ಸಾರಾಂಶ
ನವದೆಹಲಿ: ಬಹುಮತಕ್ಕೆ ಕೊರತೆ ಎದುರಿಸುತ್ತಿರುವ ಬಿಜೆಪಿ ಸದ್ಯ ಟಿಡಿಪಿ ಮತ್ತು ಜೆಡಿಯು ಬೆಂಬಲದೊಂದಿಗೆ ಸರ್ಕಾರ ರಚಿಸುತ್ತಿದೆ. ಅದರದ್ದು ತಂತಿಯ ಮೇಲಿನ ನಡಿಗೆ. ಹೀಗಾಗಿ ಅದು ಇಂಡಿಯಾ ಕೂಟದಲ್ಲಿ ಹೊರಗಿರುವ ಪಕ್ಷ/ ಸದಸ್ಯರ ಬೆಂಬಲದ ಮೂಲಕ ಕೂಟದ ಬಲ 300ರ ಗಡಿದಾಟಿಸಲು ಯತ್ನಿಸುತ್ತಿದೆ. ಆದರೆ ಈ ಲೆಕ್ಕಾಚಾರ ಫಲಿಸುವುದೇ?
543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿಯ 240 ಸೇರಿ ಎನ್‌ಡಿಎ ಕೂಟ 293 ಸ್ಥಾನ ಹೊಂದಿದೆ. ಇಂಡಿಯಾ ಮೈತ್ರಿಕೂಟ 234 ಸ್ಥಾನ ಬಲ ಹೊಂದಿದೆ. ಉಳಿದ 16 ಸ್ಥಾನಗಳ ಪೈಕಿ 7 ಪಕ್ಷೇತರರು, ವೈಎಸ್‌ಆರ್ ಕಾಂಗ್ರೆಸ್ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳಿವೆ.
ಈ ಪೈಕಿ ಎನ್‌ಡಿಎ ಕೂಟ ಬೆಂಬಲಿಸಬಹುದಾದ ವೈಎಸ್‌ಎಸ್‌ಆರ್ ಕಾಂಗ್ರೆಸ್ 4 ಸ್ಥಾನ ಹೊಂದಿದೆ. ಆದರೆ ಸರ್ಕಾರದಲ್ಲಿ ಟಿಡಿಪಿ ಇರುವಾಗ ವೈಎಸ್‌ಆರ್ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇಲ್ಲ. ಇನ್ನು 7 ಪಕ್ಷೇತರರ ಪೈಕಿ ಒಬ್ಬ ಪಂಜಾಬ್ ಮಾಜಿ ಸಿಎಂ ಬೇಅಂತ್ ಸಿಂಗ್ ಅವರ ಹಂತಕನ ಪುತ್ರ, ಮತ್ತೊಬ್ಬ ಖಲಿಸ್ತಾನಿ ಉಗ್ರ, ಮಗದೊಬ್ಬ ದೇಶದ್ರೋಹದ ಕೇಸಲ್ಲಿ ಬಂಧಿತ ವ್ಯಕ್ತಿ. ಇವರ ಬೆಂಬಲ ಎನ್‌ಡಿಎಗೆ ಸಿಗುವುದೂ ಇಲ್ಲ, ನೀಡಿದರೂ ಬಿಜೆಪಿ ಒಪ್ಪುವುದು ಕಷ್ಟ. ಇನ್ನು ಹೈದ್ರಾಬಾದ್‌ನ ಎಂಐಎ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಮೋದಿ ಪ್ರಧಾನಿಯಾಗದೇ ಇದ್ದರೆ ಎನ್‌ಡಿಎ ಬೆಂಬಲಿಸುವುದಾಗಿ ಹೇಳಿದ್ದಾರೆ. ಅದೂ ಆಗದ ಹೋಗದ ಮಾತ್ರ. ಹೀಗಾಗಿ ಏನೇ ಮಾಡಿದರೂ ಎನ್‌ಡಿಎ 300ರ ಗಡಿ ದಾಟುವುದು ಕಷ್ಟ ಎನ್ನಲಾಗುತ್ತಿದೆ.