ರಾಜ್ಯ ಕಾಂಗ್ರೆಸ್ ಸರ್ಕಾರದ ಲೂಟಿ ಹಣದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಪಾಲು : ಮಾಜಿ ಸಚಿವ ಸಿ.ಟಿ.ರವಿ

| Published : Aug 09 2024, 12:34 AM IST / Updated: Aug 09 2024, 04:11 AM IST

ಸಾರಾಂಶ

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಬೇಕಾದಕ್ಕೆಲ್ಲಾ ಬಳಸಿಕೊಳ್ಳಬಹುದು ಎಂಬುದಕ್ಕಾಗಿಯೇ ಯೋಜನೆ ರೂಪಿಸಿದರೇ. ಹಾಗಾದರೆ ಆ ಯೋಜನೆ ಇರೋದು ದಲಿತರ ಉದ್ಧಾರಕ್ಕಲ್ಲ. ವಾಲ್ಮೀಕಿ ನಿಗಮ ಇರುವುದು ಆ ಸಮುದಾಯದವರ ಅಭಿವೃದ್ಧಿಗಲ್ಲ. ಯೋಜನೆಗಳ ಹೆಸರಿನಲ್ಲಿ ಇವರು ಕೊಳ್ಳೆ ಹೊಡೆಯುವುದಕ್ಕಾ ಇರೋದು.

 ಮಂಡ್ಯ :  ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ನಡೆಸಿರುವ ಹಣ ದುರುಪಯೋಗ ಹಾಗೂ ಮೈಸೂರು ಮುಡಾ ಹಗರಣದ ಬಗ್ಗೆ ರಾಹುಲ್‌ಗಾಂಧಿ ಸೌಂಡ್‌ಲೆಸ್ ಆಗಿದ್ದರೆ ಖರ್ಗೆ ವಾಯ್ಸ್‌ಲೆಸ್ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ಖರ್ಗೆ ಮತ್ತು ರಾಹುಲ್ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿಚಾರವಾಗಿ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ನಡೆಸಿರುವ ಹಗರಣಗಳ ಬಗ್ಗೆ ಬಾಯೇ ಬಿಡುವುದಿಲ್ಲ. ಕರ್ನಾಟಕದಲ್ಲಿ ನಡೆದಿರುವ ಹಣದ ಲೂಟಿಯಲ್ಲಿ ಹೈಕಮಾಂಡ್ ಪಾಲೂ ಇದೆ ಎಂದಂತಾಗಿದೆ. ಭ್ರಷ್ಟಾಚಾರಕ್ಕೆ ಕೈಕಮಾಂಡ್ ಬೆಂಬಲವಾಗಿ ನಿಂತಿರುವುದು ಅವರ ಮೌನದಿಂದಲೇ ತಿಳಿಯುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಬೇಕಾದಕ್ಕೆಲ್ಲಾ ಬಳಸಿಕೊಳ್ಳಬಹುದು ಎಂಬುದಕ್ಕಾಗಿಯೇ ಯೋಜನೆ ರೂಪಿಸಿದರೇ. ಹಾಗಾದರೆ ಆ ಯೋಜನೆ ಇರೋದು ದಲಿತರ ಉದ್ಧಾರಕ್ಕಲ್ಲ. ವಾಲ್ಮೀಕಿ ನಿಗಮ ಇರುವುದು ಆ ಸಮುದಾಯದವರ ಅಭಿವೃದ್ಧಿಗಲ್ಲ. ಯೋಜನೆಗಳ ಹೆಸರಿನಲ್ಲಿ ಇವರು ಕೊಳ್ಳೆ ಹೊಡೆಯುವುದಕ್ಕಾ ಇರೋದು ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್‌ನವರದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಗಳಿಸಿರುವ ಪುಣ್ಯ ಎಷ್ಟು ಎನ್ನುವುದನ್ನು ಅವರ ಆ ದಿನಗಳ ಟ್ರ್ಯಾಪ್ ರೆಕಾರ್ಡ್ಸ್ ಹೇಳುತ್ತವೆ. ಅವರು ಗಳಿಸಿದ ಪುಣ್ಯದಿಂದಲೇ ತಿಹಾರ್ ಜೈಲ್‌ಗೆ ಹೋಗಿಬಂದಿದ್ದಾರೆ. ಇನ್ನೂ ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಮಾತಿನ ಈಟಿಯಿಂದ ತಿವಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ೨೧ ಹಗರಣಗಳ ಬಗ್ಗೆ ಮಾತನಾಡುತ್ತಿದ್ದೀರಿ. ಬ್ಲಾಕ್‌ಮೇಲ್ ಮಾಡುವ ಬದಲು ಕ್ರಮ ವಹಿಸಿ ತನಿಖೆಗೆ ಆದೇಶಿಸಿ. ಈಗ ನಿಮ್ಮದೇ ಸರ್ಕಾರವಿರುವುದರಿಂದ ನಿಮಗೆ ಯಾರು ಅಡ್ಡಿಯಾಗಿದ್ದಾರೆ. ಎಲ್ಲವನ್ನೂ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಸಿ.ಟಿ.ಮಂಜುನಾಥ, ವಿವೇಕ್, ನಾಗಾನಂದ್ ಇದ್ದರು.