ಕಾಂಗ್ರೆಸ್ಸಿಗರು ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ನಾನು ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದೇನೆ- ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ಕಾಂಗ್ರೆಸ್ಸಿಗರು ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ನಾನು ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದೇನೆ. ಏನೂ ಚಿಂತೆ ಬೇಡ, ಇನ್ನೂ ನಿಮ್ಮ ಜೊತೆ ಹದಿನೈದು ಇಪ್ಪತ್ತು ವರ್ಷ ಇರುತ್ತೇನೆ. ಜನತಾದಳವೂ ಇರುತ್ತದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್‌ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜೆಡಿಎಸ್‌’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ನನಗೆ ಮೂರು ಬಾರಿ ಹಾರ್ಟ್‌ ಆಪರೇಷನ್‌ ಆಗಿದೆ. ಎರಡು ಬಾರಿ ಸ್ಟ್ರೋಕ್‌ ಆಗಿದೆ. ಆದರೂ ನಾನು ಆರೋಗ್ಯವಾಗಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಜೆಡಿಎಸ್ ಬಿಟ್ಟು ಬನ್ನಿ ಎನ್ನುವವರಿಗೆ ಈ ಸಭೆಯ ಮೂಲಕ ಉತ್ತರ ಕೊಟ್ಟಿದ್ದೀರಿ. ಧೈರ್ಯದಿಂದ ಪಕ್ಷ ಸಂಘಟನೆ ಮಾಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೈಲಾಗದವರು ಅಪಪ್ರಚಾರ ಮಾಡುತ್ತಾರೆ. ಅವರಿಗೆಲ್ಲ ದಿಟ್ಟ ಉತ್ತರ ಕೊಡೋಣ ಎಂದರು.