ಸಾರಾಂಶ
ರಾಜ್ಯದ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡಿಸಿ ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿ ರಾಜ್ಯಾದ ವಿವಿಧೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆ
ಬೆಂಗಳೂರು : ರಾಜ್ಯದ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡಿಸಿ ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿ ರಾಜ್ಯಾದ ವಿವಿಧೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಜನಾಗ್ರಹ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಹಿಂದೂಗಳ ಕ್ಷೇತ್ರಕ್ಕೆ ಮಾಡುತ್ತಿರುವ ಅಪಪ್ರಚಾರ ಖಂಡನೀಯ. ಇಂತಹ ಆಧಾರ ರಹಿತವಾದ ಅಪಪ್ರಚಾರದಲ್ಲಿ ತೊಡಗಿಕೊಂಡ ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸಭೆ ಬಳಿಕ ಸಹಸ್ರಾರ ಭಕ್ತರು ಶಾಸ್ತ್ರೀ ವೃತ್ತದಿಂದ ಆಡಳಿತ ಸೌಧದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಾಗರ ಪಟ್ಟಣದಲ್ಲಿ ಧರ್ಮಸ್ಥಳ ಭಕ್ತಾಭಿಮಾನಿಗಳ ಜನಾಗ್ರಹ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಧರ್ಮಸ್ಥಳಕ್ಕೆ ಕಳಂಕ ತರುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಜನಾಕ್ರೋಶ ಯಾತ್ರೆಯಲ್ಲಿ ತಾಳಗುಪ್ಪ ಕೂಡ್ಲಿಮಠದ ಸಿದ್ದೇಶ್ವರ ಸ್ವಾಮೀಜಿ, ಬಳಸಗೋಡು ಭೃಂಗೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಚ್.ಹಾಲಪ್ಪ ಪಾಲ್ಗೊಂಡಿದ್ದರು.
ಇನ್ನೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದ ನೂರಾರು ಜನರು, ಹಿಂದೂಗಳ ಪವಿತ್ರ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಎಡಪಂಥೀಯ, ಕಮ್ಯೂನಿಸ್ಟರ ಸುಳ್ಳು ಪ್ರಚಾರಗಳಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ಜಾರಿಗೆ ತರಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
300 ವಾಹನಗಳಲ್ಲಿ ಧರ್ಮಸ್ಥಳಕ್ಕೆ ರ್‍ಯಾಲಿ:
ಚಿಕ್ಕಬಳ್ಳಾಪುರ ಬಿಜೆಪಿ ಘಟಕದ ಸಾವಿರಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಧರ್ಮಸ್ಥಳಕ್ಕೆ 300ಕ್ಕೂ ಹೆಚ್ಚು ವಾಹನಗಳಲ್ಲಿ ರ್‍ಯಾಲಿ ಕೈಗೊಂಡಿದ್ದಾರೆ. ಈ ಬಗ್ಗೆ ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಸರ್ಕಾರ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ. ಯಾರೋ ಮುಸುಕುದಾರಿ ಮತ್ತು ಯೂಟ್ಯೂಬರ್ ಮಾತು ನಂಬಿ ಧರ್ಮ ಒಡೆಯುವ ಪ್ರಯತ್ನ ನಡೆಯುತ್ತಿದೆ. ಸಿಎಂ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು. ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ ಇದ್ದರು.