ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನೇ ಬಂಡೆ, ನಾನೇ ಬಲ. ನಾನು ಎಲ್ಲಾ ಕಾಲಕ್ಕೂ ಮುಖ್ಯಮಂತ್ರಿ ಪರ. ನಾನು ಮಾತ್ರವಲ್ಲ, ನಮ್ಮ ಇಡೀ ಪಕ್ಷವೇ ಮುಖ್ಯಮಂತ್ರಿ ಪರ ಗಟ್ಟಿಯಾಗಿ ನಿಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನೇ ಬಂಡೆ, ನಾನೇ ಬಲ. ನಾನು ಎಲ್ಲಾ ಕಾಲಕ್ಕೂ ಮುಖ್ಯಮಂತ್ರಿ ಪರ. ನಾನು ಮಾತ್ರವಲ್ಲ, ನಮ್ಮ ಇಡೀ ಪಕ್ಷವೇ ಮುಖ್ಯಮಂತ್ರಿ ಪರ ಗಟ್ಟಿಯಾಗಿ ನಿಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ವೇದಿಕೆ ಸಿದ್ಧತೆಯನ್ನು ಗುರುವಾರ ಸಂಜೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ವಲ್ಪ ಎಮೋಷನಲ್ ಮ್ಯಾನ್. ಹೀಗಾಗಿ ಈ ವಿಚಾರವನ್ನು ಸ್ವಲ್ಪ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ಏನಾದರೂ ಹಗರಣ ಮಾಡಿದರೆ ಅವರು ಅರಗಿಸಿಕೊಳ್ಳುತ್ತಿದ್ದರು. ಆದರೆ ಏನೂ ಮಾಡದ ಕಾರಣ ಆ ರೀತಿಯ ಆರೋಪದಿಂದ ಅವರಿಗೆ ನೋವಾಗಿರುವುದು ಸಹಜ ಎಂದರು.
ನನ್ನನ್ನು ಜೈಲಿಗೆ ಹಾಕಿದರು, ನೋಟಿಸ್ ಕೊಟ್ಟರು, ಮಿಲಟರಿಯವರು ಬಂದು ನನ್ನನ್ನು ಅರೆಸ್ಟ್ ಮಾಡುತ್ತಾರೆ ಅಂದರು, ಆದರೆ ನಾನು ಯಾವುದಕ್ಕೂ ಜಗ್ಗಿಲ್ಲ. ನಮ್ಮ ಹೋರಾಟ ನಮ್ಮದು. ನಮ್ಮನ್ನು ಜೆಡಿಎಸ್-ಬಿಜೆಪಿ ಅವರು ಇನ್ನೂ ಹೀನಾಯವಾಗಿ ಬೈಯಲಿ, ನನಗೇನೂ ಸಮಸ್ಯೆ ಇಲ್ಲ. ನಾನು ಕೇಳುವ ಪ್ರಶ್ನೆಗೆ ಅವರು ಉತ್ತರ ಕೊಡಬೇಕು ಅಷ್ಟೆ ಎಂದು ಹೇಳಿದರು.
ಸಚಿವ ಸ್ಥಾನ ಹೋಗುವ ಭಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪಾದಯಾತ್ರೆಗೆ ಬಂದಿದ್ದಾರೆ. ಶತ್ರುಗಳ ಶತ್ರು ಮಿತ್ರ ಎಂಬ ಸ್ಥಿತಿಯಲ್ಲಿ ಜೆಡಿಎಸ್-ಬಿಜೆಪಿಯವರು ಇದ್ದಾರೆ. ಅವರ ಹೋರಾಟದಲ್ಲಿ ಎಲ್ಲಾ ಕಡೆ ಜಗಳವಿದೆ. ನಾವು ಅದಕ್ಕೆ ಉತ್ತರ ಕೊಡಲು ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಿಎಂ ಇರ್ತಾರೆ: ಡಿಕೆಶಿ
ನೀವು ಯಾವ ಸಮಾವೇಶಕ್ಕೂ ಬರುವುದು ಬೇಡ. ನಾವೇ ಜೆಡಿಎಸ್-ಬಿಜೆಪಿಯನ್ನು ಎದುರಿಸುತ್ತೇವೆ, ಅವರಿಗೆ ನಾವೇ ಸಾಕು ಎಂದು ಮುಖ್ಯಮಂತ್ರಿಗೆ ಹೇಳಿದ್ದು ನಾನೇ. ಮೈಸೂರು ತವರೂರಾದ ಕಾರಣ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ಸಮಾವೇಶಕ್ಕೂ ಅವರು ಬರುವ ಅವಶ್ಯಕತೆ ಇರಲಿಲ್ಲ. ಜೆಡಿಎಸ್-ಬಿಜೆಪಿಗೆ ನಾವೇ ಸರಿಯಾಗಿ ಉತ್ತರ ಕೊಡುತ್ತೇವೆ. ಆದರು ಬರುತ್ತೇವೆ, ಬಂದು ಕೆಲ ವಿಚಾರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.
ಜೆಡಿಎಸ್-ಬಿಜೆಪಿ ವಿರುದ್ಧ ಮಾತನಾಡಲು ನಮ್ಮ ಬಳಿ ಸಾಕಷ್ಟು ವಿಷಯ ಇದೆ. ಮೊದಲು ಟ್ರೈಲರ್ ನೋಡಿ. ಈಗಲೇ ಸಿನಿಮಾ ಎಂಡ್ ಆಗಲ್ಲ. ಇನ್ನೂ ಮಾತನಾಡಲು ಬಹಳಷ್ಟಿದೆ. ಅದನ್ನೆಲ್ಲ ಶುಕ್ರವಾರ ಮಾತನಾಡುತ್ತೇವೆ ಎಂದು ಹೇಳಿದರು.