ಚನ್ನಪಟ್ಟಣ : ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ - ಮಾಜಿ ಸಂಸದ ಡಿ.ಕೆ. ಸುರೇಶ್

| Published : Nov 01 2024, 12:02 AM IST / Updated: Nov 01 2024, 04:47 AM IST

ಸಾರಾಂಶ

ರೈತರು ಯುವಕರು ಮಹಿಳೆಯರು ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದರು. ಅವರು ನಂಬಿಕೆ ಉಳಿಸಿಕೊಳ್ಳಲಿಲ್ಲ. ಕುಮಾರಸ್ವಾಮಿಯವರು ನಿಮ್ಮ ಕಷ್ಟ ಕೇಳಲು ಬರಲಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದರು.

 ಚನ್ನಪಟ್ಟಣ : ಕ್ಷೇತ್ರದಿಂದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಏನೋ ದೊಡ್ಡ ಉಪಯೋಗವಾಗುತ್ತದೆ ಎಂಬ ನಂಬಿಕೆಯಲ್ಲಿ ಜನ ಅವರನ್ನು ಗೆಲ್ಲಿಸಿದರು. ಆದರೆ, ಗೆದ್ದ ನಂತರ ಅವರಿಂದ ನಯಾ ಪೈಸೆ ಉಪಯೋಗವಾಗಲಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.ತಾಲೂಕಿನ ಕೋಡಂಬಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ಅವರು ಪ್ರಚಾರ ನಡೆಸಿದರು.

ತಾಲೂಕಿನ ರೈತರು ಯುವಕರು ಮಹಿಳೆಯರು ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದರು. ಅವರು ನಂಬಿಕೆ ಉಳಿಸಿಕೊಳ್ಳಲಿಲ್ಲ. ಕುಮಾರಸ್ವಾಮಿಯವರು ನಿಮ್ಮ ಕಷ್ಟ ಕೇಳಲು ಬರಲಿಲ್ಲ. ಕಳೆದ ವರ್ಷ ಕೆರೆ ತುಂಬಿಸಲಿಲ್ಲ ಎಂದು ಆರೋಪ ಮಾಡಿದರು.ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ ಯೋಗೇಶ್ವರ್ ಅವರನ್ನು ಹೊತ್ತುಕೊಂಡು ಕ್ಷೇತ್ರದಲ್ಲಿ ಮೆರವಣಿಗೆ ಮಾಡಿದ್ದೀರಿ. 

ಬೆಳ್ಳಿ ಗದೆ, ಕತ್ತಿ ನೀಡಿ ಅವರನ್ನು ಸನ್ಮಾನಿಸಿದ್ದೀರಿ, ಅವರ ಶಿಲೆಯನ್ನೂ ಮಾಡಿಸಿದ್ದೀರಿ. ತಾಲೂಕಿಗೆ ನೀರಾವರಿ ಯೋಜನೆ ನೀಡಿದ ವ್ಯಕ್ತಿಯನ್ನು ಕಳೆದ ಎರಡು ಚುನಾವಣೆಯಲ್ಲಿ ಮತ ಹಾಕದೆ ಜನರು ನೀರು ಬಿಟ್ಟಿದ್ದಾರೆ. ಬಾಯಿ ಮಾತಿನಲ್ಲಿ ಹೊಗಳಿ, ಮತ ಹಾಕದೇ ಕೈ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ನಮಗೆ ಶಕ್ತಿ ನೀಡಲಿಲ್ಲ:

ಯೋಗೇಶ್ವರ್ ಅವರು ಕ್ಷೇತ್ರಕ್ಕೆ ನೀರು ಕೊಟ್ಟರು. ನಾವು ವಿದ್ಯುತ್ ನೀಡಿದೆವು, ಆದರೆ ನೀವು ನಮಗೆ ಶಕ್ತಿಯನ್ನು ಕೊಡಲಿಲ್ಲ. ಈ ಬಾರಿ ನೀರು ಕೊಟ್ಟ ಯೋಗೇಶ್ವರ್ ಅವರಿಗೆ ಮತ್ತೆ ಅವಕಾಶ ನೀಡಬೇಕು, ಮತ ನೀಡಬೇಕು ಎಂದು ಮನವಿ ಮಾಡಿದರು.ನೆಂಟರಂತೆ ಬರುತ್ತಾರೆ ಹೋಗುತ್ತಾರೆ:

ನಿಮ್ಮ ಊರಿನ ಯೋಗೇಶ್ವರ್ ಅವರಿಗೆ ಮತ ನೀಡಿ ಗೆಲ್ಲಿಸುವ ಅವಕಾಶ ಸಿಕ್ಕಿದೆ. ಅವರು ಇದೇ ತಾಲೂಕಿನಲ್ಲಿ ಹುಟ್ಟಿದ್ದಾರೆ, ಬೆಳೆದಿದ್ದಾರೆ ಚುನಾವಣೆಯಲ್ಲಿ ಸೋತಿದ್ದಾರೆ. ಬೇರೆಯವರು ನೆಂಟರಂತೆ ಬರುತ್ತಾರೆ ಅನುಕೂಲ ಮಾಡಿಕೊಂಡು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕನ್ನಡಿಗರ ರಕ್ಷಣೆ ಮಾಡಬೇಕು:

ಕನ್ನಡಿಗರಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಾವು ದನಿ ಎತ್ತಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು. ಕನ್ನಡಿಗರು ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕು ಈ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತಾ ಇದ್ದೇವೆ. ಇದಕ್ಕೆ ನೀವು ಬಲ ತುಂಬಬೇಕು ಎಂದು ಹೇಳಿದರು.ಪೊಟೋ೩೧ಸಿಪಿಟಿ೨: ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು.