ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಿಮ್ಸ್‌ಗೆ ಸೇರಿದ ಜಾಗದಲ್ಲಿದ್ದ ತಮಿಳು ನಿವಾಸಿಗಳನ್ನು ಸ್ಥಳಾಂತರ ಮಾಡಲು ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಆ ಮನೆಗಳಿಗೆ ಮುಸ್ಲಿಮರು ಏಕಾಏಕಿ ಹೋಗಿ ಸೇರಿಕೊಂಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ..?

 ಮಂಡ್ಯ : ತಮಿಳು ಕಾಲೋನಿ ನಿವಾಸಿಗಳಿಗೆ ನಗರದ ಕೆರೆ ಅಂಗಳದಲ್ಲಿ ನಿರ್ಮಾಣಗೊಂಡಿದ್ದ ಜಿ+ಕ್ಯಾಟಗರಿ ಮನೆಗಳಿಗೆ ಮುಸ್ಲಿಮರು ಏಕಾಏಕಿ ಹೋಗಿ ಸೇರಿಕೊಳ್ಳುವುದರ ಹಿಂದೆ ಸರ್ಕಾರ ಒಂದು ಧರ್ಮವನ್ನು ಓಲೈಸುವ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಿಮ್ಸ್‌ಗೆ ಸೇರಿದ ಜಾಗದಲ್ಲಿದ್ದ ತಮಿಳು ನಿವಾಸಿಗಳನ್ನು ಸ್ಥಳಾಂತರ ಮಾಡಲು ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಆ ಮನೆಗಳಿಗೆ ಮುಸ್ಲಿಮರು ಏಕಾಏಕಿ ಹೋಗಿ ಸೇರಿಕೊಂಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ಆರು ಶಾಸಕರು ಇದರ ಪರವಾಗಿದ್ದಾರೆ. ಯಾರಿಗೋ ಕಟ್ಟಿದ್ದ ಮನೆಗೆ ಇನ್ಯಾರೋ ಸೇರಿಕೊಳ್ಳುತ್ತಾರೆ ಎಂದರೆ ಏನರ್ಥ. ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೇ ಎಂದು ಕಿಡಿಕಾರಿದರು.

ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ವಿರೋಧ:

ಕೆಆರ್‌ಎಸ್ ಬಳಿ ಕಾವೇರಿ ಆರತಿ ಮಾಡಲು ಯಾವುದೇ ಸಮಸ್ಯೆ ಇಲ್ಲ. ಕೇವಲ ಒಂದು ಲಕ್ಷಕ್ಕೆ ಆಗುವ ಆರತಿಗೆ ಬರೊಬ್ಬರಿ 92 ಕೋಟಿ ರು. ಖರ್ಚು ಮಾಡುತ್ತಿರುವುದು ಏಕೆ?., 30 ಕೋಟಿಯಲ್ಲಿ ಆರತಿ ಮಾಡಿ ಉಳಿದ ಹಣವನ್ನು ಜೇಬಿಗಿಳಿಸುವ ಹುನ್ನಾರವಾಗಿದೆ ಎಂದು ದೂರಿದರು.

ಕೆಆರ್‌ಎಸ್ ಬಳಿ ಮಾಡಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ನಮ್ಮ ವಿರೋಧವಿದೆ. ಸೂಕ್ಷ್ಮ ಪ್ರದೇಶವಾದ ಅಣೆಕಟ್ಟೆ ಬಳಿ ಯೋಜನೆ ಕೈಬಿಟ್ಟು ಮಳವಳ್ಳಿ ತಾಲೂಕಿನ ಗಗನಚುಕ್ಕಿ, ಭರಚುಕ್ಕಿ ಬಳಿ ನಿರ್ಮಿಸಲಿ ಎಂದು ಆಗ್ರಹಿಸಿದರು.

ಬಾಂಗ್ಲಾ ನಿವಾಸಿಗಳು ಹೆಚ್ಚಳ:

ಅಕ್ರಮ ಬಾಂಗ್ಲಾ ನಿವಾಸಿಗಳು ಹೆಚ್ಚುತ್ತಿದ್ದಾರೆ. ನಮ್ಮ ಮಾಹಿತಿ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಬಾಂಗ್ಲಾ ನಿವಾಸಿಗಳು ರಾಜ್ಯದಲ್ಲಿದ್ದಾರೆ. ಮಂಡ್ಯದಲ್ಲೂ ಸಾಕಷ್ಟು ಮಂದಿ ಇದ್ದಾರೆ. ಪಶ್ಚಿಮ ಬಂಗಾಳದ ಮೂಲಕ ಭಾರತ ತಲುಪಿ ಬಂಗಾಳದಲ್ಲಿ ದಾಖಲೆಗಳ ಸೃಷ್ಟಿಸಿಕೊಂಡು ದೇಶದ ನಾನಾ ಭಾಗಕ್ಕೆ ವಿಸ್ತರಣೆಯಾಗಿದ್ದಾರೆ. ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೆ ಓಟ್ ಬ್ಯಾಂಕ್‌ಗಾಗಿ ಸುಮ್ಮನೆ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ್‌ ಜಯರಾಂ, ಸಿ.ಟಿ.ಮಂಜುನಾಥ್, ನಾಗಾನಂದ್, ಆನಂದ ಇದ್ದರು.