ಸಾರಾಂಶ
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ (ಗುರುವಾರ) ಜಾರಿಯಾಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಇನ್ನು ಮುಂದೆ ಬೆಂಗಳೂರು ಗ್ರೇಟರ್ ಬೆಂಗಳೂರು (ಜಿಬಿಎ) ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಗ್ಗೆ ನಿಯಮಾವಳಿ ರೂಪಿಸುವುದು ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಲ್ ಸೋಫಿಯಾ ಖುರೇಷಿ ಕುರಿತು ಬಿಜೆಪಿ ಸಚಿವ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು.
ಮಳೆ ಅನಾಹುತ ತಡೆಯಲು ಮುನ್ನೆಚ್ಚರಿಕಾ ಕ್ರಮ:
ರಾಜ್ಯದಲ್ಲಿ ತೀವ್ರ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳು ವರದಿಯಾಗುತ್ತಿವೆ. ಮಳೆಯಿಂದಾಗಿ ಸಂಭವಿಸುವ ಅನಾಹುತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಂಧ ವ್ಯಕ್ತಿಗೆ ₹1 ಸಾವಿರ ಸಹಾಯ ಮಾಡಿದ ಸಿಎಂ:
ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಲು ಬಂದಿದ್ದ ಅಂಧ ವ್ಯಕ್ತಿಯ ಬಳಿ ಸಿದ್ದರಾಮಯ್ಯ ಅವರು ತಾಳ್ಮೆಯಿಂದ ನಿಂತು ಅಹವಾಲು ಆಲಿಸಿದರು. ಬಳಿಕ ತೆರಳುವ ಮೊದಲು ತಮ್ಮ ಪರ್ಸ್‌ನಿಂದ ₹500 ಮುಖಬೆಲೆ 2 ನೋಟು (₹1000) ತೆಗೆದು ಅಂಧ ವ್ಯಕ್ತಿಯ ಕೈಗೆ ಇಟ್ಟು ಹುಷಾರಾಗಿ ಹೋಗಿ ಎಂದು ಹೇಳಿದರು.