ಸಾರಾಂಶ
ಮೈಸೂರು : ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಶಕ್ತನಾಗಿದ್ದೇನೆ ಎಂದು ಶಾಸಕ, ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನರಚನೆಗೆ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. 7 ಸಚಿವ ಸ್ಥಾನ ಬದಲಿಸುವ ಸಾಧ್ಯತೆ ಇದೆ. 20 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದರು.
ನನಗೇ ಸಚಿವ ಸ್ಥಾನ ನೀಡುವ ಸಂಬಂಧ ಪಕ್ಷದ ವರಿಷ್ಠರ ಜೊತೆ ಮಾತಾಡಿದ್ದೇನೆ. ವರಿಷ್ಠರು, ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇದೆ. ಅವಕಾಶ ಸಿಗುವವರೆಗೂ ಕಾಯುತ್ತೇನೆ. ಅವಕಾಶ ಸಿಕ್ಕರೆ ರಾಜ್ಯದಲ್ಲಿ ಮಾಡಬೇಕಾದ ಅನೇಕ ಕೆಲಸ ಇದೆ. ಹುಟ್ಟೂರು ಮೈಸೂರಿಗೆ ಹೆಚ್ಚು ಆದ್ಯತೆ ಕೊಡುತ್ತೇನೆ ಎಂದರು.
ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ. 135 ಶಾಸಕರ ಬಲದೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲು ಸಿದ್ದರಾಮಯ್ಯ, ತದನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಎಂದು ಚರ್ಚೆಯಾಗಿತ್ತು. ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣಾ ಸಮಯ ಸಾಕಷ್ಟು ಚರ್ಚೆ ಆಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ವಿತ್ತ ಸಚಿವರಾಗ್ತಾರೆ ಅಂತ ಚರ್ಚೆಯಿತ್ತು. ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ . ಹೀಗಾಗಿ ಸಿಎಂ ಆಗಿ ರಾಜ್ಯದಲ್ಲಿ ಮುಂದುವರಿದಿದ್ದಾರೆ. ಸದ್ಯ ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ಸಚಿವ ಜಮೀರ್ ಅವರನ್ನ ತೆಗೆದು ನನಗೆ ಕೊಡ್ತಾರೆ ಅಂದುಕೊಂಡಿಲ್ಲ. ನನಗೆ ಅವಕಾಶ ಇದ್ದರೆ ಸಿಕ್ಕೇ ಸಿಗುತ್ತೆ. ಅಲ್ಪಸಂಖ್ಯಾತ ಕೋಟದಲ್ಲಿ ಕೇವಲ ಎರಡು ಸ್ಥಾನ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಮೂರು ಸ್ಥಾನ ಕೊಡಿ ಎಂದು ಮನವಿಯಷ್ಟೆ. ನಾನು ಪಕ್ಷದಲ್ಲಿದ್ದೇನೆ, ಸಿದ್ಧಾಂತ ಒಪ್ಪಿಕೊಂಡಿದ್ದೇನೆ. ಯಾರನ್ನೂ ತೆಗೆದು ನನಗೆ ಕೊಡಿ ಎಂದು ನಾನು ಕೇಳಲ್ಲ. ಈ ಬಾರಿ ಪುನಾರಚನೆ ಆದಾಗ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ನಾನು ಯಾವುದೇ ವ್ಯಕ್ತಿ ಪೂಜೆ ಮಾಡಲ್ಲ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ, ಇಲ್ಲವಾದರೆ ಜನರ ಸೇವೆ ಮಾಡುತ್ತೇನೆ ಎಂದರು.
ಸ್ವಪಕ್ಷದವರಿಗೆ ಟಾಂಗ್:
ನಮ್ಮ ಒಬ್ಬ ಸಚಿವರು ದೇವೇಗೌಡರ ಕುಟುಂಬ ಖರೀದಿ ಮಾಡ್ತೀನಿ ಅಂದರು. ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ನಿರ್ನಾಮ ಮಾಡ್ತೀವಿ ಅಂದ್ರು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ನಿರ್ನಾಮ ಮಾಡುವ ದರಿದ್ರ ಬಂದಿಲ್ಲ. ಯಾರ್ಯಾರು, ಎಲ್ಲಿ ಇದ್ದಾರೆ ಅವರು ಅಲ್ಲ ಅವರ ಕೆಲಸ ಮಾಡಲಿ ಎಂದು ಸ್ವಪಕ್ಷದ ಸಚಿವರು, ಶಾಸಕರಿಗೆ ಟಾಂಗ್ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊಡ್ಡದು. ಅದನ್ನು ನಿಭಾಯಿಸುವ ಸಮಯ, ಶಕ್ತಿ ನನಗಿಲ್ಲ. ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆಯವರು ಅದಕ್ಕೆ ಅರ್ಹರಲ್ಲ. ಅವರ ಶ್ರಮ, ಕಾರ್ಯ ಅತಿ ಹೆಚ್ಚಿನದು ಎಂದರು.
ಮುಡಾದಿಂದ 5೦:5೦ ಅನುಪಾತದಲ್ಲಿ ಕೊಟ್ಟಿರುವ ನಿವೇಶನಗಳನ್ನು ವಾಪಸ್ ಪಡೆಯಲಿ: ತನ್ವೀರ್ ಸೇಠ್ ಆಗ್ರಹ
ಮುಡಾದಿಂದ 5೦:5೦ ಅನುಪಾತದಲ್ಲಿ ಕೊಟ್ಟಿರುವ ನಿವೇಶನಗಳನ್ನು ವಾಪಸ್ ಪಡೆಯಲಿ ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ಅಡಿ 6 ಅಡಿ ಜಾಗ ಒಂದು ನನಗೆ ನಿಗದಿಯಾಗಿದೆ. ಮುಡಾದಲ್ಲಿ ನನ್ನ ಆಸ್ತಿ ಏನೂ ಇಲ್ಲ. ದುರಾಸೆ ಇಟ್ಟುಕೊಂಡು ನಾನು ರಾಜಕಾರಣ ಮಾಡಿಲ್ಲ. ಈಗಾಗಲೇ ಮೂರು ದಿಕ್ಕಿನಿಂದಲೂ ತನಿಖೆ ನಡೆಯುತ್ತಿದೆ. ತನಿಖೆ ನಂತರ ಅರ್ಹರಿಗೆ ನಿವೇಶನ ಕೊಡಬೇಕು ಎಂದರು.
ಮುಡಾದಲ್ಲಿ ನಕ್ಷೆ ಅನುಮೋದನೆ, ನಿವೇಶನ ಬಿಡುಗಡೆ ಜವಾಬ್ದಾರಿ ಇದೆ. ನಿವೇಶನಕ್ಕೆ ಜಮೀನು ವಶಪಡಿಸಿಕೊಳ್ಳುವುದನ್ನ ಸರಿಯಾಗಿ ಮಾಡಿಲ್ಲ. ಕಂದಾಯ, ಖಾತೆ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಪಾಲಿಕೆ ವ್ಯಾಪ್ತಿಯ ದುಪ್ಪಟ್ಟು ನಿವೇಶನ ಪ್ರಾಧಿಕಾರದಿಂದ ಹಂಚಿಕೆಯಾಗಿದೆ. ಮುಡಾದ ಸಭೆಯಲ್ಲಿ ಸಿಎಂ ಪತ್ನಿ ವಿಚಾರ ಚರ್ಚೆಯಾಗಿತ್ತು. ಯಾವುದೇ ಸ್ಪಷ್ಟ ನಿಯಮಾವಳಿಗಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.