ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವ ಶನಿವಾರ ಬೆಳಗ್ಗೆ 11 ಗಂಟೆಗೆ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಪಿಎಚ್‌ಡಿ ಸೇರಿದಂತೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪದವಿ ಪ್ರದಾನ ನಡೆಯಲಿದ್ದು, ವಿದ್ಯಾರ್ಥಿಯರೇ ಪಾರಮ್ಯ ಸಾಧಿಸಿದ್ದಾರೆ. ಸಮಾಜಸೇವೆಗೆ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದೆ. ಮೂವರು ವಿದೇಶಿ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ನಡೆಯಲಿದೆ.ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಮಂಗಳಗಂಗೋತ್ರಿಯ ವಿ.ವಿ. ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ -11, ಶಿಕ್ಷಣ ನಿಕಾಯ - 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್‌ಡಿ) ಪಡೆಯಲಿದ್ದಾರೆ. ಇವರಲ್ಲಿ 31 (48.43%) ಪುರುಷರು ಮತ್ತು 33 (51.56%) ಮಹಿಳೆಯರು ಹಾಗೂ 3 (ಪುರುಷ-2, ಮಹಿಳೆ-1) ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಚ್ ಪದವಿ ಪಡೆಯಲಿರುವರು. ಈ ಬಾರಿಯೂ ಪಿಎಚ್‌ಡಿಯಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಅವರು ಹೇಳಿದರು.54 ಚಿನ್ನದ ಪದಕ ಮತ್ತು 56 ನಗದು ಬಹುಮಾನಗಳಿದ್ದು, ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 127 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ 67 (ಸ್ನಾತಕೋತ್ತರ ಪದವಿ- 49 ಮತ್ತು ಪದವಿ-18) ವಿದ್ಯಾರ್ಥಿಗಳಿಗೆ ರ್‍ಯಾಂಕ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರಲ್ಲಿ ಕಲಾ ನಿಕಾಯದ-18, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ- 39, ವಾಣಿಜ್ಯ ನಿಕಾಯದ -08, ಶಿಕ್ಷಣ ನಿಕಾಯದ -02 ವಿದ್ಯಾರ್ಥಿಗಳಿದ್ದಾರೆ ಎಂದರು.ಸ್ನಾತಕ/ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಒಟ್ಟು 25387 ವಿದ್ಯಾರ್ಥಿಗಳು ಹಾಜರಾಗಿದ್ದು 18,723(ಶೇ. 73.75) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕೋತ್ತರ/ಸ್ನಾತಕ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 18,723 ವಿದ್ಯಾರ್ಥಿಗಳಲ್ಲಿ 6,896(ಶೇ. 36.83) ಹುಡುಗರು ಹಾಗೂ 11,826 (ಶೇ. 63.16) ಹುಡುಗಿಯರು.
ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 3,331 ವಿದ್ಯಾರ್ಥಿಗಳು ಹಾಜರಾಗಿದ್ದು 3,152(ಶೇ. 94.63) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕ ಪದವಿ ಪರೀಕ್ಷೆಗೆ ಒಟ್ಟು 22,056 ವಿದಾರ್ಥಿಗಳು ಹಾಜರಾಗಿದ್ದು 15,571 (ಶೇ. 70.60) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 3,152 ವಿದಾರ್ಥಿಗಳಲ್ಲಿ 906 ಹುಡುಗರು ಮತ್ತು 2,245 ಹುಡುಗಿಯರಾಗಿದ್ದಾರೆ. ಸ್ನಾತಕ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 15,571 ವಿದ್ಯಾರ್ಥಿಗಳಲ್ಲಿ 5,990 ಹುಡುಗರು ಮತ್ತು 9,581 ಹುಡುಗಿಯರಿದ್ದಾರೆ ಅವರು ಹೇಳಿದರು.ಆಡಳಿತ ವಿಭಾಗ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಂಗಪ್ಪ ಇದ್ದರು.
............................ಮೂವರು ವಿದೇಶಿ ವಿದ್ಯಾರ್ಥಿಗಳಿಗೆ ಪಿಎಚ್ಡಿಪ್ರಸಕ್ತ ಸಾಲಿನ ಘಟಿಕೋತ್ಸವದಲ್ಲಿ ಮೂರು ಮಂದಿ ವಿದೇಶಿ ವಿದ್ಯಾರ್ಥಿಗಳು (ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ) ಪಿಎಚ್‌ಡಿ ಪದವಿ ಸ್ವೀಕರಿಸಲಿದ್ದಾರೆ. ಕಳೆದ ವರ್ಷ 11 ಮಂದಿ ವಿದೇಶಿ ವಿದ್ಯಾರ್ಥಿಗಳು ಪಿಎಚ್‌ಡಿ ಪಡೆದಿದ್ದರು. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಹಾಗೂ ಸ್ನಾತಕ ಸೇರಿ 84 ಮಂದಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬರು ಬಾಂಗ್ಲಾದೇಶದ ಪ್ರಜೆಯೂ ಸೇರಿದ್ದಾರೆ ಎಂದು ಪ್ರೊ. ಧರ್ಮ ತಿಳಿಸಿದರು.ಘಟಿಕೋತ್ಸವದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಮತ್ತು ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೆ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿರುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹಲೋಥ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ಉನ್ನತ ಶಿಕ್ಷಣ ಸಚಿವ ಹಾಗೂ ಸಹಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಭಾಗವಹಿಸುವರು ಎಂದು ಅವರು ಹೇಳಿದರು.
ಈ ಬಾರಿ ಬೆಳಗ್ಗೆ 11ರಿಂದ 12 .30ರ ವರೆಗೆ ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯಪಾಲರೇ ಪದವಿ ಪ್ರದಾನ ನೆರವೇರಿಸಲಿದ್ದಾರೆ. ಅಲ್ಲದೆ ಈ ವಿದ್ಯಾರ್ಥಿಗಳಿಗೆ ತಲಾ 500 ರು. ನಗದು ಮೊತ್ತ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಪ್ರಥಮ ಬ್ಯಾಚ್ ಪದವಿ ಸ್ವೀಕರಿಸಲಿದೆ ಎಂದರು.