ಪಂಚ ಗ್ಯಾರಂಟಿ ಯೋಜನೆಯಡಿ ಈವರೆಗೆ ಎಷ್ಟು ಜನ ಫಲಾನುಭವಿಗಳಾಗಿದ್ದಾರೆ. ಸರ್ಕಾರ ಎಷ್ಟು ಹಣ ವೆಚ್ಚ ಮಾಡಿದೆ ಎಂಬ ಅಂಕಿ-ಅಂಶಗಳ ಸಹಿತ ವಿವರಿಸಿ ಈ ಜನ ಕಲ್ಯಾಣ ಯೋಜನೆಯಡಿ 1.47 ಲಕ್ಷ ಕೋಟಿ ರು. ಅನ್ನು ಜನರ ಖಾತೆಗೆ ನೇರವಾಗಿ ಹಾಕಲಾಗಿದೆ.

ವಿಧಾನ ಪರಿಷತ್‌ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬರದಿಂದ ಸಂಕಷ್ಟದಲ್ಲಿರುವ ಜನರ ಕೈ ಹಿಡಿದಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಸಮರ್ಥಿಸಿಕೊಂಡರು.

ಬರ ಪರಿಸ್ಥಿತಿ ಕುರಿತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡುವ ವೇಳೆ ಉಳ್ಳವರಿಗೆ ಗ್ಯಾರಂಟಿ ಯೋಜನೆ ಬೇಡ, ಯುವ ನಿಧಿ ಫಲಾನುಭವಿಗಳಿಗೆ ಕೇವಲ ಹಣ ನೀಡಿದರೆ ಮಜಾ ಮಾಡುತ್ತಾರೆ. ಅವರಿಗೆ ಹೊಣೆಗಾರಿಕೆ ವಹಿಸಿ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಪಂಚ ಗ್ಯಾರಂಟಿ ಯೋಜನೆಯಡಿ ಈವರೆಗೆ ಎಷ್ಟು ಜನ ಫಲಾನುಭವಿಗಳಾಗಿದ್ದಾರೆ. ಸರ್ಕಾರ ಎಷ್ಟು ಹಣ ವೆಚ್ಚ ಮಾಡಿದೆ ಎಂಬ ಅಂಕಿ-ಅಂಶಗಳ ಸಹಿತ ವಿವರಿಸಿ ಈ ಜನ ಕಲ್ಯಾಣ ಯೋಜನೆಯಡಿ 1.47 ಲಕ್ಷ ಕೋಟಿ ರು. ಅನ್ನು ಜನರ ಖಾತೆಗೆ ನೇರವಾಗಿ ಹಾಕಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ ತಲಾ 2 ಸಾವಿರ ರು. ನಂತೆ ಈವರೆಗೆ 66 ಸಾವಿರ ನೀಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 21,500 ಕೋಟಿ ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 834 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ 22,500 ಕೋಟಿ ರು ವೆಚ್ಚ ಮಾಡಲಾಗಿದ. ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ನೀಡಲಾಗಿದೆ. ಇದರ ಒಟ್ಟಾರೆ ಪರಿಣಾಮ ಜನರು ಗುಳೆ ಹೋಗುತ್ತಿಲ್ಲ, ಗ್ಯಾರಂಟಿ ಯೋಜನೆಗಳು ಬರದಿಂದ ಸಂಕಷ್ಟದಲ್ಲಿರುವ ಜನರ ಕೈ ಹಿಡಿದಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಭ್ರಷ್ಟಾಚಾರ, ಕಮಿಷನ್‌ ಇಲ್ಲ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹೋಗುತ್ತದೆ ಎಂದು ದಿನೇಶ್‌ ಗೂಳಿಗೌಡ ಬಲವಾಗಿ ಸಮರ್ಥಿಸಿಕೊಂಡರು.

ಉಳ್ಳವರನ್ನು ಯೋಜನೆಯಿಂದ ಹೊರಗಿಡಿ:

ಇದಕ್ಕೂ ಮುನ್ನ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಗ್ಯಾರಂಟಿ ಯೋಜನೆಗಳಿಂದ ಶ್ರೀಮಂತರನ್ನು ಹೊರಗಿಡಿ, ಎಲ್ಲ ಹೆಣ್ಣು ಮಕ್ಕಳು ಉಚಿತವಾಗಿ ಬಸ್‌ನಲ್ಲಿ ಯಾಕೆ ಪ್ರಯಾಣ ಮಾಡಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ಕೊಡಲು ತಮ್ಮ ಆಕ್ಷೇಪವಿಲ್ಲ, ಉಳ್ಳವರಿಗೆ ಬೇಡ ಎಂಬುದಷ್ಟೇ ನಮ್ಮ ಸಲಹೆ. ಯುವ ನಿಧಿ ಫಲಾನುಭವಿಗಳನ್ನು ಸರ್ಕಾರಕ್ಕೆ ಸಂಬಂಧಪಟ್ಟ ಸಣ್ಣಪುಟ್ಟ ಕೆಲಸ ನೀಡಿ ಹೊಣೆಗಾರಿಕೆ ವಹಿಸಿ ಎಂದು ಸಲಹೆ ನೀಡಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್‌ ಪೂರೈಸಬೇಕು

ಬರ ಸ್ಥಿತಿ ಕುರಿತು ಮಾತನಾಡಿದ ಅವರು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್‌ ಪೂರೈಸಬೇಕು.ಕೆಎಂಎಫ್‌ ನೀಡುವ ಪಶು ಆಹಾರ ದರವನ್ನು ಪ್ರತಿ ಕ್ವಿಂಟಲ್‌ಗೆ 2 ಸಾವಿರ ರು. ಕಡಿಮೆ ಮಾಡಿದರೆ ಹೈನುಗಾರಿಕೆ ಮಾಡುವವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.