ಕೆಂಪೇಗೌಡರ ಸ್ಮಾರಕಗಳ ರಕ್ಷಣೆಗೆ ಸರ್ಕಾರದ ನಿರ್ಲಕ್ಷ್ಯ : ಧರ್ಮ ಮಹಾಸಭಾ ಸಂಸ್ಥಾಪಕ ಸಿದ್ದರಾಮ ಶ್ರೀ

| N/A | Published : Mar 28 2025, 01:17 AM IST / Updated: Mar 28 2025, 02:57 AM IST

ಸಾರಾಂಶ

ಬೆಂಗಳೂರು ನಿರ್ಮಾತೃ ನಾಡಪ್ರಭು ಕಂಪೇಗೌಡರ ಕೋಟೆ ಕೊತ್ತಲಗಳು, ಸ್ಮಾರಕಗಳ ರಕ್ಷಣೆಯ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದ್ದು, ಅನೇಕ ತಾಣಗಳು ಅವಸಾನದ ಅಂಚಿನಲ್ಲಿವೆ ಎಂದು ಒಕ್ಕಲಿಗ ಧರ್ಮ ಮಹಾಸಭಾ ಸಂಸ್ಥಾಪಕ ಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ಬೆಂಗಳೂರು ನಿರ್ಮಾತೃ ನಾಡಪ್ರಭು ಕಂಪೇಗೌಡರ ಕೋಟೆ ಕೊತ್ತಲಗಳು, ಸ್ಮಾರಕಗಳ ರಕ್ಷಣೆಯ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದ್ದು, ಅನೇಕ ತಾಣಗಳು ಅವಸಾನದ ಅಂಚಿನಲ್ಲಿವೆ ಎಂದು ಒಕ್ಕಲಿಗ ಧರ್ಮ ಮಹಾಸಭಾ ಸಂಸ್ಥಾಪಕ ಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಗಡಿ, ಬೆಂಗಳೂರು ಮತ್ತಿತರೆ ಪ್ರದೇಶಗಳಲ್ಲಿ ಕೆಂಪೇಗೌಡರ ಒಂದೊಂದೇ ಕುರುಹುಗಳು ನಾಶವಾಗುತ್ತಿವೆ. ಮಾಗಡಿಯಲ್ಲಿ ಇತಿಹಾಸದ ಗಂಧ, ಗಾಳಿ ಇಲ್ಲದವರು ಕೆಂಪೇಗೌಡರ ಕೋಟೆಯ ಕಂದಕಗಳನ್ನು ಪುರಾತತ್ವ ಇಲಾಖೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮುಚ್ಚುತ್ತಿದ್ದಾರೆ. ಅವುಗಳನ್ನು ಸಂರಕ್ಷಿಸಿ ಪ್ರವಾಸ ಯೋಗ್ಯ ತಾಣಗಳಾಗಿ ರೂಪಿಸಬೇಕಾಗಿದ್ದ ಸರ್ಕಾರ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಯಲಹಂಕ ಮತ್ತು ಮಾಗಡಿ ಕೆಂಪೇಗೌಡರ ಕೋಟೆ ಅವ್ಯವಸ್ಥೆಯ ಆಗರವಾಗಿದ್ದು, ಸುತ್ತಲಿನ ಕಂದಕಗಳು ಮಾಯವಾಗಿವೆ. ದಕ್ಷಿಣ ಭಾಗದಲ್ಲಷ್ಟೇ ಉಳಿದಿರುವ ಕಂದಕವನ್ನು ಮುಚ್ಚಿ ಅದನ್ನು ನಾಮಾವಶೇಷ ಮಾಡಲು ಸ್ಥಳೀಯ ಪುರಸಭೆ ಮುಂದಾಗಿದೆ. ಇದನ್ನು ಖಂಡಿಸಿ ಕೋಟೆ ಕಂದಕವನ್ನು ಉಳಿಸುವಂತೆ ಅನೇಕ ಹೋರಾಟಗಳು ನಡೆಯುತ್ತಿವೆ ಎಂದರು.

ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಮಾತನಾಡಿ, ಪುರಾತತ್ವ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯ ಪುರಸಭೆ ಜಂಟಿ ಸರ್ವೆಗೆ ಆದೇಶಿಸಿದ್ದರೂ ಸರ್ವೆ ಕಾರ್ಯ ಪ್ರಾರಂಭವಾಗಿಲ್ಲ. ನಿದ್ರಾವಸ್ಥೆಯಲ್ಲಿರುವ ಈ ಸಂಸ್ಥೆಗಳು ತಕ್ಷಣವೇ ಜಂಟಿ ಸರ್ವೆ ನಡೆಸಿ ಮಾಗಡಿ ಕೋಟೆಯ ಕಂದಕಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಇತಿಹಾಸ ಸಂಶೋಧಕ ಶೇಖ್ ಮಸ್ತಾನ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ ಗೌಡ, ಕಾನೂನು ಸಲಹೆಗಾರ ನವೀನ್ ಕುಮಾರ್ ಉಪಸ್ಥಿತರಿದ್ದರು.