ಡಿಕೆ ಅಕ್ರಮದ ಟನ್‌ಗಟ್ಟಲೆ ಮಾಹಿತಿ ನನ್ನ ಬಳಿ ಇವೆ : ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

| N/A | Published : Apr 06 2025, 01:50 AM IST / Updated: Apr 06 2025, 07:21 AM IST

HD Kumaraswamy

ಸಾರಾಂಶ

ಬಳ್ಳಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿದ್ದು, ಅನಗತ್ಯವಾಗಿ ನನ್ನನ್ನು ಕೆಣಕುವುದು ಒಳ್ಳೆಯದಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ಬಳ್ಳಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿದ್ದು, ಅನಗತ್ಯವಾಗಿ ನನ್ನನ್ನು ಕೆಣಕುವುದು ಒಳ್ಳೆಯದಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಕನಕಪುರದಲ್ಲಷ್ಟೇ ಬಂಡೆ ಒಡೆದಿದ್ದೇನೆ. ಬಳ್ಳಾರಿಗೂ, ನನಗೂ ಏನು ಸಂಬಂಧ ಎಂದು ಉಪಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಆದರೆ, ಅವರು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ. ನಾನೇನು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದರು.

ಸಾಯಿ ವೆಂಕಟೇಶ್ವರ ಮೈನಿಂಗ್‌ ವಿಚಾರದಲ್ಲಿ ಪ್ರಕರಣ ದಾಖಲಿಸಿ ನಮ್ಮ ಕುಟುಂಬದ್ದೇನಿದೆ ಎಂಬುದನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಡುಕಿಸಿದ್ದರು. ಆದರೆ, ಏನೂ ಸಿಕ್ಕಿರಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮೇಲೆ ನಾಲ್ಕು ಪ್ರಕರಣ ಹಾಕಿಸಿದ್ದರು. ಸಾಯಿ ವೆಂಕಟೇಶ್ವರ, ಜಂತಕಲ್ ಮೈನಿಂಗ್, ಡಿನೋಟಿಫಿಕೇಶನ್ ಪ್ರಕರಣ ಹಾಕಿದ್ದರು. ಇದಾಗಿ 17 ವರ್ಷವಾಗಿದ್ದು, ಒಂದು ತನಿಖೆ ನಡೆಸುವುದಕ್ಕೂ ಆಗಿಲ್ಲ. ಆಗ ಸ್ಪೈಸ್ ಜೆಟ್ ವೇಗದಲ್ಲಿ ತನಿಖೆ ಮಾಡಿದರು ಎಂದು ಕಿಡಿಕಾರಿದರು.

ಎಷ್ಟು ಕಂಪನಿ ಹೊಂದಿದ್ದಾರೆ?:

ಬಳ್ಳಾರಿಗೆ ಹೋಗಿಯೇ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಆದರೆ ನಗರಾಭಿವೃದ್ಧಿ ಸಚಿವರಾಗಿ ಕಬ್ಬಿಣದ ಅದಿರು ಬೇಕೆಂದು ಕೇಂದ್ರ ಸಚಿವರಿಗೆ ಪತ್ರ ಬರೆಯುತ್ತಾರೆ. ಅವರು ಎಷ್ಟು ಕಂಪನಿಗಳನ್ನು ಹೊಂದಿದ್ದಾರೆ, ಎಷ್ಟು ಅದಿರು ಲೂಟಿ ಹೊಡೆದಿದ್ದಾರೆ? ಯಾವ ದರ್ಜೆಯ ಅದಿರನ್ನು ಲೂಟಿ ಹೊಡೆಯಲಾಗಿದೆ? ಅಣ್ಣ-ತಮ್ಮಂದಿರ ಬೇನಾಮಿ ಕಂಪನಿಗಳ ವ್ಯವಹಾರಗಳೇನು ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗುತ್ತಿಗೆ ಮೀಸಲು ಶ್ವೇತಪತ್ರ ಹೊರಡಿಸಿ:ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿ ಯಾರು, ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ? ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಲು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.