ಸಾರಾಂಶ
ಕಾರ್ಕಳ : ಇಲ್ಲಿನ ಬೈಲೂರು ಗ್ರಾಪಂ ವ್ಯಾಪ್ತಿಯ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಮ್ ಪಾರ್ಕ್ ಗೊಂದಲ ಇನ್ನಷ್ಟು ಜಟಿಲವಾಗುತ್ತಿದೆ. ಕಳವಾಗಿತ್ತು ಎನ್ನಲಾದ ಪರಶುರಾಮನ 33 ಅಡಿ ಎತ್ತರದ ವಿಗ್ರಹದ ಅರ್ಧಭಾಗ ಇದೀಗ ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ಹಿಂದಿನ ಬಿಜೆಪಿ ಸರ್ಕಾರಾವಧಿಯಲ್ಲಿ ನಿರ್ಮಾಣವಾಗಿರುವ ಈ ಥೀಮ್ ಪಾರ್ಕ್ ಮತ್ತು ಅದರಲ್ಲಿದ್ದ 33 ಅಡಿ ಎತ್ತರದ ಪರಶುರಾಮನ ವಿಗ್ರಹ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಈಗ ಸಿಐಡಿ ತನಿಖೆ ನಡೆಸುತ್ತಿದೆ. ಈ ಥೀಮ್ ಪಾರ್ಕ್‌ನಲ್ಲಿ ಸ್ಥಾಪಿಸಿದ್ದ ಪರಶುರಾಮನ ವಿಗ್ರಹದ ಅರ್ಧಭಾಗ ಕಳವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು 6 ತಿಂಗಳ ಹಿಂದೆ ಕಾರ್ಕಳ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಲಾರಂಭಿಸಿದ್ದರು. ಅದನ್ನೀಗ ಬೆಂಗಳೂರಿನ ಕೆಂಗೇರಿಯ ಗೋಡೌನ್‌ವೊಂದರಲ್ಲಿ ಪತ್ತೆ ಮಾಡಲಾಗಿದೆ.
ಈ ಮಧ್ಯೆ ಶನಿವಾರ ಈ ವಿಗ್ರಹ ನಿರ್ಮಾಣದ ಗುತ್ತಿಗೆ ಪಡೆದಿದ್ದ ಉತ್ತರ ಕನ್ನಡದ ಶಿಲ್ಪಿ ಕೃಷ್ಣ ನಾಯ್ಕ್ ಅವರು ತಮ್ಮ ವರ್ಕ್ ಶಾಪ್‌ನಿಂದ ಪೊಲೀಸರು ಯಾವುದೇ ನೊಟೀಸ್ ಕೂಡ ನೀಡದೆ ಬಲವಂತವಾಗಿ ವಿಗ್ರಹ ಜಪ್ತು ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಕಳದ ಕಾಂಗ್ರೆಸ್ ನಾಯಕ ಉದಯಕುಮಾರ್ ಮುನಿಯಾಲು ಉಪಸ್ಥಿತರಿದ್ದು ತಮಗೆ ಧಮ್ಕಿ ಕೂಡ ಹಾಕಿದ್ದಾರೆ, ಪೊಲೀಸರು ವಿಚಾರಣೆ ನೆಪದಲ್ಲಿ ಮಾನಸಿಕ ದೌರ್ಜನ್ಯ ಎಸಗಿದ್ದಾರೆ. ಪ್ರಕ್ರಿಯೆಯಲ್ಲಿ ಚಿತ್ರೀಕರಣ ಕೂಡ ಮಾಡಿಲ್ಲ ಎಂದೆಲ್ಲ ಫೇಸ್‌ಬುಕ್ ಲೈವ್ ಬಂದು ಆರೋಪಿಸಿದ್ದಾರೆ.
ಎಸ್ಪಿ ಸ್ಪಷ್ಟನೆ: ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ವಿದ್ಯಮಾನಗಳು ಪ್ರಸಾರ ಆಗುತ್ತಿದ್ದಂತೆ, ಉಡುಪಿ ಎಸ್ಪಿ ಡಾ.ಅರುಣ್ ಸ್ವಷ್ಟನೆ ನೀಡಿದ್ದಾರೆ.
ಪ್ರತಿಮೆಯ ಭಾಗಗಳನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಜಪ್ತು ಮಾಡಲಾಗಿದೆ. ಈ ಸಂದರ್ಭದಲ್ಲಿ ದೂರುದಾರರಿಗೆ ಮಹಜರು ವೇಳೆ ಸಹಿ ಹಾಕಲು ಬರುವಂತೆ ಹೇಳಿದ್ದೆವು, ಅದರಂತೆ ಅವರು ಬಂದಿದ್ದರು. ಅಲ್ಲದೆ ವಿಗ್ರಹ ನಿರ್ಮಾಣ ಮಾಡುವವರಿಗೂ ಮೊದಲೇ ನೋಟಿಸ್ ನೀಡಲಾಗಿತ್ತು. ಜಫ್ತು ಮಾಡುವ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ದಾಖಲೀಕರಣ ಮಾಡಿದ್ದೇವೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಅವರು ಬಾಡಿ ಕ್ಯಾಮೆರಾ ಧರಿಸಿದ್ದರು. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿದ್ದರೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ತರಾತುರಿಯಲ್ಲಿ ಉದ್ಘಾಟನೆ: ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರ ಆಸಕ್ತಿಯಲ್ಲಿ ನಿರ್ಮಾಣಗೊಂಡಿರುವ ಪರಶುರಾಮ್ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ, 2024ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಮೊದಲು ತರಾತುರಿಯಲ್ಲಿ ಜ.27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಉದ್ಘಾಟಿಸಿದ್ದರು. ನಂತರ ಈ ಯೋಜನೆಯ ನಿರ್ಮಾಣ ಕಾಮಗಾರಿ ನಡೆಸಿದ ನಿರ್ಮಿತಿ ಕೇಂದ್ರ ವಿಗ್ರಹದ ದುರಸ್ತಿ ನೆಪದಲ್ಲಿ ಅದನ್ನು ತೆರವುಗೊಳಿಸಿತ್ತು. ಇದು ಈ ಯೋಜನೆಯಲ್ಲಾಗಿರುವ ಅವ್ಯಹಾರದ ಬಗ್ಗೆ ಸಂಶಯಕ್ಕೆ ಎಡೆ ಮಾಡಿತ್ತು.
ನಂತರ ಕಾಂಗ್ರೆಸ್ ಸರ್ಕಾರ ಈ ಯೋಜನೆಯ ಅವ್ಯವಹಾರ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಿದೆ. ಅದಕ್ಕೂ ಮೊದಲು ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದಲೂ ತನಿಖೆ ನಡೆಸಲಾಗುತ್ತಿದೆ. ವಿಗ್ರಹ ಕಾಣೆಯಾಗಿರುವ ಬಗ್ಗೆ ಜಿಲ್ಲೆಯ ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಇದೇ ವೇಳೆ ಪರಶುರಾಮನ ಕಂಚಿನ ವಿಗ್ರಹದ ಭಾಗಗಳನ್ನು ಭಾನುವಾರ ಕಾರ್ಕಳಕ್ಕೆ ತರಲಾಗಿದ್ದು, ಕ್ರೇನ್ ಮೂಲಕ ಇಳಿಸಿ, ಕಾರ್ಕಳ ಠಾಣೆ ಗೋದಾಮಿನಲ್ಲಿ ಇರಿಸಲಾಗಿದೆ.