ನರೇಂದ್ರಸ್ವಾಮಿ ಅವರು ಮೂರು ಬಾರಿ ಕ್ಷೇತ್ರದ ಶಾಸಕರಾಗಿದ್ದಾರೆ. ಒಮ್ಮೆ ಸಚಿವರಾಗಿಯೂ ಆಡಳಿತ ನಡೆಸಿದ ಅನುಭವವಿದೆ. ಶಾಸಕರಾಗಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಬೆಂಬಲ ನೀಡಿದಂತಾಗುತ್ತದೆ.
ಮಳವಳ್ಳಿ : ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕ್ಷೇತ್ರದ ನೂರಾರು ಬೆಂಬಲಿಗರು ಹಾಗೂ ಅಭಿಮಾನಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಕನಕಪುರಕ್ಕೆ ದೌಡಾಯಿಸಿದರು.
ನೂರಾರು ಬೆಂಬಲಿಗರು ಸ್ಥಾನಕ್ಕೆ ಮನವಿ
ಸ್ವಕ್ಷೇತ್ರದ 20 ಗ್ರಾಪಂಗಳಲ್ಲಿ ಭಾನುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರವಾಸ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಬಳಿಯಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ನೂರಾರು ಬೆಂಬಲಿಗರು ಕನಕಪುರ ತಾಲೂಕಿನ ಹೇರಂದ್ಯಾಪನಹಳ್ಳಿ ಬಳಿ ಸಿಎಂ ಅವರನ್ನು ಭೇಟಿಯಾಗಿ ಶುಭ ಕೋರಿ ಸಚಿವ ಸ್ಥಾನಕ್ಕೆ ಮನವಿ ಮಾಡಿದರು.
ನರೇಂದ್ರಸ್ವಾಮಿ ಅವರು ಮೂರು ಬಾರಿ ಕ್ಷೇತ್ರದ ಶಾಸಕರಾಗಿದ್ದಾರೆ. ಒಮ್ಮೆ ಸಚಿವರಾಗಿಯೂ ಆಡಳಿತ ನಡೆಸಿದ ಅನುಭವವಿದೆ. ಶಾಸಕರಾಗಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಬೆಂಬಲ ನೀಡಿದಂತಾಗುತ್ತದೆ ಎಂದು ನರೇಂದ್ರ ಸ್ವಾಮಿ ಸಚಿವ ಸ್ಥಾನ ನೀಡುವಂತೆ ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ನಾಯಕರಲ್ಲಿ ಮನವಿ ಮಾಡಿದರು.
2013ರಲ್ಲಿ ಸಿಗಬೇಕಿತ್ತು
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ದಲಿತ ಕೋಟಾದಲ್ಲಿ ಅವರಿಗೆ ಸಿಗಲಿಲ್ಲ. 2023ರಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ನಿರೀಕ್ಷೆ ಹುಸಿಯಾಯಿತು. ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡು, ಆಡಳಿತದ ಅನುಭವವನ್ನು ಹೊಂದಿರುವ ನರೇಂದ್ರಸ್ವಾಮಿ ಅವರಿಗೆ ಮಂತ್ರಿಸ್ಥಾನ ದೊರಕಿಸಿಕೊಡುವಂತೆ ಕೋರಿದರು.
ಈ ವೇಳೆ ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಸತೀಶ್, ದಿಲೀಪ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ಕಂದೇಗಾಲ ಶ್ರೀನಿವಾಸ್, ಸಿ.ವೇದಮೂರ್ತಿ, ಸಿ.ಮಾದು, ಪುಟ್ಟಸ್ವಾಮಿ, ಕುಂದೂರು ಪ್ರಕಾಶ್, ಶಿವಕುಮಾರ್, ಪೇಟೆ ರವಿ, ಶಶಿರಾಜ್, ಎಂ.ಎನ್.ಜಯರಾಜು, ಪೂರಿಗಾಲಿ ದೀಪು, ಪ್ರಸನ್ನ, ಮಹದೇವಸ್ವಾಮಿ, ಚೇತನ್ , ಕೃಷ್ಣ, ಶಾಂತರಾಜು ಮತ್ತಿತರರು ಪಾಲ್ಗೊಂಡಿದ್ದರು.