ಸಾರಾಂಶ
ಮಂಡ್ಯ : ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಉಳಿದಿರುವುದೇ ಮೂರು ತಿಂಗಳು. ಅಷ್ಟರೊಳಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿಡಬೇಕೆಂಬ ಹಂಬಲದೊಂದಿಗೆ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾರಿಮಣಿಗಳು ಮೇಲುಗೈ ಸಾಧಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ರವಿ, ವಿದ್ಯಾ ಮಂಜುನಾಥ್, ಕಾಂಗ್ರೆಸ್‌ನಿಂದ ಗೀತಾ ಕುಮಾರಸ್ವಾಮಿ, ಪೂರ್ಣಿಮಾ, ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಅವರು ಸ್ಥಾಯಿ ಸಮಿತಿಯ ಒಂದು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಜೆಡಿಎಸ್ ಪಕ್ಷದೊಳಗೆ ಗುಂಪುಗಾರಿಕೆ ಇರುವ ಕಾರಣದಿಂದ ಜೆಡಿಎಸ್ ಪಕ್ಷದ ಆಕಾಂಕ್ಷಿಗಳು ಬೆಂಬಲ ಕೋರಿ ಕಾಂಗ್ರೆಸ್ ಸದಸ್ಯರ ಬೆನ್ನುಹತ್ತಿದ್ದಾರೆ.
ನಗರಸಭೆಯಲ್ಲಿ ಒಟ್ಟು ೧೮ ಜೆಡಿಎಸ್, ೧೦ ಕಾಂಗ್ರೆಸ್, ೫ ಪಕ್ಷೇತರ, ೨ ಬಿಜೆಪಿ ಸದಸ್ಯರಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸದಸ್ಯರು ಸೇರಿ ೨೦ ಅಗಲಿದೆ. ಬಹುಮತವನ್ನು ಹೊಂದಿರುವ ಅವರೇ ಒಗ್ಗೂಡಿ ಮಾತುಕತೆ ಮೂಲಕ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಸದಸ್ಯರ ನಡುವೆ ಸಹಮತವಿಲ್ಲ, ಪಕ್ಷದ ನಾಯಕರೂ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಅಧಿಕಾರಕ್ಕೆ ಜೆಡಿಎಸ್‌ನೊಳಗೆ ಪೈಪೋಟಿ ಹೆಚ್ಚಿರುವ ಕಾರಣದಿಂದ ಕಾಂಗ್ರೆಸ್ ಸದಸ್ಯರ ಬೆಂಬಲಕ್ಕಾಗಿ ಎಡತಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಗರಸಭೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಅವರು ಕಾಂಗ್ರೆಸ್ ಪಕ್ಷದೊಳಗೆ ಗುರುತಿಸಿಕೊಂಡು ಶಾಸಕ ಪಿ.ರವಿಕುಮಾರ್ ಅವರೊಂದಿಗೆ ಉತ್ತಮ ಒಡನಾಟವಿರಿಸಿಕೊಂಡಿದ್ದಾರೆ. ನಗರಸಭೆಯೊಳಗೆ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಅವರ ಬಳಿಗೆ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದಾರೆ. ಕಾಂಗ್ರೆಸ್‌ನ ಬಹುತೇಕ ಸದಸ್ಯರು ಎಚ್.ಎಸ್.ಮಂಜುಗೆ ಸಾಥ್ ನೀಡಿರುವುದರಿಂದ ಅವರ ಬೆಂಬಲದೊಂದಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಏಕಾಏಕಿ ನಡೆಸಲಾಗುವುದಿಲ್ಲ. ಅದರ ವೇಳಾ ಪಟ್ಟಿಯನ್ನು ಪ್ರಕಟಿಸಬೇಕು, ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕೆಂದರೂ ಒಂದು ವಾರ ಅಥವಾ ಹತ್ತು ದಿನ ಕಾಲಾವಕಾಶ ಬೇಕಿದೆ. ಆದರೆ, ಆಕಾಂಕ್ಷಿಗಳು ಆತುರ ತೋರುತ್ತಿದ್ದು, ಶೀಘ್ರ ವೇಳಾಪಟ್ಟಿ ಪ್ರಕಟಿಸಿ ಸಭೆ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ. ಮತ್ತೆ ಸದಸ್ಯರಾಗಿ ಆಯ್ಕೆಯಾಗುತ್ತೇವೋ ಇಲ್ಲವೋ ಎಂಬ ಕಾರಣದಿಂದ ಇರುವಷ್ಟು ಕಾಲಾವಧಿಯಲ್ಲಿ ಒಮ್ಮೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ದರ್ಬಾರ್ ನಡೆಸಬೇಕೆಂಬ ಆಸೆ ಆಕಾಂಕ್ಷಿಗಳದ್ದಾಗಿದೆ.