ಮಂಡ್ಯ ಜಿಲ್ಲೆಯಲ್ಲಿ ದಿಕ್ಕೆಟ್ಟಿದ್ದ ‘ಜೆಡಿಎಸ್‌’ಗೆ ಎಚ್‌ಡಿ ಕುಮಾರಸ್ವಾಮಿ ‘ಆಸರೆ’..!

| Published : Jun 06 2024, 12:30 AM IST

ಮಂಡ್ಯ ಜಿಲ್ಲೆಯಲ್ಲಿ ದಿಕ್ಕೆಟ್ಟಿದ್ದ ‘ಜೆಡಿಎಸ್‌’ಗೆ ಎಚ್‌ಡಿ ಕುಮಾರಸ್ವಾಮಿ ‘ಆಸರೆ’..!
Share this Article
  • FB
  • TW
  • Linkdin
  • Email

ಸಾರಾಂಶ

೨೦೧೯ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಆರಂಭವಾದ ಜೆಡಿಎಸ್ ಪತನ ಇಲ್ಲಿಯವರೆಗೆ ಮುಂದುವರೆದಿತ್ತು. ೨೦೨೪ರಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ಜಯಭೇರಿ ಬಾರಿಸಿರುವುದು ಸ್ಥಳೀಯ ಜೆಡಿಎಸ್ ನಾಯಕರಿಗೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಮುಖಂಡರು-ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಆರು ಕ್ಷೇತ್ರಗಳನ್ನು ಕಳೆದುಕೊಂಡು ದಿಕ್ಕೆಟ್ಟಿದ್ದ ಜೆಡಿಎಸ್ ಪಕ್ಷಕ್ಕೆ ಈಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಸರೆಯಾಗಿ ನಿಂತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಜೆಡಿಎಸ್‌ಗೆ ಲೋಕಸಭೆ ಚುನಾವಣೆಯಲ್ಲಿನ ಗೆಲುವು ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಅವಕಾಶ ದೊರೆತಂತಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಆರಂಭವಾದ ಜೆಡಿಎಸ್ ಪತನ ಇಲ್ಲಿಯವರೆಗೆ ಮುಂದುವರೆದಿತ್ತು. ೨೦೨೪ರಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ಜಯಭೇರಿ ಬಾರಿಸಿರುವುದು ಸ್ಥಳೀಯ ಜೆಡಿಎಸ್ ನಾಯಕರಿಗೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಮುಖಂಡರು-ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿದೆ.

ಜಿಲ್ಲಾ ಮಟ್ಟದಲ್ಲಿ ನಾಯಕತ್ವವಿಲ್ಲ:

ಜಿಲ್ಲಾ ಮಟ್ಟದ ಜೆಡಿಎಸ್ ನಾಯಕರು ಆಯಾ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿದ್ದಾದಾರೆಯೇ ವಿನಃ ಇಡೀ ಜಿಲ್ಲೆಯ ನಾಯಕತ್ವವನ್ನು ವಹಿಸಿಕೊಂಡು ಮುನ್ನಡೆಸುವ ಶಕ್ತಿ ಯಾರಿಗೂ ಇಲ್ಲ. ಇದೇ ಕಾರಣಕ್ಕೆ ಸ್ಥಳಿಯವಾಗಿ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ಯಾರಲ್ಲೂ ಸಹಮತ ಮೂಡಲೇ ಇಲ್ಲ. ದೇವೇಗೌಡರ ಕುಟುಂಬದಿಂದ ಯಾರಾದರೂ ಸ್ಪರ್ಧಿಸಬೇಕೆಂದು ಒಂದು ಸಾಲಿನ ನಿರ್ಣಯ ಕೈಗೊಂಡು ವರಿಷ್ಠರ ಮುಂದಿಟ್ಟಿದ್ದರು.

ಎಚ್.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಸ್ಥಳೀಯ ಜೆಡಿಎಸ್ ನಾಯಕರನ್ನು ಎದುರಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ಎಚ್‌ಡಿಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರ ವಿರುದ್ಧ ಒಂದು ಮಾತನಾಡಿದರೂ ಜನರು ತಮ್ಮ ವಿರುದ್ಧವೇ ತಿರುಗಿ ಬೀಳಬಹುದು ಎಂಬುದನ್ನು ಫಲಿತಾಂಶ ಸಾಕ್ಷೀಕರಿಸಿದೆ.

ಸ್ಥಳೀಯ ನಾಯಕರಿಗೆ ಧ್ವನಿ ಕೊಟ್ಟ ಎಚ್‌ಡಿಕೆ:

ಕುಮಾರಸ್ವಾಮಿ ಗೆಲುವಿನಿಂದ ಸ್ಥಳೀಯ ಜೆಡಿಎಸ್ ನಾಯಕರು ಖುಷಿಯಾಗಿದ್ದಾರೆ. ಮುಖಂಡರು-ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಯಾವೊಂದು ಅಧಿಕಾರವಿಲ್ಲದೆ ಪ್ರಬಲವಾಗಿ ಧ್ವನಿ ಎತ್ತುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಜೆಡಿಎಸ್ ಮಾಜಿ ಶಾಸಕರು ಈಗ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗಲಿದ್ದಾರೆ. ಜೊತೆಗೆ ಮುಖಂಡರು-ಕಾರ್ಯಕರ್ತರು ಎಚ್‌ಡಿಕೆ ಬೆಂಬಲದೊಂದಿಗೆ ಸ್ಥಳೀಯವಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಜಿಲ್ಲೆಯೊಳಗೆ ಎಚ್‌ಡಿಕೆ ಪರವಾದ ಕೂಗು ಹೆಚ್ಚಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಮುಂಬರುವ ಚುನಾವಣೆಗಳನ್ನು ಎದುರಿಸುವುದಕ್ಕೆ ಜೆಡಿಎಸ್ ಪಕ್ಷದ ಯುವಕರು ಸನ್ನದ್ಧರಾಗಬಹುದು. ಜಿಪಂ-ತಾಪಂ ಚುನಾವಣೆಗಳು ಎದುರಾಗುತ್ತಿರುವುದರಿಂದ ಜೆಡಿಎಸ್ ಪಕ್ಷದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಮುಂದಾಗಬಹುದು. ಎಚ್.ಡಿ.ಕುಮಾರಸ್ವಾಮಿ ಇಮೇಜ್ ಬಳಸಿಕೊಂಡು ಚುನಾವಣೆಯನ್ನು ಗೆಲ್ಲಬಹುದೆಂಬ ಲೆಕ್ಕಾಚಾರವೂ ಇದರ ಹಿಂದೆ ಅಡಗಿರುವಂತೆ ಕಂಡುಬರುತ್ತಿದೆ.

ಕಾಂಗ್ರೆಸ್ ನಾಯಕರಿಗೇ ಶಾಕ್..!

ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ೨.೮೪ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕಾಂಗ್ರೆಸ್ ನಾಯಕರಿಗೆ ದೊಡ್ಡ ಶಾಕ್ ನೀಡಿದಂತಾಗಿದೆ. ಇಷ್ಟೊಂದು ಮತಗಳು ಕುಮಾರಸ್ವಾಮಿ ಪರವಾಗಿ ಹರಿದುಹೋಗುತ್ತವೆ ಎನ್ನುವುದನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾದ ನಂತರದಲ್ಲಿ ಒಕ್ಕಲಿಗ ಮತಗಳು ಹೆಚ್ಚು ಪ್ರಮಾಣದಲ್ಲಿ ಜೆಡಿಎಸ್‌ಗೆ ಹರಿದುಹೋಗಲಿದ್ದು, ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗ ಮತ್ತು ಇತರೆ ಹಿಂದುಳಿದ ಜಾತಿಯವರ ಮತಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಹೆಚ್ಚಿನ ಗಮನಹರಿಸಿದರು.

ನಿರೀಕ್ಷೆ-ಲೆಕ್ಕಾಚಾರ ತಲೆಕೆಳಗು:

ಆದರೆ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ ಮಹಿಳೆಯರು ಕೈಹಿಡಿಯಲಿಲ್ಲ. ಹಿಂದುಳಿದ ವರ್ಗ, ಹಿಂದುಳಿದ ಜಾತಿಯವರ ಮತಗಳೂ ಒಕ್ಕಲಿಗ ಮತಗಳನ್ನೇ ಹಿಂಬಾಲಿಸಿಕೊಂಡು ಹೋಗಿದ್ದರಿಂದ ಕೈ ನಾಯಕರ ನಿರೀಕ್ಷೆ-ಲೆಕ್ಕಾಚಾರವನ್ನೆಲ್ಲಾ ತಲೆಕೆಳಗಾಯಿತು. ಮಂಡ್ಯ ಲೋಕಸಭೆಯ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಅತಿ ಹೆಚ್ಚು ಮತಗಳ ಅಂತರವನ್ನು ಪಡೆದುಕೊಂಡಿತು. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದೆಲ್ಲಾ ಜಾತಿಯವರು ಬಹುತೇಕ ಜೆಡಿಎಸ್ ಬೆಂಬಲಿಸಿದ್ದರಿಂದ ಎಚ್.ಡಿ.ಕುಮಾರಸ್ವಾಮಿ ನಿರಾಯಾಸ ಗೆಲುವನ್ನು ಪಡೆದುಕೊಂಡರು. ಈ ಫಲಿತಾಂಶದಿಂದ ಜೆಡಿಎಸ್‌ಗೆ ಜಿಲ್ಲೆಯೊಳಗೆ ಜನಬೆಂಬಲವಿರುವುದನ್ನು ಸಾಬೀತುಪಡಿಸಿದೆ.

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದ ಮತಗಳ ಅಂತರಕ್ಕೆ ಸರಿಸಮನಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಎಚ್.ಡಿ.ಕುಮಾರಸ್ವಾಮಿ ಮತಗಳನ್ನು ಗಳಿಸಿಕೊಂಡಿರುವುದು ಈ ಚುನಾವಣೆಯ ಮತ್ತೊಂದು ವಿಶೇಷವಾಗಿದೆ. ಎಚ್.ಡಿ.ಕುಮಾರಸ್ವಾಮಿ ಪರವಾಗಿ ಈ ಪ್ರಮಾಣದ ಮತಗಳು ಚಲಾವಣೆಗೊಂಡಿರುವುದು ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ.

ಎಚ್‌ಡಿಕೆ ಎದುರಿಸುವುದೇ ಸವಾಲು:

ಕಳೆದ ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡು ಎರಡು ವಿಧಾನ ಪರಿಷತ್ ಚುನಾವಣೆ ಮತ್ತು ೨೦೨೩ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ್ದ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರಾಜ್ಯ ಮಟ್ಟದಲ್ಲಿ ತಮ್ಮ ವರ್ಚಸ್ಸು, ನಾಯಕತ್ವ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಎಚ್.ಡಿ.ಕುಮಾರಸ್ವಾಮಿ ಆಗಮನದಿಂದ ಅವರನ್ನು ಜಿಲ್ಲೆಯೊಳಗೆ ಸಮರ್ಥವಾಗಿ ಎದುರಿಸುವುದೇ ಚಲುವರಾಯಸ್ವಾಮಿ ಅವರಿಗೆ ದೊಡ್ಡ ಸವಾಲಾಗಿದೆ.

ಮಂಡ್ಯ ಜಿಲ್ಲೆಯ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಆವರ ಮೇಲೆ ಅಪಾರ ಪ್ರೀತಿ-ಅಭಿಮಾನ ಹೊಂದಿದ್ದಾರೆ. ಅವರನ್ನು ನೇರವಾಗಿ ಮತ್ತು ಸಾರ್ವಜನಿಕವಾಗಿ ಎದುರುಹಾಕಿಕೊಳ್ಳುವುದು ಕಷ್ಟದ ಕೆಲಸ. ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ಆಯ್ಕೆಯನ್ನು ಸಮರ್ಥಿಸಿಕೊಂಡೇ ಮುಂದಿನ ದಿನಗಳಲ್ಲಿ ಕೈ ನಾಯಕರು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ.