸದ್ಯ ಜೆಡಿಎಸ್ ಎಂಪಿ ಇದ್ದಾರೆ. ನಾವು ಅಲ್ಲಿ ಟಿಕೆಟ್ ಕೇಳಬಾರದು. ಮಂಡ್ಯ ಎಂಪಿ ಸುಮಲತಾ ಅವರು ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಈಗ ನಾವು ಸುಮಲತಾ ಅವರಿಗೆ ಟಿಕೆಟ್ ಎಂದು ಕೇಳಲು ಸಾಧ್ಯವೇ? ಹಾಸನದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಡುವುದಾದರೆ ಮಂಡ್ಯದಲ್ಲಿ ಸುಮಲತಾಗೆ ಕೊಡುತ್ತಾರಾ?, ಕಳೆದ ಚುನಾವಣೆಯ ಗೆಲುವು ಟಿಕೆಟ್ ನೀಡುವುದಕ್ಕೆ ಒಂದೇ ಮಾನದಂಡವಲ್ಲ. ಈಗಿನ ಶಕ್ತಿ ಮತ್ತು ಗೆಲುವಿನ ಬಗ್ಗೆ ನೋಡಬೇಕಾಗುತ್ತದೆ. ಎರಡೂ ಪಕ್ಷದ ಕಾರ್‍ಯಕರ್ತರ ಒಪ್ಪಿಗೆಯಿಂದ ಅಭ್ಯರ್ಥಿ ಆಯ್ಕೆಯಾಗಬೇಕು ಎಂದರು.

ನಾನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಅದರಿಂದ ಹೊರಬಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಎಂ.ಪಿ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದನ್ನು ನಮ್ಮ ನಾಯಕರಿಗೂ ತಿಳಿಸಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಎಲ್ಲಿ ಕಳೆದುಕೊಂಡೆನೋ ಅಲ್ಲಿಯೇ ಹುಡುಕುತ್ತಿದ್ದೇನೆ. ನನಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದಷ್ಟೇ ಮುಖ್ಯ. ಜೆಡಿಎಸ್ ಜೊತೆಗೆ ಮನಸ್ಥಾಪ ಎನ್ನುವುದೆಲ್ಲ ಬೇರೆಯವರ ಅನಿಸಿಕೆಯಷ್ಟೇ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ತತ್ವ, ಸಿದ್ದಾಂತವನ್ನು ಇಟ್ಟುಕೊಂಡಿರುವ ಪಕ್ಷವಾಗಿದೆ. ನಮ್ಮದು ಕಾರ್‍ಯಕರ್ತರ ಪಕ್ಷ. ಮಂಡ್ಯದಲ್ಲಿ ಪಕ್ಷವನ್ನು ಚುನಾವಣಾ ವೇಳೆಗೆ ಗಟ್ಟಿಗೊಳಿಸಬೇಕು. ಮೊದಲು ನಾವು ನೆಂಟಸ್ಥಿಕೆಯನ್ನು ಬಿಡಬೇಕು. ಮೊದಲು ದೇಶ. ಆನಂತರ ಪಕ್ಷ ಎನ್ನಬೇಕು. ಕುಟುಂಬ ರಾಜಕಾರಣದ ವಿರುದ್ಧ ಯಾವಾಗಲೂ ನಮ್ಮ ಸಂಕಲ್ಪವಿರುತ್ತದೆ. ಮಂಡ್ಯದಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಇದು ದೇಶದ ದೊಡ್ಡ ಪಿಡುಗಾಗಿ ಕಾಡುತ್ತಿದೆ ಎಂದು ವಿಷಾದಿಸಿದರು.

ಪ್ರಾದೇಶಿಕ ಪಕ್ಷಗಳಲ್ಲೂ ಕುಟುಂಬ ರಾಜಕಾರಣವನ್ನು ನಾವು ಕಾಣುತ್ತಿದ್ದೇವೆ. ಈ ಬಗ್ಗೆ ಮೋದಿಯವರೂ ಕೂಡ ಹೇಳಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಕುಟುಂಬ ರಾಜಕಾರಣ ಇದೆ. ಆದರೆ, ನಮ್ಮ ರಾಜ್ಯದ ಬಗ್ಗೆ ಹೇಳುವುದು ಬೇಡ, ಅದು ನಿಮಗೂ ಗೊತ್ತಿದೆ ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಟಾಂಗ್ ನೀಡಿದರು.

ಈ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಕೆ.ರಾಮ್‌ದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.