ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಹಕಾರಿ ರತ್ನ ರಾಜೇಂದ್ರಗೆ ಗೌರವ ಡಾಕ್ಟರೆಟ್‌

| N/A | Published : Mar 29 2025, 01:47 AM IST / Updated: Mar 29 2025, 04:20 AM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉದ್ಯಮಿಗಳಾದ ಡಾ। ಎಂ.ಎನ್‌.ರಾಜೇಂದ್ರ ಕುಮಾರ್‌, ರೋಹನ್‌ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಲಾಗುತ್ತದೆ.

 ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉದ್ಯಮಿಗಳಾದ ಡಾ। ಎಂ.ಎನ್‌.ರಾಜೇಂದ್ರ ಕುಮಾರ್‌, ರೋಹನ್‌ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಲಾಗುತ್ತದೆ.

ಶನಿವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಥ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌, ಭಾರತೀಯ ವಿವಿಗಳ ಸಂಘದ ಉಪಾಧ್ಯಕ್ಷ, ಸೋಮಿಯಾ ವಿದ್ಯಾವಿಹಾರ್‌ ವಿವಿ ಕುಲಪತಿ ವಿ.ಎನ್‌.ರಾಜಶೇಖರನ್‌ ಪಿಳ್ಳೆ ಭಾಗವಹಿಸುವರು ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ತಿಳಿಸಿದರು.

ರಾಜೇಂದ್ರ ಕುಮಾರ್‌ ಪರಿಚಯ:

ಸುಮಾರು ನಾಲ್ಕೂವರೆ ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಿರುವ ಡಾ। ಎಂ.ಎನ್‌.ರಾಜೇಂದ್ರ ಕುಮಾರ್‌ ರಾಜ್ಯ ಕಂಡ ಸಮರ್ಥ ಸಹಕಾರಿ ನಾಯಕ. ಇಂತಹ ಅಭೂತಪೂರ್ವ ಸಾಧಕ. ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರೊಬ್ಬರು ಎರಡು ಗೌರವ ಡಾಕ್ಟರೆಟ್ ಪದವಿ ಪಡೆದಿರುವುದು ಇದೇ ಪ್ರಥಮ. ಇವರು ಈ ಹಿಂದೆ ಶ್ರೀಲಂಕಾದ ಕೊಲಂಬೋ ವಿವಿಯ ಗೌರವ ಡಾಕ್ಟರೆಟ್‌ ಪದವಿ ಪಡೆದಿದ್ದರು.

ಸಾಧನೆಯ ಉತ್ತುಂಗಕ್ಕೆ ಬ್ಯಾಂಕನ್ನು ಕೊಂಡೊಯ್ದು ಇವರ ಅಧ್ಯಕ್ಷತೆಯ ಅವಧಿಯಲ್ಲಿ ಬ್ಯಾಂಕಿನ ಅತ್ಯುತ್ತಮ ನಿರ್ವಹಣೆಗಾಗಿ 22 ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗಳು ಲಭಿಸಿವೆ. ಸ್ವಸಹಾಯ ಗುಂಪುಗಳ ನಿರ್ವಹಣೆಗೆ ಹಾಗೂ ಸಮರ್ಪಕ ಅನುಷ್ಠಾಕ್ಕಾಗಿ 19 ಬಾರಿ ನಬಾರ್ಡ್ ಪ್ರಶಸ್ತಿ ಲಭಿಸಿದೆ. ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೀಡುವ ‘ನಬಾರ್ಡ್ ರಾಜ್ಯ ಪ್ರಶಸ್ತಿ’ 1999 ರಿಂದ 2016ರವರೆಗೆ ಸತತವಾಗಿ ದೊರೆತಿದೆ. ಜಿಲ್ಲೆಯ ಸಹಕಾರ ಚಳವಳಿಯ ಬೆಳವಣಿಗೆಯ ಪ್ರದರ್ಶನ ತೋರ್ಪಡಿಸಿ, ‘ಸಹಕಾರಿ ಸಂಘಟನಾ ಚತುರ’ ಎಂಬ ಬಿರುದು ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಸಂಘಟನಾ ಚತುರತೆಗೆ 2006ರಲ್ಲಿ ದಕ್ಷಿಣ ಕನ್ನಡ ರಾಜೋತ್ಸವ ಪ್ರಶಸ್ತಿ ದೊರೆತಿದೆ.

ರೋಹನ್ ಮೊಂತೆರೋ:

ಮಂಗಳೂರಿನ ಅಭಿವೃದ್ಧಿಗೆ ರೋಹನ್ ಮೊಂತೆರೋ ಕೊಡುಗೆ ಅಪಾರ. ಮಂಗಳೂರಿನ ಅಭಿವೃದ್ಧಿ ಮತ್ತು ಸಮಾಜಮುಖಿ ಚಟುವಟಿಕೆಗಳ ಸಂಜೀವಿನಿಯಾಗಿ ರೋಹನ್ ಹೆಸರು ಮುಂಚೂಣಿಯಲ್ಲಿದೆ. ಪ್ರತಿಭಾವಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರೋಹನ್ ಕಾರ್ಪೊರೇಷನ್ ಸ್ಥಾಪಿಸಿ ನಗರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕನ್ಯಾನ ಸದಾಶಿವ ಶೆಟ್ಟಿ:

ಕಾಸರಗೋಡು ಜಿಲ್ಲೆಯ ಕೇರಳ-ಕರ್ನಾಟಕದ ಗಡಿ ಭಾಗದ ಸಣ್ಣ ಹಳ್ಳಿ ಕೂಳೂರು ಗ್ರಾಮದ ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಯೋಗ ಕ್ಷೇತ್ರದಲ್ಲಿ ಗಳಿಸಿದ 18 ವರ್ಷಗಳ ಅನುಭವದ ಬಳಿಕ ಉದ್ಯಮರಂಗಕ್ಕೆ ಪದಾರ್ಪಣೆ ಮಾಡಿದವರು. ವಿವಿಧ ಸಾಮಾಜಿಕ ಯೋಜನೆಗಳಿಗಾಗಿ ಕಳೆದ 3 ವರ್ಷದಲ್ಲಿ ₹3.5 ಕೋಟಿಗೂ ಅಧಿಕ ಮೊತ್ತ ನೀಡಿದ್ದಾರೆ. ಕೃಷಿ ರಾಸಾಯನಿಕಗಳ ರಫ್ತು ಕ್ಷೇತ್ರದಲ್ಲಿ ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಗಣನೀಯ ಸಾಧನೆಗಾಗಿ ಭಾರತ ಸರ್ಕಾರದಿಂದ ಎಕ್ಸ್‌ಪೋರ್ಟ್‌ ಪ್ರಶಸ್ತಿ ಪಡೆದಿದ್ದಾರೆ.