ಪ್ರಜ್ವಲ್‌ಗೆ ಟಿಕೆಟ್ ಕೊಡದಂತೆ ಪತ್ರ ಬರೆಸಿದ್ದೇ ಎಚ್.ಡಿ.ಕುಮಾರಸ್ವಾಮಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

| Published : Aug 06 2024, 12:41 AM IST / Updated: Aug 06 2024, 05:30 AM IST

ಸಾರಾಂಶ

ಪೆನ್‌ಡ್ರೈವ್ ವಿಚಾರ ಹಿಡಿದುಕೊಂಡು ನಾವ್ಯಾರೂ ಬಂದಿಲ್ಲ. ನೀನುಂಟು ನಿನ್ನ ಕುಟುಂಬವುಂಟು ಎಂದು ಸುಮ್ಮನಿದ್ದೆವು. ಪೆನ್‌ಡ್ರೈವ್ ಹಿಂದೆ  ಉಪಮುಖ್ಯಮಂತ್ರಿ ಇದ್ದಾರೆ ಎಂದೆಲ್ಲಾ ಹೇಳಿದಿರಿ.  ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ.

 ಮದ್ದೂರು : ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ದೇವರಾಜೇಗೌಡನಿಂದ ಹೈಕಮಾಂಡ್‌ಗೆ ಪತ್ರ ಬರೆಸಿದವನು ನೀನೆ ಅಲ್ಲವೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯನ್ನು ಪ್ರಶ್ನಿಸಿದರು.

ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಸರ್ಕಾರ ಹಿಂದಿನ ಭ್ರಷ್ಟಾಚಾರದ ವಿರುದ್ಧ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪೆನ್‌ಡ್ರೈವ್ ವಿಚಾರ ಹಿಡಿದುಕೊಂಡು ನಾವ್ಯಾರೂ ಬಂದಿರಲಿಲ್ಲ. ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು, ನಿನ್ನ ಕುಟುಂಬವುಂಟು ಎಂದು ಸುಮ್ಮನಿದ್ದೆವು. ಪೆನ್‌ಡ್ರೈವ್ ಹಿಂದೆ ಮಹಾನಾಯಕ, ಉಪಮುಖ್ಯಮಂತ್ರಿ ಇದ್ದಾರೆ ಎಂದೆಲ್ಲಾ ಹೇಳಿದಿರಿ. ಆ ಮಾತಿಗೆ ಬದ್ಧನಾಗಿ ಇರಬೇಕಿತ್ತು. ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಇದು ಇವತ್ತಿನದಲ್ಲ, 1985 ರಿಂದ ನಿಮ್ಮ ಕುಟುಂಬ ಹಾಗೂ ನನ್ನ ನಡುವೆ ತಿಕ್ಕಾಟ ನಡೆದೇ ಇದೆ.

ದಾಖಲೆ ಬಿಡುಗಡೆಗೆ ಲೇಟ್‌ ಮಾಡಬಾರದು: ಡಿಕೆಶಿ

ದಾಖಲೆ ಬಿಡುಗಡೆಯನ್ನು ಲೇಟ್ ಮಾಡಬಾರದು. ಶುಭಘಳಿಗೆ, ಶುಭ ಮುಹೂರ್ತ ನೋಡಿ ಬೇಗ ದಾಖಲೆ ಬಿಡುಗಡೆ ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಕುತಂತ್ರ 20 ವರ್ಷಗಳಿಂದ ನಡೆಯುತ್ತಿದೆ.

ಇಡಿ, ಸಿಬಿಐ ಏನೇನೂ ಬೇಕು ಎಲ್ಲವನ್ನ ಜಾಲಾಡುತ್ತಿದ್ದಾರೆ. ಕುಮಾರಸ್ವಾಮಿ ಕೂಡ ಅದನ್ನೇ ಮಾಡುತ್ತಿದ್ದಾರೆ. ನನ್ನದು ತೆರೆದ ಪುಸ್ತಕ, ನನಗೆ ತೊಂದರೆ ಇಲ್ಲ.ಪಾದಯಾತ್ರೆ ನನಗೆ ವರವಾಗಿದೆ. ಅವರ ಅಸೂಹೆ, ಅಕ್ರಮಗಳನ್ನ ಜನರ ಮುಂದಿಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ನುಡಿದರು.

ಆಸ್ತಿ ಪಟ್ಟಿ ಬಿಡುಗಡೆ ವಿಚಾರವಾಗಿ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಾಮುಂಡಿ ಬೆಟ್ಟಕ್ಕೆ ಬೇಡ, ಅಸೆಂಬ್ಲಿಗೆ ಬರಲಿ. ಕುಮಾರಸ್ವಾಮಿ ಅಸೆಂಬ್ಲಿಗೆ ಬರಲು ಆಗಲ್ಲ, ಅವರ ಅಣ್ಣನನ್ನು ಕಳುಹಿಸಲಿ ಎಂದು ಸವಾಲು ಸ್ವೀಕರಿಸಿದರು.