ನಾವು ಡಿಸಿಎಂ ಮಾಡದಿದ್ದರೇ ‘ಕೈ’ ಮೂಸುತ್ತಿರಲಿಲ್ಲ : ಎಚ್‌.ಡಿ.ಕುಮಾರಸ್ವಾಮಿ

| N/A | Published : Nov 22 2025, 09:46 AM IST

siddu and HDK
ನಾವು ಡಿಸಿಎಂ ಮಾಡದಿದ್ದರೇ ‘ಕೈ’ ಮೂಸುತ್ತಿರಲಿಲ್ಲ : ಎಚ್‌.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ದೇವೇಗೌಡರು ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಹಾಗೆಯೇ ಎಷ್ಟು ಜನ ನಾಯಕರನ್ನು ಬೆಳೆಸಿದರು, ಎಷ್ಟು ಸಮುದಾಯಗಳಿಗೆ ಶಕ್ತಿ ತುಂಬಿದರು ಎಂಬ ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದರು.

 ಬೆಂಗಳೂರು :  ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ದೇವೇಗೌಡರು ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಹಾಗೆಯೇ ಎಷ್ಟು ಜನ ನಾಯಕರನ್ನು ಬೆಳೆಸಿದರು, ಎಷ್ಟು ಸಮುದಾಯಗಳಿಗೆ ಶಕ್ತಿ ತುಂಬಿದರು ಎಂಬ ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದರು.

ಈ ಪಕ್ಷದಲ್ಲಿ ರಾಜಕೀಯ ಜನ್ಮ ಪಡೆದು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಬೇರೆ ಪಕ್ಷಕ್ಕೆ ಜಂಪ್ ಮಾಡಿದ ವ್ಯಕ್ತಿ, ನನ್ನ ರಾಜಕೀಯ ಉದ್ಧಾರಕ್ಕೆ ಮತ್ತೊಬ್ಬರು ಕಾರಣರು ಅಂತ ಕೋಲಾರದಲ್ಲಿ ಹೇಳಿದ್ದರು. ನಿನ್ನೆ ಚಾಮರಾಜನಗರದಲ್ಲಿ ಇದೇ ವ್ಯಕ್ತಿ ನಾನು ಜೆಡಿಎಸ್‌ನಲ್ಲಿ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಎರಡು ಸಲ ಡಿಸಿಎಂ ಮಾಡಿದ್ದು ಯಾರು? ನಾವು ಅವರನ್ನು ಡಿಸಿಎಂ ಮಾಡದೇ ಇಲ್ಲದಿದ್ದರೆ ಕಾಂಗ್ರೆಸ್ ಮೂಸಿ ನೋಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

ಸವಾಲು ಮೆಟ್ಟಿ ಪಕ್ಷ ಕಟ್ಟುತ್ತೇವೆ: ದೇವೇಗೌಡ

  ಬೆಂಗಳೂರು :  ಅದೆಷ್ಟೋ ಕಠಿಣ ಸವಾಲುಗಳನ್ನು ಎದುರಿಸಿ ನಾವು ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಮುಂದೆಯೂ ಇಂತಹ ಸವಾಲುಗಳನ್ನು ಮೆಟ್ಟಿನಿಂತು ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ. ಯಾರಿಗೂ ಯಾವ ರೀತಿಯ ಅನುಮಾನ ಬೇಕಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷವನ್ನು ಬಹಳಷ್ಟು ನಾಯಕರು ಬಿಟ್ಟು ಹೋಗಿದ್ದಾರೆ. ಈಗಿನ ಕರ್ನಾಟಕದ ಮುಖ್ಯಮಂತ್ರಿ ಸೇರಿ. ನಮ್ಮ ಪಕ್ಷದಿಂದಲೇ ರಾಜಕೀಯ ಬದುಕು ಕಂಡುಕೊಂಡು ಸರ್ವರೀತಿಯಲ್ಲಿಯೂ ಶಕ್ತಿ ತುಂಬಿಕೊಂಡು ಬಿಟ್ಟು ಹೋದರು. ಆದರೂ ಬಹಳ ಸವಾಲಿನ ನಡುವೆ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ನಮ್ಮ ಪಕ್ಷದ ರಾಜ್ಯ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಲ ಇಬ್ಭಾಗವಾಗಿದೆ. ನಮ್ಮ ಪಕ್ಷಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗಟ್ಟಿ ನೆಲೆ ಇದೆ. ಬಲಿಷ್ಠವಾಗಿ ಕಟ್ಟಬಹುದು. ಯಾವುದೇ ಅಂಜಿಕೆ ಇಲ್ಲದೆ ನಾವು ಪಕ್ಷವನ್ನು ಕಟ್ಟುತ್ತಾ ಹೋಗುತ್ತೇವೆ ಎಂದು ಅವರು ಶಪಥ ಮಾಡಿದರು.

ನಾವು ಕೆಲವು ವರ್ಷಗಳಿಂದ ವಿವಿಧ ಪಕ್ಷಗಳ ಜತೆ ಅಧಿಕಾರ ಹಂಚಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜತೆ ಸೇರಿ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದಾರೆ. ಅವರು ಎರಡು ಸಲ ಮುಖ್ಯಮಂತ್ರಿ ಆಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಅವರು ಸಾಲಮನ್ನಾ ಸೇರಿದಂತೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಆಡಳಿತದಲ್ಲಿ ಅಗಾಧವಾದ ಅನುಭವ ಇದೆ. ಈಗ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

ದಳಕ್ಕೆ ಎಚ್‌ಡಿಡಿ ರಾಷ್ಟ್ರಾಧ್ಯಕ್ಷ, ಎಚ್ಡಿಕೆ ರಾಜ್ಯಾಧಕ್ಷ

  ಬೆಂಗಳೂರು :  ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷರಾಗಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಂದುವರೆಸಲು ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಗಿದೆ.

ಜೆಡಿಎಸ್‌ ರಾಜ್ಯ ಕಚೇರಿಯ ಜೆ.ಪಿ.ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಪಟ್ಟ ಒಲಿಯಬಹುದು ಎಂಬ ಬಹುದಿನಗಳ ಚರ್ಚೆಗೆ ಈ ಮೂಲಕ ತೆರೆ ಬಿದ್ದಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ದೇವೇಗೌಡರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಖುಷಿಯಿಂದ ಬೆಳ್ಳಿಹಬ್ಬ ಆಚರಣೆ:

ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷ 25 ವರ್ಷ ಪೂರೈಸಿದೆ. ಏನೇ ಕಷ್ಟಗಳು ಬಂದರೂ ಇಲ್ಲಿಯವರೆಗೆ ಪಕ್ಷ ಬೆಳೆದಿದೆ. ಅನೇಕ ರಾಜಕಾರಣಿಗಳನ್ನು ಪಕ್ಷ ತಯಾರು ಮಾಡಿದೆ. ಅನೇಕರು ಇಲ್ಲಿ ಬೆಳೆದು ನಾಯಕರಾಗಿದ್ದಾರೆ. ಜನರೊಂದಿಗೆ ಒಡನಾಟ ಇರಿಸಿಕೊಂಡಿರುವ ಪಕ್ಷ ಜೆಡಿಎಸ್‌. ಬಹಳ ಖುಷಿಯಿಂದ ನಾವು ಬೆಳ್ಳಿ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದು ಸುರೇಶ್‌ ಬಾಬು ಹೇಳಿದರು. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಕಾರ್ಯಕಾರಣಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ ಸೇರಿ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಹ್ವಾನಿತ ನಾಯಕರು ಪಾಲ್ಗೊಂಡಿದ್ದರು.

Read more Articles on