ಸಾರಾಂಶ
ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೆ ಸಮಿತಿ ರಚನೆ ಮಾಡಿದೆ. ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಈ ಹಿಂದೆ ಅನೇಕ ಸಮಿತಿಗಳು ರಚನೆಯಾಗಿದ್ದು, ವರದಿಗಳೂ ಮಂಡನೆಯಾಗಿವೆ.
ಚಿಕ್ಕಬಳ್ಳಾಪುರ : ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೆ ಸಮಿತಿ ರಚನೆ ಮಾಡಿದೆ. ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಈ ಹಿಂದೆ ಅನೇಕ ಸಮಿತಿಗಳು ರಚನೆಯಾಗಿದ್ದು, ವರದಿಗಳೂ ಮಂಡನೆಯಾಗಿವೆ. ಆದರೆ ಯಾವ ವರದಿಯೂ ಜಾರಿಯಾಗಿಲ್ಲ ಎಂದು ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಸರ್ಕಾರ ಮತ್ತೆ ರಚಿಸಿರುವ ಸಮಿತಿಯೂ ಅದೇ ಹಾದಿ ಹಿಡಿಯುವ ಸಾಧ್ಯತೆ ಇದೆ. ಇದು ಉಪ ಚುನಾವಣೆಯಲ್ಲಿ ಕಣ್ಣೊರೆಸುವ ತಂತ್ರ ಯಾಕಾಗಿರಬಾರದು ಎಂಬ ಸಂಶಯ ಉಂಟಾಗಿದೆ ಎಂದರು.
ವರದಿ ಬರುವವರೆಗೆ ಕಾಯಬೇಕು
ಹಾಗಾಗಿ ದಲಿತ ಸಮುದಾಯಗಳು ಪ್ರಸ್ತುತ ರಾಜ್ಯ ಸರ್ಕಾರ ರಚನೆ ಮಾಡಿರುವ ಸಮಿತಿ ವರದಿ ಬರುವವರೆಗೂ ಕಾಯಬೇಕಿದೆ. ಅದು ಮೂರು ತಿಂಗಳಲ್ಲಿಯೇ ಬರಲಿದೆಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ 2005ರಲ್ಲಿ ಧರ್ಮಸಿಂಗ್ ನೇತೃತ್ವದ ರಾಜ್ಯ ಸರ್ಕಾರ ನ್ಯಾ.ಎ.ಜೆ. ಸದಾಶಿವ ಆಯೋಗ ರಚಿಸಿತ್ತು. 2005ರಲ್ಲಿ ರಚನೆಯಾದ ಆಯೋಗ 2012ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ನಂತರ ಅನೇಕ ಮಂದಿ ಮುಖ್ಯಮಂತ್ರಿಗಳು, ಹಲವು ಸರ್ಕಾರಗಳು ಬಂದು ಹೋದರೂ ವರದಿ ಮಾತ್ರ ಜಾರಿಯಾಗಿಲ್ಲ. ಹಾಗಾಗಿಯೇ ಸಮಿತಿ ರಚನೆಯಿಂದಲೇ ಒಳ ಮೀಸಲಾತಿ ಸಿಕ್ಕಂತಲ್ಲ ಎಂಬುದು ನನ್ನ ಆತಂಕವಾಗಿದೆ.
ಪರಿಶಿಷ್ಟ ಪಟ್ಟಿಯಲ್ಲಿರುವ 101ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು, ಪರಿಶಿಷ್ಟ ಜಾತಿಗೆ ಈಗ ಇರುವ ಶೇ 15 ರಷ್ಟು ಮೀಸಲಾತಿಯಲ್ಲಿ ಮೊದಲ ಗುಂಪಿಗೆ ಶೇ 6, ಎರಡನೇ ಗುಂಪಿಗೆ ಶೇ 5, ಮೂರನೇ ಗುಂಪಿಗೆ ಶೇ 3 ಹಾಗೂ ನಾಲ್ಕನೇ ಗುಂಪಿಗೆ ಶೇ 1ರಷ್ಟು ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಬಗ್ಗೆ ತಿದ್ದುಪಡಿ ತರಬೇಕು ಎಂದೂ ನ್ಯಾ.ಎ.ಜೆ. ಸದಾಶಿವ ಆಯೋಗ ಶಿಫಾರಸು ಮಾಡಿದೆ.4-5 ಮಂದಿ ಮಾತ್ರ ಹೇಳಿಕೆ
ಮೀಸಲಾತಿ ವಿಂಗಡಣೆಗೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ಆಗಿನ ಪರಿಶಿಷ್ಟ ಜಾತಿಯ ಎಲ್ಲ ಶಾಸಕರಿಗೆ ನ್ಯಾ.ಎ.ಜೆ. ಸದಾಶಿವ ಆಯೋಗ ಪತ್ರ ಬರೆದಿದ್ದರೂ ಎಚ್. ಆಂಜನೇಯ, ಪ್ರಕಾಶ ರಾಥೋಡ್, ಜಲಜಾ ನಾಯಕ್ ಮತ್ತು ಮಲ್ಲಾಜಮ್ಮ ಮಾತ್ರ ಆಯೋಗದ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
2023ರಲ್ಲಿ ಆಗಿನ ಬಿಜೆಪಿ ಸರ್ಕಾರ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮುಂದಾಗಿ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿತ್ತು. ಅದೂ ಕಣ್ಣೊರೆಸುವ ತಂತ್ರವೇ ಆಯಿತು. ಇನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಇಲ್ಲವೇ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೂವರೆ ವರ್ಷ ಕಳೆದರೂ ಅದರ ಕಡೆ ಗಮನ ಹರಿಸಿಲ್ಲ. ಈ ಗ ಮತ್ತೊಂದು ಸಮಿತಿ ರಚಿಸಿದ್ದಾರೆ ಎಂದು ಟೂಕಿಸಿದರು.ಬೀಸುವ ದೊಣ್ಣೆ ತಪ್ಪಿದೆ:
ಈಗ ಉಪ ಚುನಾವಣೆ ಜೊತೆಗೆ ಒಳ ಮೀಸಲಾತಿ ಹೋರಾಟ ತೀವ್ರವಾಗುತ್ತಿದ್ದಂತೆ ಮತ್ತೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೆ ಸಮಿತಿ ರಚನೆ ಮಾಡಿ, ಮೂರು ತಿಂಗಳ ಗಡುವು ನೀಡಿದ್ದಾರೆ. ಮೂರು ತಿಂಗಳಲ್ಲಿ ಉಪ ಚುನಾವಣೆ ಮುಗಿದಿರುತ್ತೆ. ಮತ್ತೆ ಸಮಿತಿ ಕಾಲಾವಕಾಶ ಕೋರಿದರೆ ವಿಸ್ತರಣೆಯಾಗಲಿದೆ. ಒಳ ಮೀಸಲಾತಿ ಎಂಬುದು ಮತ್ತೆ ಗಗನ ಕುಸುಮವಾಗಲಿದೆ ಎಂಬುದರಲ್ಲಿ ಯಾವ ಗ್ಯಾರೆಂಟಿ ಇದೆ. ಹಾಗಾಗಿ ಒಳ ಮೀಸಲಾತಿ ಹೋರಾಟ ನಿಲ್ಲಿಸಿ ಉಪ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ಧೇಶದಿಂದಲೆ ಈಗ ಮತ್ತೊಂದು ಸಮಿತಿ ರಚನೆ ಮಾಡಲಾಗಿದೆ.