ಸಿಎಂ ಬದಲಾವಣೆ, ನಾಯಕತ್ವ ಗೊಂದಲಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಹಸ್ಯ ಮಾತುಕತೆ ನಡೆಸಿದ್ದು, ಈ ''ಹೈ ವೋಲ್ಟೇಜ್'' ರಹಸ್ಯ ಸಭೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಮಂಗಳೂರು : ಸಿಎಂ ಬದಲಾವಣೆ, ನಾಯಕತ್ವ ಗೊಂದಲಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಹಸ್ಯ ಮಾತುಕತೆ ನಡೆಸಿದ್ದು, ಈ ''''ಹೈ ವೋಲ್ಟೇಜ್'''' ರಹಸ್ಯ ಸಭೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮಂಗಳೂರು ವಿವಿಯ ಗೆಸ್ಟ್ ಹೌಸ್‌ನಲ್ಲಿ ಈ ರಹಸ್ಯ ಮಾತುಕತೆ ನಡೆಯಿತು.
ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ
ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ಬುಧವಾರ ನಡೆದ ಗಾಂಧಿ-ನಾರಾಯಣಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವೇಣುಗೋಪಾಲ್ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ವಿವಿಯ ಗೆಸ್ಟ್‌ಹೌಸ್‌ನಲ್ಲಿ ಸಿದ್ದರಾಮಯ್ಯ ಜೊತೆ ಅವರು ರಹಸ್ಯ ಸಭೆ ನಡೆಸಿದರು. ಸಿದ್ದರಾಮಯ್ಯ-ಡಿಕೆಶಿ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ನಂತರ ನಡೆದ ಮೊದಲ ಸಭೆ ಇದಾಗಿದ್ದು, ಸುಮಾರು 15 ನಿಮಿಷಗಳ ಕಾಲ ಉಭಯ ನಾಯಕರ ನಡುವೆ ರಹಸ್ಯ ಮಾತುಕತೆ ನಡೆಯಿತು. ಈ ವೇಳೆ, ಸಿಎಂ ಬದಲಾವಣೆ, ಅದರ ಸಾಧಕ-ಬಾಧಕಗಳ ಕುರಿತು ಮಹತ್ವದ ಮಾತುಕತೆ ನಡೆಯಿತು ಎಂದು ತಿಳಿದು ಬಂದಿದೆ.
ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ವೇಣುಗೋಪಾಲ್ ಜತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು. ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿ, ‘ಡಿಕೆಶಿ ದೆಹಲಿಗೆ ಹೋದರೆ ಹೋಗಲಿ. ಬೇಡ ಅಂದವರು ಯಾರು?. ಆದರೆ, ನಾನು ದೆಹಲಿಗೆ ಹೋಗಲ್ಲ. ದೆಹಲಿಯ ನಾಯಕರು ಕರೆದರೆ ಮಾತ್ರ ಹೋಗುವೆ. ಆದರೆ, ನನ್ನನ್ನು ಈವರೆಗೆ ಕರೆದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮಧ್ಯಾಹ್ನ ಲಂಚ್ ಪಾಲಿಟಿಕ್ಸ್:
ಈ ಮಧ್ಯೆ, ಕಾರ್ಯಕ್ರಮ ಮುಗಿದ ಬಳಿಕ, ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಸಿಎಂ, ಸಚಿವರು, ವೇಣುಗೋಪಾಲ್ ಅವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇವಲ 12 ನಾಯಕರಿಗೆ ಮಾತ್ರ ಸೀಟಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಪ್ರವೇಶವಿರಲಿಲ್ಲ. ಗೆಸ್ಟ್ ಹೌಸ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆಯೂ ವೇಣುಗೋಪಾಲ್ ಅವರು ಸಿಎಂ ಹಾಗೂ ಸಚಿವರ ಜೊತೆ ರಾಜ್ಯ ರಾಜಕಾರಣ, ಸಂಬಂಧಿಸಿದ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
ಊಟ ಮುಗಿಸಿ ವೇಣುಗೋಪಾಲ್ ಅವರು ಕಾಸರಗೋಡಿಗೆ ಪ್ರಯಾಣಿಸಿದರೆ, ಸಿಎಂ ಹಾಗೂ ಇತರ ಸಚಿವರು ಸ್ಥಳೀಯ ಇನ್ನೊಂದು ಕಾರ್ಯಕ್ರಮಕ್ಕೆ ಹಾಜರಾದರು.
ಗಾಂಧಿ - ನಾರಾಯಣ ಗುರು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ದು, ವೇಣು ಆಗಮನ
ಕಾರ್ಯಕ್ರಮಕ್ಕೂ ಮುನ್ನ ಮಂಗಳೂರು ವಿವಿ ಗೆಸ್ಟ್‌ಹೌಸ್‌ನಲ್ಲಿ ಇಬ್ಬರೂ ನಾಯಕರ ಗೌಪ್ಯ ಚರ್ಚೆ
ಈ ವೇಳೆ ನಾಯಕತ್ವ ಬದಲಾವಣೆ, ಅದರ ಸಾಧಕ, ಬಾಧಕಗಳ ಕುರಿತು ಚರ್ಚೆ ನಡೆದ ಗುಸುಗುಸು
ಕಾರ್ಯಕ್ರಮದ ಬಳಿಕ ನಡೆದ ಭೋಜನದ ವೇಳೆಯೂ ಮತ್ತೆ ಸಿದ್ದರಾಮಯ್ಯ, ವೇಣು ಸಮಾಲೋಚನೆ