ಡಿ.ಕೆ. ಶಿವಕುಮಾರ್ ಅಕ್ರಮ ತನಿಖೆಗೆ ಇ.ಡಿ. ಸಾಕಾಗಲ್ಲ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

| Published : Aug 05 2024, 12:39 AM IST / Updated: Aug 05 2024, 04:36 AM IST

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ಮಾಡಲು ಸಿಬಿಐ, ಇ.ಡಿ. ಸಾಕಾಗುವುದಿಲ್ಲ. ಡಿಕೆಶಿ ನಿಮ್ಮ ಬಳಿ ಏನಿತ್ತು?. ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ, ವಿಸಿಆರ್‌ನಿಂದ ಜೀವನ ಪ್ರಾರಂಭಿಸಿದ ನೀವು, ಯಾವ ರೀತಿ ನಡೆದುಕೊಂಡಿದ್ದೀರಿ?. ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ  

 ರಾಮನಗರ :  ಶಾಂತಿನಗರದ ಹೌಸಿಂಗ್ ಸೊಸೈಟಿ ಭೂಮಿ ಏನಾಯಿತು?. ಬಿಡದಿಯಲ್ಲಿ ಐಕಾನ್ ಕಾಲೇಜು ಕಟ್ಟಿಸಿರುವ ಭೂಮಿ ಯಾರದು?. ಅದರ ಪಕ್ಕದಲ್ಲಿರುವ 4 ಎಕರೆ ಭೂಮಿ ಯಾರದು?. ಮೂವರು ವಿಧವೆಯರಿಗೆ ಜೀವ ಬೆದರಿಕೆ ಹಾಕಿ, ನಿಮ್ಮ ಮಗಳ ಹೆಸರಿಗೆ ಸೈಟ್ ಬರೆಸಿಕೊಂಡಿದ್ದು ಯಾರು?. ಇಷ್ಟೇ ಅಲ್ಲ. ಇನ್ನೂ ಬೇಕಾದಷ್ಟಿವೆ. ಅವುಗಳ ತನಿಖೆ ಮಾಡಲು ಒಂದು ಸಿಬಿಐ, ಇ.ಡಿ. ಸಾಕಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿಯಿಂದ ಆರಂಭವಾಗಿರುವ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ 2ನೇ ದಿನವಾದ ಭಾನುವಾರ ರಾಮನಗರ ತಲುಪಿತು. ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಎಚ್ಡಿಕೆಯವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪಾದಿಸಿರುವ ಆಸ್ತಿಯನ್ನು ಎಳೆ, ಎಳೆಯಾಗಿ ವಿವರಿಸಿದರು. 

ಅಲ್ಲದೆ, ‘ಅದೇನೊ ನನ್ನದು, ವಿಜಯೇಂದ್ರನದು ಬಿಚ್ಚುತ್ತೀವಿ ಅಂದ್ರಲ್ಲ, ಬಿಚ್ಚಪ್ಪ, ಅದೇನಿದೆ. ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ’ ಎಂದು ಏಕವಚನದಲ್ಲೇ ಎಚ್ಚರಿಸಿದರು.ಡಿಕೆಶಿ ನಿಮ್ಮ ಬಳಿ ಏನಿತ್ತು?. ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ, ವಿಸಿಆರ್‌ನಿಂದ ಜೀವನ ಪ್ರಾರಂಭಿಸಿದ ನೀವು, ಯಾವ ರೀತಿ ನಡೆದುಕೊಂಡಿದ್ದೀರಿ?. 

ಹೇಗೆಲ್ಲ ಹಣ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ವೇಳೆ ಶಾಂತಿನಗರದ ಹೌಸಿಂಗ್ ಸೊಸೈಟಿಗೆ ಪರಿಶಿಷ್ಟ ಜನರಿಗೆ ಸೈಟ್ ಕೊಡಲು 68 ಎಕರೆ ಭೂಮಿ ಕೊಟ್ಟಿದ್ದರು. ಆ ದಲಿತರ ಭೂಮಿಯನ್ನು ನಿಮ್ಮದೇ ಸಚಿವರು ನಕಲಿ ಸೊಸೈಟಿ ಸೃಷ್ಟಿಸಿ ಲಪಟಾಯಿಸಿರುವ ಮಾಹಿತಿ ಇಲ್ಲವೇ?. ಆ ಭೂಮಿಯನ್ನು ಲಪಟಾಯಿಸಿದ್ದು ಯಾರು ಎಂಬುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.ಬಿಡದಿಯಲ್ಲಿ ಐಕಾನ್ ಕಾಲೇಜು ಕಟ್ಟಿಸಿದ್ದೀರಿ. ಆ ಭೂಮಿ ಯಾರದು?. ಬಿಲ್ ಕೆಂಪನಹಳ್ಳಿಯ ಕೃಷ್ಣಮೂರ್ತಿಯವರ ಜಾಗ ಕಬಳಿಸಲು ಅವರು ಸಾಲ ಪಡೆದಿದ್ದ ಕೆಎಸ್‌ಎಸ್‌ಸಿಯಲ್ಲಿನ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡರು. ಅಲ್ಲಿ ಐಕಾನ್ ಕಾಲೇಜು ಕಟ್ಟಿದ್ದಾರೆ. 

ಅದರ ಪಕ್ಕದಲ್ಲಿರುವ ಮತ್ತೊಂದು ಭೂಮಿ ಮಿಲಿಟರಿ ಸಿಬ್ಬಂದಿಯೊಬ್ಬರಿಗೆ ಸೇರಿದ್ದು. ಅವರ ಮಗಳನ್ನು ಕಿಡ್ನ್ಯಾಪ್ ಮಾಡಿ ಅವರಿಗೆ 25 ಲಕ್ಷ ಚೆಕ್ ನೀಡಿ, 4 ಎಕರೆ ಭೂಮಿ ಪಡೆದಿದ್ದು ಯಾರು?. ಚೆಕ್ ಬೌನ್ಸ್ ಆದಾಗ ಅವರ ಮಗಳನ್ನು ಕೊಲ್ಲಿಸುವ ಬೆದರಿಕೆ ಹಾಕಿದ್ದು ಯಾರು?. ಡಿಸಿಎಂ ಆದ ಮೇಲೆ ಸದಾಶಿವನಗರದಲ್ಲಿ ಇತ್ತೀಚೆಗೆ 70 ವರ್ಷ ವಯಸ್ಸಿನ ಮೂವರು ವಿಧವೆಯರಿಗೆ ಜೀವ ಬೆದರಿಕೆ ಹಾಕಿ ನಿಮ್ಮ ಮಗಳ ಹೆಸರಿಗೆ ಸೈಟ್ ಬರೆಸಿಕೊಂಡಿದ್ದು ಯಾರು? ಎಂದು ಪ್ರಶ್ನೆ ಮಾಡಿದರು.