₹1800 ಕೋಟಿ ಬಾಕಿ ಕೇಳಿ ಕಾಂಗ್ರೆಸ್ಸಿಗೆ ಐಟಿ ನೋಟಿಸ್‌

| Published : Mar 30 2024, 12:47 AM IST

ಸಾರಾಂಶ

ತೆರಿಗೆ ವಂಚನೆ ಸಂಬಂಧ ಕಾಂಗ್ರೆಸ್‌ ಪಕ್ಷದ ಕೆಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಇದೀಗ ಹೊಸತಾಗಿ ₹1823 ಕೋಟಿ ಪಾವತಿಸುವಂತೆ ಮತ್ತೆ ಆ ಪಕ್ಷಕ್ಕೆ ನೋಟಿಸ್‌ ಜಾರಿಗೊಳಿಸಿದೆ ಎಂದು ಹೇಳಲಾಗಿದೆ.

ಪಿಟಿಐ ನವದೆಹಲಿ

ತೆರಿಗೆ ವಂಚನೆ ಸಂಬಂಧ ಕಾಂಗ್ರೆಸ್‌ ಪಕ್ಷದ ಕೆಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಇದೀಗ ಹೊಸತಾಗಿ ₹1823 ಕೋಟಿ ಪಾವತಿಸುವಂತೆ ಮತ್ತೆ ಆ ಪಕ್ಷಕ್ಕೆ ನೋಟಿಸ್‌ ಜಾರಿಗೊಳಿಸಿದೆ ಎಂದು ಹೇಳಲಾಗಿದೆ.

ಇದು 2017-18 ಮತ್ತು 2020-21ರ ಹಣಕಾಸು ವರ್ಷದ ಅವಧಿಗೆ ಇದು ಸಂಬಂಧಿಸಿದ್ದು ಎನ್ನಲಾಗಿದೆ.

ಸ್ವತಃ ಕಾಂಗ್ರೆಸ್‌ ಪಕ್ಷ ಈ ಆರೋಪ ಮಾಡಿದ್ದು, ₹1823 ಕೋಟಿ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ತನಗೆ ನೋಟಿಸ್‌ ಬಂದಿದೆ ಎಂದು ತಿಳಿಸಿದೆ. ಅಲ್ಲದೆ, ಬಿಜೆಪಿ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದೂ ಕಿಡಿಕಾರಿದೆ.

‘ಎಲ್ಲಾ ರಾಜಕೀಯ ಪಕ್ಷಗಳಿಗೆ ಇರುವಂತೆ ಕಾಂಗ್ರೆಸ್‌ ಪಕ್ಷಕ್ಕೂ ಆದಾಯ ತೆರಿಗೆ ವಿನಾಯ್ತಿ ಇದೆ. ಆದರೂ ನಾವು ₹1823 ಕೋಟಿ ತೆರಿಗೆ ಬಾಕಿ ಪಾವತಿಸಬೇಕು ಎಂದಾದರೆ, ಬಿಜೆಪಿ ₹4617 ಕೋಟಿ ಆದಾಯ ತೆರಿಗೆ ಬಾಕಿ ಪಾವತಿಸಬೇಕಿದೆ. ನಾವು ಆ ಪಕ್ಷದ ತೆರಿಗೆ ರಿಟರ್ನ್ಸ್‌ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಆದಾಯ ತೆರಿಗೆ ಇಲಾಖೆ ಬಿಜೆಪಿಗೂ ನೋಟಿಸ್‌ ಜಾರಿಗೊಳಿಸಲಿ’ ಎಂದು ಪಕ್ಷದ ಖಜಾಂಚಿ ಅಜಯ್‌ ಮಾಕೆನ್‌ ಹಾಗೂ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಬಿಜೆಪಿ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಆರ್ಥಿಕವಾಗಿ ಅಂಗವಿಕಲಗೊಳಿಸಲು ಅದು ಯತ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಿಂದ ತೆರಿಗೆ ವಂಚನೆ:

‘ರಾಜಕೀಯ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ 24ಎ ಫಾರ್ಮ್‌ ಸಲ್ಲಿಸಬೇಕು. ಅದರಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರ ಹೆಸರು ಹಾಗೂ ವಿಳಾಸ ತಿಳಿಸಬೇಕು. ನಾವು ಬಿಜೆಪಿಯ ಎಲ್ಲಾ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯನ್ನೂ ಪರಿಶೀಲಿಸಿದ್ದೇವೆ. ಚುನಾವಣಾ ಬಾಂಡ್‌ಗಳ ಮೂಲಕ ₹8200 ಕೋಟಿ ಸಂಗ್ರಹಿಸಿರುವ ಆ ಪಕ್ಷ, ಯಾವುದೇ ದಾಖಲೆಯನ್ನೂ ತೆರಿಗೆ ಇಲಾಖೆಗೆ ಸರಿಯಾಗಿ ಸಲ್ಲಿಸಿಲ್ಲ. ಹೀಗಾಗಿ ಆ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಲಿ’ ಎಂದು ಜೈರಾಂ ಮತ್ತು ಮಾಕೆನ್‌ ಆಗ್ರಹಿಸಿದರು.

ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ:

ಬಿಜೆಪಿ ಎಷ್ಟೇ ಅಡ್ಡದಾರಿಯಲ್ಲಿ ಪ್ರಯತ್ನಿಸಿದರೂ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಪ್ರಚಾರ ನಿಲ್ಲಿಸುವುದಿಲ್ಲ. ನಾವು ನಮ್ಮ ಗ್ಯಾರಂಟಿ ಯೋಜನೆಗಳನ್ನು ದೇಶದ ಎಲ್ಲಾ ಜನರಿಗೂ ತಲುಪಿಸುತ್ತೇವೆ. ನೋಟಿಸ್‌ಗಳ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಈ ಚುನಾವಣೆಯಲ್ಲಿ ಇನ್ನಷ್ಟು ತೀಕ್ಷ್ಣವಾಗಿ ಹೋರಾಡುತ್ತೇವೆ ಎಂದು ಜೈರಾಂ ಹಾಗೂ ಮಾಕೆನ್‌ ತಿಳಿಸಿದರು.

ಸೀತಾರಾಂ ಕೇಸರಿ ಕಾಲದವರೆಗೂ ಪರಿಶೀಲನೆ:

ನಮ್ಮ ಪಕ್ಷ 14 ಲಕ್ಷ ರು. ತೆರಿಗೆ ಪಾವತಿಸಿಲ್ಲ ಎಂದು ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳಿಂದ ಆದಾಯ ತೆರಿಗೆ ಇಲಾಖೆ ಈಗಾಗಲೇ 135 ಕೋಟಿ ರು.ಗಳನ್ನು ಬಲವಂತವಾಗಿ ತೆಗೆದುಕೊಂಡಿದೆ. ಜೊತೆಗೆ ಇನ್ನೂ 270 ಕೋಟಿ ರು. ಇರುವ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. 1993-94ರಲ್ಲಿ ಸೀತಾರಾಂ ಕೇಸರಿ ಕಾಂಗ್ರೆಸ್‌ ಪಕ್ಷದ ಖಜಾಂಚಿಯಾಗಿದ್ದ ಕಾಲದವರೆಗಿನ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಯಾವುದೇ ಆದೇಶಗಳಿಲ್ಲದೆ ಕಳೆದ ಎಂಟು ವರ್ಷಗಳ ತೆರಿಗೆ ಬಾಕಿ ಪಾವತಿಸಬೇಕೆಂದು ನೋಟಿಸ್‌ ನೀಡಿದ್ದಾರೆ. ಇದನ್ನೆಲ್ಲ ನೋಡಿಕೊಂಡು ಚುನಾವಣಾ ಆಯೋಗ ಏಕೆ ಮೂಕಪ್ರೇಕ್ಷಕನಂತೆ ಕುಳಿತುಕೊಂಡಿದೆ? ಇಷ್ಟಾಗಿಯೂ 2024ರ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಎಂದು ಕರೆಯಬಹುದೇ ಎಂದು ಜೈರಾಂ ಮತ್ತು ಮಾಕೆನ್‌ ಪ್ರಶ್ನಿಸಿದರು.