ಸಾರಾಂಶ
ಕಾವೇರಿಗಾಗಿ ರಾಜಕೀಯವಾಗಿ ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಮೊದಲಿಗರಿದ್ದರೆ ಅದು ದೇವೇಗೌಡರು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಾಂಡವಪುರ : ಕಾವೇರಿಗಾಗಿ ರಾಜಕೀಯವಾಗಿ ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಮೊದಲಿಗರಿದ್ದರೆ ಅದು ದೇವೇಗೌಡರು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದ ಎದುರು ಭಾನುವಾರ ನಡೆದ ನಾಗರೀಕ ಸನ್ಮಾನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದಿದ್ದಾರಲ್ಲ, ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸಲಿ ನನ್ನ ಸ್ನೇಹಿತರು ಸಲಹೆ ನೀಡಿದ್ದಾರೆ. ಅವರನ್ನು ನನ್ನ ಸ್ನೇಹಿತರು ಅಂತಲೂ ಹೇಳಬಾರದು ನಾನು. ನಾನಿನ್ನೂ ಮಂತ್ರಿಯಾಗಿ ಒಂದು ತಿಂಗಳಾಗಿಲ್ಲ. ೧೨೦ ವರ್ಷದ ಸಮಸ್ಯೆಯನ್ನು ಒಂದೇ ಬಾರಿಗೆ ಬಗೆಹರಿಸಿಬಿಡಿ ಎಂದರೆ ಹೇಗೆ ಎಂದು ಸಚಿವ ಚಲುವರಾಯಸ್ವಾಮಿ ಹೆಸರೇಳದೆ ಪ್ರಶ್ನಿಸಿದರು.
ನನಗೆ ಸಲಹೆ ಕೊಡುವುದಾದರೆ ಜನರು ನಿಮಗೆ ಅಧಿಕಾರ ಕೊಟ್ಟಿರುವುದು ಏಕೆ. ವರ್ಗಾವಣೆ ದಂಧೆಯಲ್ಲಿ ಹಣ ಮಾಡುವುದಕ್ಕಾ, ಎಸ್ಸಿ, ಎಸ್ಟಿಯವರಿಗೆ ಸೇರಿದ ೧೮೭ ಕೋಟಿ ರು. ಹಣ ಲೂಟಿ ಹೊಡೆದು ರಾಜರೋಷವಾಗಿ ಓಡಾಡುವುದಕ್ಕಾ ಎಂದು ಖಾರವಾಗಿ ಹೇಳಿದ ಕುಮಾರಸ್ವಾಮಿ, ನಿಮ್ಮಂತೆ ಭಂಡತನದ ರಾಜಕಾರಣವನ್ನು ನಾನು ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ನೋವು ನುಂಗಿ ಬದುಕಿದ್ದಾರೆ:
ಜೆಡಿಎಸ್ ನಿರ್ನಾಮ ಮಾಡಿದ್ದೇವೆ ಎಂಬ ನಿಮ್ಮ ಅಹಂಕಾರದ ಮಾತುಗಳು ನನ್ನನ್ನು ಲೋಕಸಭೆಗೆ ಸ್ಪರ್ಧಿಸುವಂತೆ ಪ್ರಚೋದಿಸಿತು. ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಂದೆ ಮಂಡಿಯೂರಿಸಿದ್ದಾರೆ ಬನ್ನಿ ನಮ್ಮ ಪಕ್ಷಕ್ಕೆ ಎಂದು ಕನಕಪುರದ ಸ್ನೇಹಿತರು ಹೇಳಿದ್ದರು. ಜೆಡಿಎಸ್ ಪಕ್ಷ ಕಟ್ಟಿದ್ದು ದೇವೇಗೌಡರು. ೯೦ನೇ ವಯಸ್ಸಿನಲ್ಲಿ ಇಂತಹ ಘಟನೆಗಳು, ನೋವಿನ ನಡುವೆ ರಾಜ್ಯದ ಅಭಿವೃದ್ಧಿ ಮಾಡಬೇಕೆಂಬ ಆಸೆ ಅವರ ಹೃದಯದಲ್ಲಿದೆ. ನನ್ನ ಬಗ್ಗೆ ಎಷ್ಟಾದರೂ ಮಾತನಾಡಿ ದೇವೇಗೌಡರ ಬಗ್ಗೆ ಲಘು ಮಾತುಗಳನ್ನು ಆಡಬೇಡಿ. ದೇವೇಗೌಡರು ನೋವುಗಳನ್ನು ನುಂಗಿ ಬದುಕುತ್ತಿದ್ದಾರೆ. ಈ ವಯಸ್ಸಿನಲ್ಲೂ ದೇವೇಗೌಡರು ಬದುಕಿದ್ದಾರೆ ಎಂದರೆ ಜನರ ಆಶೀರ್ವಾದವೇ ಕಾರಣ ಎಂದು ನುಡಿದರು.
ಅಭಿವೃದ್ಧಿಗೆ ರಾಜ್ಯ ಸರ್ಕಾರದ ಸಹಕಾರವಿಲ್ಲ:
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ. ರಾಜ್ಯದ ಅಭಿವೃದ್ಧಿಗಾಗಿ ನನ್ನ ಸಹಕಾರ ಇದೆ, ಉಪಯೋಗ ಮಾಡಿಕೊಳ್ಳಿ ಎಂದರೆ ನನ್ನ ಜನತಾದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ನಿರ್ಬಂಧ ಮಾಡಿದರು. ಕಾಂಗ್ರೆಸ್ ಸರ್ಕಾರ ಸಣ್ಣತನದ ರಾಜಕಾರಣ ಮಾಡುತ್ತಿದೆ. ಇವತ್ತು ಸರ್ವಪಕ್ಷ ಸಭೆ ಕರೆದಿದ್ದಾರೆ. ಆದರೆ, ರಾಜ್ಯದ ಅಧಿಕಾರಿಗಳ ಜೊತೆ ನನಗೆ ಮಾತನಾಡಲು ಅಧಿಕಾರ ಇಲ್ಲವೆಂದಾದರೆ ರಾಜ್ಯದ ಪರವಾಗಿ ಹೇಗೆ ಕೆಲಸ ಮಾಡಲಿ ಎಂದು ಪ್ರಶ್ನಿಸಿದರು.
ನಾನು ಕೇಂದ್ರ ಕೃಷಿ ಮಂತ್ರಿಯಾಗಬೇಕೆನ್ನುವುದು ಜನರ ಬಯಕೆಯಾಗಿತ್ತು. ಆದರೆ, ನಾನು ಕೃಷಿ ಸಚಿವನಾಗಲು ಸಾಧ್ಯವಾಗಲಿಲ್ಲ. ನನಗೂ ಆ ನೋವಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಇದು ನನ್ನ ಮನಸ್ಸಿನ ನೋವನ್ನು ಹೆಚ್ಚಿಸಿದೆ ಎಂದು ಭಾವುಕರಾಗಿ ಹೇಳಿದರು.
ವಾರದಲ್ಲಿ ಎರಡು ದಿನ ಕಾರ್ಯನಿರ್ವಹಣೆ:
ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಬಿ.ಎನ್.ಕೃಷ್ಣಯ್ಯ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದೇನೆ. ಅವರು ನಿಮ್ಮ ಸಮಸ್ಯೆ ಆಲಿಸಿ ನನ್ನ ಗಮನಕ್ಕೆ ತರುತ್ತಾರೆ. ಪ್ರತಿ ಮಂಗಳವಾರ, ಬುಧವಾರ ಸಂಸದರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಧಾನ ಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ಹೆಸರಿಗೆ ಭಾರೀ ಕೈಗಾರಿಕಾ ಖಾತೆ ಅನ್ನೋದು ಇದೆ. ಆದರೆ, ಭಾರೀ ಕೈಗಾರಿಕೆಯಲ್ಲಿ ಏನಿದೆ ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ ಎಂದರು.
ನನ್ನೆದುರು ಸವಾಲುಗಳಿವೆ:
ಇನ್ನು ಉಕ್ಕು ಖಾತೆಯಲ್ಲಿ ಬದಲಾವಣೆ ತರಬೇಕಿದೆ. ದುಬಾರಿ ವಾಚ್ ತಯಾರಿಸುತ್ತಿದ್ದ ಎಚ್‌ಎಂಟಿ ಕಂಪನಿ ೧೯೭೦ರಲ್ಲೇ ೨೫೦ ಕೋಟಿ ರು. ಲಾಭದಲ್ಲಿತ್ತು. ಇವತ್ತಿಗೆ ಲೆಕ್ಕಹಾಕಿದರೆ 20 ಸಾವಿರ ಕೋಟಿ ರು. ಲಾಭ. ಆದರೆ, ಪ್ರಸ್ತುತ ಆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಮಹಾರಾಜರು ನಿರ್ಮಾಣ ಮಾಡಿದ ಭದ್ರಾವತಿ ಕಾರ್ಖಾನೆಯಲ್ಲಿ ೧೩೦೦೦ ಜನ ಕೆಲಸ ಮಾಡುತ್ತಿದ್ದರು. ಈಗ ೨೦೦ರಿಂದ ೩೦೦ ಜನ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಸವಾಲುಗಳು ನನ್ನ ಮುಂದಿವೆ ಎಂದು ವಿವರಿಸಿದರು.
ಆರ್ಥಿಕ ನೆರವು ಕೋರಿಕೊಂಡು ಬಂದು ಅರ್ಜಿ ಕೊಟ್ಟವರು ನಿರಾಸೆ ಆಗಬೇಡಿ. ಯಾರಾದರೂ ಕಷ್ಟ ಹೇಳಿಕೊಂಡು ಬಂದಾಗ ನನ್ನ ಬಳಿ ಇದ್ದರೂ, ಇಲ್ಲದಿದ್ದರೂ ಕೈಲಾದ ಸಹಾಯ ಮಾಡಿದ್ದೇನೆ. ಮನೆ ಕಟ್ಟಲೋ, ಕೃಷಿ ಭೂಮಿ ಅಭಿವೃದ್ಧಿಗೆ ಬ್ಯಾಂಕ್ ಸಾಲ ಮಾಡಿ ನನ್ನನ್ನು ತೀರಿಸು ಎಂದರೆ ಎಲ್ಲಿ ಆಗುತ್ತದೆ. ಆ ಸಾಲ ತೀರಿಸಲು ಮುಂದೆ ದೇವರು ಶಕ್ತಿ ಕೊಡುತ್ತಾನೆ ಎಂಬ ನಂಬಿಕೆ ನನಗಿದೆ ಎಂದರು.