ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರ ರೈತರಿಗೆ ಬರ ಪರಿಹಾರ ಕೊಟ್ಟಿಲ್ಲ, ರೈತರ ಸಂಕಷ್ಟಕ್ಕೂ ಸ್ಪಂದಿಸಿಲ್ಲ. ಇದರ ಪರಿಣಾಮ ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಆರಂಭವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಬರಗಾಲವಿದೆ. ಒಂದು ಸಾವಿರಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ನಿರ್ಲಕ್ಷ್ಯ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ರೈತರಿಗೆ ಆರ್ಥಿಕ ಶಕ್ತಿಯನ್ನು ಕೊಟ್ಟಿದ್ದರು. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ೫೦ ಸಾವಿರ ರು., ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ಜಾನುವಾರು ಕುಟುಂಬಕ್ಕೂ ಆರ್ಥಿಕ ಬಲ ತುಂಬಿದ್ದವರು ಕುಮಾರಸ್ವಾಮಿ. ತಾವು ಅಧಿಕಾರಕ್ಕೆ ಬಂದ ಸಮಯದಲ್ಲಿ ರೈತರನ್ನು ಸಾಲಮುಕ್ತರನ್ನಾಗಿ ಮಾಡಲು ಸಾಲ ಮನ್ನಾ ಯೋಜನೆ ಜಾರಿಗೊಳಿಸಿ ರೈತರ ಆತ್ಮಹತ್ಯೆಯನ್ನು ತಡೆದಿದ್ದರು ಎಂದರು.೨೦೧೯ರಲ್ಲಿ ರಾಜಕೀಯ ಅನುಭವ ಇರಲಿಲ್ಲ, ಚುನಾವಣೆಗೆ ಸ್ಪರ್ಧೆ ಮಾಡಿದೆ, ಆ ಚುನಾವಣೆಯಲ್ಲಿ ೫.೭೫ ಲಕ್ಷ ಜನ ಆಶೀರ್ವಾದ ಮಾಡಿದರು. ನಾನು ಎಂದಿಗೂ ಆ ಋಣ ತೀರಿಸುವ ಕೆಲಸ ಮಾಡುವುದಾಗಿ ಹೇಳಿದ ಅವರು, ಈ ಬಾರಿ ದೇವೇಗೌಡರ ಕಾಲು ಕಟ್ಟಿಕೊಂಡು ಮಂಡ್ಯ ಲೋಕಸಭೆಗೆ ಸ್ಪರ್ಧಿಸುವಂತೆ ಹಠ ಮಾಡಿದೆ. ನೀವು ಅರ್ಜಿ ಹಾಕಿ ಹೋಗಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದೂ ಹೇಳಿದೆ. ಆದರೆ, ಅವರು ೯೧ರ ವಯಸ್ಸಿನಲ್ಲಿ ಸ್ಪರ್ಧೆ ಆಸಕ್ತಿ ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ಈಗಾಗಲೇ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ೨೫ ವರ್ಷದಿಂದ ಏಕಾಂಗಿಯಾಗಿ ಹೋರಾಟ ಮಾಡಿದ್ದಾರೆ. ನಾನು ಮಂಜುನಾಥನ ಭಕ್ತ. ಆ ಈಶ್ವರನಬನ್ನು ಪ್ರಾರ್ಥನೆ ಮಾಡುತ್ತೇನೆ. ನನ್ನ ಆಯಸ್ಸನ್ನೂ ತಂದೆಯವರಿಗೆ ಧಾರೆ ಎರೆದು ಕುಮಾರಸ್ವಾಮಿ ಅವರಿಗೆ ಅಧಿಕಾರ ನಡೆಸುವ ಶಕ್ತಿ ಕೊಡಲಿ ಎಂದು ಭಾವುಕರಾಗಿ ಹೇಳಿದರು.೨೦೧೯ರ ಸೋಲಿನ ಬಗ್ಗೆ ಇಂದಿಗೂ ಮನಸ್ಸಿನಲ್ಲಿರುವ ನೋವು ಕಡಿಮೆಯಾಗಿಲ್ಲ. ನನ್ನ ಎದುರಾಳಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಎಲ್ಲರೂ ಕೈಜೋಡಿಸಿ ಸಂಚುರೂಪಿಸಿ ಕುಮಾರಸ್ವಾಮಿ ಅವರ ಸರ್ಕಾರ ಕೆಡವಲು ನನ್ನನ್ನು ಸೋಲಿಸಿದರು. ಆದರೆ, ನನಗೆ ಅರ್ಥವಾಗದಿರುವ ವಿಚಾರವೆಂದರೆ ಮಂಡ್ಯದಲ್ಲಿ ನಡೆದ ಗ್ಯಾರಂಟಿ ಸಮಾವೇಶದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಲತಾ ಗೆಲುವಿಗೆ ಕಾಂಗ್ರೆಸ್ ಮತಗಳು ಕಾರಣ ಎಂದು ಹೇಳಿದರೆ, ಡಿ.ಕೆ. ಶಿವಕುಮಾರ್ ನಾನು ಪ್ರಾಮಾಣಿಕವಾಗಿ ಜೋಡೆತ್ತುಗಳಾಗಿ ನಿಂತು ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೆ ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮಗೆ ಈ ಹೇಳಿಗೆ ಶೋಭೆ ತರುವುದಿಲ್ಲ ಎಂದರು.
ನಾನು ಯಾವಾಗ ಎಂಪಿ ಆಗಬೇಕೆಂದು ದೇವರು ನನ್ನ ಹಣೆಯಲ್ಲಿ ಬರೆದಿದ್ದಾನೋ ಆಗ ಆಗೇ ಆಗುತ್ತೇನೆ. ದೇವರು ಹಣೆಬರಹ ಬರೆದು ಕಳುಹಿಸುತ್ತಾನೆ. ಅದನ್ನು ಪಡೆಯುವುದಕ್ಕೆ ಯೋಗ್ಯತೆ ಸಂಪಾದಿಸಬೇಕು. ಆ ಯೋಗ-ಯೋಗ್ಯತೆ ಬರುವವರೆಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಸ್ವಾಭಿಮಾನದ ಹೆಸರಿನಲ್ಲಿ ಮೋಸ ಮಾಡಲಾರೆ ಎಂದು ಸುಮಲತಾಗೆ ಟಾಂಗ್ ಕೊಟ್ಟರು.