ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನ ಮುಖ್ಯ ಹಾಗೂ ಉಪ ಮುಖ್ಯ ರಸ್ತೆ ಮತ್ತು ವಾರ್ಡ್ ರಸ್ತೆಗಳ ಡಾಂಬರೀಕರಣಕ್ಕೆ 2200 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಸೂಚಿಸಿದೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ವಾರ್ಡ್ ರಸ್ತೆ, ಚರಂಡಿ ನಿರ್ಮಾಣ ಅಭಿವೃದ್ಧಿ ಹಾಗೂ ನಿರ್ವಹಣೆ ಮತ್ತು ಮುಖ್ಯ ರಸ್ತೆಗಳು ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಬಗ್ಗೆ ಸಚಿವರು ಹಾಗೂ ಶಾಸಕರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ 1100 ಕೋಟಿ ರು. ಹಾಗೂ ವಾರ್ಡ್ ರಸ್ತೆಗಳ ಡಾಂಬರೀಕರಣಕ್ಕೆ 1100 ಕೋಟಿ ರು. ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕ್ರಿಯಾ ಯೋಜನೆ ರೂಪಿಸುವಾಗ ಐದು ನಗ ಪಾಲಿಕೆಯಿಂದ ವಿವರ ಪಡೆದು ಪರಿಶೀಲಿಸಿ, ಕ್ರೋಢೀಕರಿಸಿ ಸಲ್ಲಿಸಬೇಕು. ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಯ 1100 ಕೋಟಿ ರು. ಕ್ರಿಯಾ ಯೋಜನೆಗೆ ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿ ಹಾಗೂ ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಮುಖ್ಯಮಂತ್ರಿ ವಿವೇಚನಾ ನಿಧಿಯಡಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು. ಕಾಮಗಾರಿಗಳ ಕ್ರಿಯಾ ಯೋಜನೆಯ ಅಂದಾಜು ಪಟ್ಟಿ ಸಲ್ಲಿಸುವ ವೇಳೆ ನಮ್ಮ ರಸ್ತೆ ಕೈಪಿಡಿಯಲ್ಲಿನ ಮಾರ್ಗಸೂಚಿಗಳನ್ನು ಪ್ರತಿ ನಗರ ಪಾಲಿಕೆ ಅಳವಡಿಕೆ ಮಾಡಿಕೊಂಡು ಅಂದಾಜುಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ.
ಲೋಕೋಪಯೋಗಿ ಎಸ್‌ಆರ್ ದರಗಳ ಅನ್ವಯ ಸಿದ್ಧಪಡಿಸುವುದು ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಸೂಚಿಸಿದ್ಧಾರೆ.