ನನಗೀಗ ಪ್ರಾಣ ಬೆದರಿಕೆ ಕರೆ ಬರುತ್ತಿವೆ : ನನಗೇನಾದರೂ ಆದರೆ ಡಿಕೆಶಿ, ಲಕ್ಷ್ಮೀ, ಸರ್ಕಾರವೇ ಹೊಣೆ - ಸಿ.ಟಿ. ರವಿ

| Published : Dec 22 2024, 01:32 AM IST / Updated: Dec 22 2024, 04:22 AM IST

ಸಾರಾಂಶ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿವಾದ ಬಳಿಕ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆ ಇರುವ ಕಾರಣ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕು ಎಂದು ಸರ್ಕಾರವನ್ನು   ಸಿ.ಟಿ.ರವಿ ಆಗ್ರಹಿಸಿದ್ದಾರೆ.

 ಬೆಂಗಳೂರು :  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿವಾದ ಬಳಿಕ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆ ಇರುವ ಕಾರಣ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕು ಎಂದು ಸರ್ಕಾರವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಸಮರ್ಥಿಸಿಕೊಂಡ ಅವರು, ನನ್ನ ರಾಜಕೀಯ ಜೀವನದುದ್ದಕ್ಕೂ ನಾನೆಂದೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದರು.

ನನ್ನ ಹತ್ಯೆಗೆ ಸಂಚು:

ಇದೇ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡ ಬಳಿಕ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ನನ್ನನ್ನು ಪೊಲೀಸರು ಜತೆಗೆ ಕರೆದೊಯ್ಯವಾಗ ನಾನು ದೂರವಾಣಿಯಲ್ಲಿ ಮಾತನಾಡುತ್ತಿದ್ದೆ. ಈ ಬಗ್ಗೆ ಜತೆಗಿದ್ದ ಪೊಲೀಸರಿಗೆ ಕರೆ ಮಾಡಿದ್ದ ಮೇಲಾಧಿಕಾರಿಗಳು ಫೋನ್​ನಲ್ಲಿ ಮಾತನಾಡಲು ಅವರಿಗೆ (ಸಿ.ಟಿ.ರವಿಗೆ) ಅವಕಾಶ ಏಕೆ ನೀಡುತ್ತಿದ್ದೀರಿ? ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ಅನುಮಾನ ಇದೆ. ಅಲ್ಲದೇ, ಪ್ರಕರಣ ನಡೆದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆಯೊಡ್ಡುತ್ತಿದ್ದಾರೆ. ನನ್ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಕರೆ ಮಾಡುತ್ತಿರುವವರ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕು. ಪೊಲೀಸರಿಂದ ನಿಷ್ಪಕ್ಷಪಾತ ತನಿಖೆಯಾಗಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಏನೋ ಸಂಚು ನಡೆಸಿದ್ದರು ಎಂಬುದು ನನಗೆ ಅನುಮಾನ. ಬಹುಶಃ ಗುಂಪು ಸೇರಿಸಿ ನನ್ನನ್ನು ಸಾಯಿಸಲು ಸಂಚು ನಡೆಸಲಾಗಿತ್ತು ಎಂಬ ಅನುಮಾನ ಇತ್ತು. ಯಾಕೆಂದರೆ ಸುವರ್ಣಸೌಧದಲ್ಲೇ ಧಮ್ಕಿ ಹಾಕಲಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ಇದೆಲ್ಲವನ್ನೂ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟೆ. ನಾನು ನೀಡಿದ ದೂರು ಸ್ವೀಕಾರ ಮಾಡಿಲ್ಲ. ಎಫ್​ಐಆರ್ ಆಗಿಲ್ಲ. ನನ್ನ ಮೇಲಿನ ಹಲ್ಲೆಗೆ ವಿಡಿಯೋಗಳಿವೆ. ನನ್ನ ಹಕ್ಕು ಕಸಿದುಕೊಳ್ಳಲಾಗಿದ್ದು, ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ. ನನಗೆ ಈಗಲೂ ಜೀವ ಬೆದರಿಕೆ ಇದೆ. ನನಗೆ ಏನೇ ಆದರೂ ಅದಕ್ಕೆ ಅವರೇ ಡಿ.ಕೆ.ಶಿವಕುಮಾರ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಜವಾಬ್ದಾರರು ಎಂದು ವಾಗ್ದಾಳಿ ನಡೆಸಿದರು.

ಕುಡಿಯಲು ನೀರು ಕೊಡದ ಪೊಲೀಸರು:

ಬೆಳಗಾವಿಯಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ವಾಂತಿಯಾಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಹಿಂದೆ ಬರುತ್ತಿದ್ದ ಮಾಧ್ಯಮಗಳ ವಾಹನ, ನನ್ನ ಆಪ್ತಸಹಾಯಕನ ವಾಹನವನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದರು. ಬಂಧನಕ್ಕೆ ಕಾರಣ ಕೇಳಿ ಡೋರ್ ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ. ಪತ್ನಿಗೆ ಲೈವ್ ಲೊಕೇಶನ್ ಹಾಕಿದಾಗ ಅವರು ಕರೆ ಮಾಡಿ ವಿಚಾರಿಸಿದರು. ಆಗ ಗಾಬರಿ ಪಡದಂತೆ ಸಮಾಧಾನ ಮಾಡಿದೆ ಎಂದರು.

ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ವಾಹನ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಡಿವೈಎಸ್ಪಿ ಕಚೇರಿಗೆ ಕರೆದೊಯ್ದ ವೇಳೆ ವಿಧಾನಪರಿಷತ್‌ ಸದಸ್ಯ ಕೇಶವ ಪ್ರಸಾದ್ ಸೇರಿಕೊಂಡರು. ಅವರು ಜೋರು ಮಾಡಿದರು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ರಾತ್ರಿ 11.45ರಿಂದ ಬೆಳಗಿನ 3ರವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ, ವಾಶ್ ರೂಮಿಗೆ ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ವಿವರಿಸಿದರು.

ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ. ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿ ಕ್ರಮ ತೆಗೆದುಕೊಳ್ಳಬಹುದು. ಇದರಲ್ಲಿ ಯಾವುದೇ ಅಭ್ಯಂತರವಿಲ್ಲ. ಪರಿಷತ್‌ನಲ್ಲಿ ಕಾನೂನು ಕ್ರಮ ಜರುಗಿಸಲು ಸಭಾಪತಿಗೆ ಅವಕಾಶವಿದೆ. ನನ್ನ ದನಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಿ, ಅಲ್ಲಿ ಧ್ವನಿ ಮುದ್ರಣ, ಫೋನ್ ದಾಖಲಾತಿ, ಸ್ಟೆನೋ ಎಲ್ಲವೂ ಇರುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಾನು ಆಕ್ಷೇಪಾರ್ಹ ಪದ ಬಳಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಸಭಾಪತಿಯವರೇ ರೂಲಿಂಗ್ ಕೊಟ್ಟಿದ್ದಾರೆ ಎಂದರು.

ನಿಯಮಗಳಿಗೆ ಮಾಡಿದ ಅವಮಾನ:

ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನೆಂದೂ ಯಾರನ್ನೂ ನೋಯಿಸುವ ರಾಜಕಾರಣ ಮಾಡಿಲ್ಲ. ಆದರೆ ಪ್ರಸಕ್ತ ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ. ಸ್ಪೀಕರ್‌ ಅನುಮತಿಯಿಲ್ಲದೇ ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಿದ್ದು ನಿಯಮಗಳಿಗೆ ಮಾಡಿದ ಅವಮಾನ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಡಿಕೆಶಿಗೆ ಮಾರುತ್ತರ: ಹಿರಿಯ ಸಚಿವರೊಬ್ಬರು ನನ್ನ ಪ್ರಕರಣ ಕುರಿತಂತೆ ಇದು ಚಿಕ್ಕಮಗಳೂರಿನ ಸಂಸ್ಕೃತಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಲೆನಾಡು ಮತ್ತು ಚಿಕ್ಕಮಗಳೂರು ಸಂಸ್ಕೃತಿ ಏನೆಂಬುದು ರಾಜ್ಯದ ಜನತೆಗೆ ಗೊತ್ತು. ನಮಲ್ಲಿ ಏಕವಚನದಲ್ಲೇ ಮಾತನಾಡಲು ಹಿಂದೆಮುಂದೆ ನೋಡುತ್ತಾರೆ. ಅವರ ಹಿನ್ನೆಲೆ ಏನೆಂಬುದು ನೋಡಿಕೊಳ್ಳಲಿ, ನನ್ನ ಹಿನ್ನೆಲೆ ಏನೆಂಬುದನ್ನು ಜಿಲ್ಲೆಯ ಜನತೆ ನೋಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬೆಂಗಳೂರು : ಬಿಜೆಪಿ ನಾಯಕರು ತಮ್ಮ ಆಕ್ಷೇಪಾರ್ಹ ಹೇಳಿಕೆಯನ್ನು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಆಡಳಿತ ಮಾಡುವಾಗ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು ಎಂಬುದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಇದೇ ವೇಳೆ, ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಲು ನೀವೇ (ಡಿಕೆಶಿ) ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ವಿಚಾರದಲ್ಲಿ ಅವರುಂಟು, ಪೊಲೀಸರುಂಟು. ಅವರ ಮನೆಯಲ್ಲಿ ಏನೇ ಆದರೂ, ಅವರ ಪಕ್ಷದಲ್ಲಿ ಏನೇ ಆದರೂ ನಾನೇ ಕಾರಣ ಎಂಬಂತೆ ಮಾತನಾಡುತ್ತಾರೆ. ನನ್ನನ್ನು ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.ಸದಾಶಿವನಗರದ ತಮ್ಮ ನಿವಾಸ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀನ ಮಾತುಗಳೇ ತಮ್ಮ ಸಂಸ್ಕೃತಿ ಎಂದು ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ.

 ಮಹಿಳಾ ಸಚಿವೆ ಮೇಲೆ ಹೀನ ಹೇಳಿಕೆ ನೀಡಿ, ಈಗ ಅದನ್ನು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ. ಅವರ ಆಡಳಿತದಲ್ಲಿ ಪೊಲೀಸರನ್ನು ಹೇಗೆಲ್ಲ ಬಳಸಿಕೊಂಡಿದ್ದರು ಎಂಬುದು ತಿಳಿದಿದೆ. ಸಿ.ಟಿ.ರವಿ ಕೇವಲ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬಗ್ಗೆ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತುಗಳನ್ನಾಡಿದ್ದಾರೆ. 

ಸದನದಲ್ಲಿ ನಿತ್ಯ ಸುಮಂಗಲಿ ಎಂಬ ಪದವನ್ನೂ ಬಳಕೆ ಮಾಡಿದ್ದಾರೆ. ಸಿ.ಟಿ.ರವಿ ಆಡಿರುವ ಮಾತುಗಳು ಸರಿಯೋ, ತಪ್ಪೋ ಎಂಬುದನ್ನು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ನಮ್ಮ ಪಕ್ಷದ ಯಾವುದೇ ನಾಯಕರು ಆ ರೀತಿಯ ಹೇಳಿಕೆ ನೀಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ, ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಶಾಸಕ ಮುನಿರತ್ನ ಅವರ ಜಾತಿನಿಂದನೆ ಪ್ರಕರಣದಲ್ಲಿ ಎಫ್‌ಎಸ್‌ಎಲ್‌ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದರು. ಆದರೆ, ಆ ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ, ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಅವರ ನಾಯಕತ್ವವನ್ನು ಪ್ರದರ್ಶಿಸುತ್ತಿದೆ. ಅವರ ಮುತ್ತುರತ್ನಗಳನ್ನು ಅವರೇ ಇಟ್ಟುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಕೊನೆ ಹಾಡುತ್ತೇವೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಲೆಕ್ಕ ಚುಕ್ತಾ ಮಾಡುವುದನ್ನು ಬಹಳ ನೋಡಿದ್ದೇವೆ. ಅವರು ಕೊನೆಯಾಗಿಸುವುದಾದರೆ ಬಹಳ ಸಂತೋಷ. ಅವರೊಬ್ಬರಿಗೇ ಲೆಕ್ಕ ಚುಕ್ತಾ ಮಾಡುವುದು ಬರುತ್ತದೆಯೇ? ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ. ಏನೇ ಆದರೂ, ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ ಎಂದರು.

  ಬೆಳಗಾವಿ : ಸದನದಲ್ಲಿ ಶಾಸಕ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಘಟನೆ ಆಗಿ ಹೋಗಿದೆ. ಈಗ ಈ ಪ್ರಕರಣವನ್ನು ಮುಂದುವರಿಸುವುದರಲ್ಲಿ ಅರ್ಥ‌ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ದೇಶದಲ್ಲಿ ಇಂತಹ ಘಟನೆಗಳು ಹೊಸದಲ್ಲ. ಈ ಹಿಂದೆ ಸಂಸತ್‌, ವಿಧಾನಸಭೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಕ್ಷಮೆ ಕೇಳಿದ ಬಳಿಕ ಆಯಾ ಪ್ರಕರಣಗಳು ಮುಗಿದು ಹೋಗಿವೆ. ಆದರೆ, ಬೆಳಗಾವಿಯ ಸುವರ್ಣಸೌಧದಲ್ಲಿ ಇಂತಹ ಪ್ರಕರಣ ಈ ಹಿಂದೆ ಆಗಿರಲಿಲ್ಲ. ತಾವು ಅವಾಚ್ಯ ಶಬ್ದ ಬಳಸಿಲ್ಲ ಎಂದು ಸಿ.ಟಿ.ರವಿಯವರೇ ಹೇಳುತ್ತಿದ್ದಾರೆ. ಹೀಗಾಗಿ, ಕೇಸ್‌ ಅನ್ನು ಇಲ್ಲಿಗೆ ಮುಗಿಸಿದರೆ ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣವನ್ನು ಮುಂದುವರಿಸುವುದು ಅನವಶ್ಯಕ ಎಂದು ಅವರು ಹೇಳಿದರು.

ಸಿ.ಟಿ.ರವಿಯನ್ನು ಇಡೀ ರಾತ್ರಿ ಪೊಲೀಸ್‌ ವಾಹನದಲ್ಲಿ ಸುತ್ತಾಡಿಸಿದ ಕುರಿತು ಪ್ರತಿಕ್ರಿಯಿಸಿ, ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪೊಲೀಸರು ಖಾನಾಪುರದಿಂದ ಅವರನ್ನು ಶಿಫ್ಟ್ ಮಾಡಿದ್ದರು. ಅಲ್ಲಿ ಬಿಜೆಪಿಯವರು ಬಂದು ತೊಂದರೆ ನೀಡಿದ್ದರಿಂದ ರವಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸರು ಅವರನ್ನು ರೌಂಡ್ಸ್‌ ಹೊಡಿಸಿದ್ದಾರೆ. 

ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಯಾರ ನಿರ್ದೇಶನದ ಮೇರೆಗೆ ಸಿ.ಟಿ.ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಿ.ಟಿ.ರವಿಯವರನ್ನು ರಾತ್ರಿಯೇ ಕೋರ್ಟ್‌ಗೆ ಹಾಜರುಪಡಿಸುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ‌ಪೊಲೀಸರು ಅಷ್ಟು ಮಾಡಿದ್ದರೆ ಇಷ್ಟೆಲ್ಲ ರಾದ್ಧಾಂತ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಸುಳ್ಳು ಆರೋಪದಡಿ ಬಂಧಿಸಿ ಕಿರುಕುಳ

ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಭ್ಯಂತರವಿಲ್ಲ. ನನ್ನ ಧ್ವನಿಯನ್ನು ವಿಧಿವಿಜ್ಞಾನ ಲ್ಯಾಬ್‌ಗೆ ಕಳಹಿಸಿಕೊಡಲಿ. ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ. ಸ್ಪೀಕರ್‌ ಅನುಮತಿಯಿಲ್ಲದೇ ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಿದ್ದು ನಿಯಮಗಳಿಗೆ ಮಾಡಿದ ಅವಮಾನ.

- ಸಿ.ಟಿ. ರವಿ, ಮೇಲ್ಮನೆ ಸದಸ್ಯ