ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಬೇಡ ಅಂದ್ರೆ ನಾನು ನಿಲ್ಲುವುದಿಲ್ಲವೆಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ದೇಶ ಮುಖ್ಯವಾಗುತ್ತದೆ. ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.
ವೈಯುಕ್ತಿಕ ವಿಚಾರಗಳು ಎಲ್ಲರ ಬಳಿ ಇದ್ದೇ ಇರುತ್ತವೆ. ಮಾಜಿ ಸಚಿವ ಜೆ.ಮಾಧುಸ್ವಾಮಿ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆಂಬುದು ಗೌಣ. 28 ಕ್ಷೇತ್ರಕ್ಕೆ 28 ಜನಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇರುತ್ತದೆ, 29ಕ್ಕೆ ಅಲ್ಲ. ನನಗೂ ತುಮಕೂರಿಗೆ ಅವಿನಾಭಾವ ಸಂಬಂಧವಿದೆ. ಸಿದ್ಧಗಂಗಾ ಮಠಕ್ಕೆ ವಿಶ್ವಕ್ಕೆ ಪರಿಚಯಿಸುವಲ್ಲಿ ನನ್ನ ಸೇವೆಯೂ ಇದೆ ಎಂದರು.
ಮಾಧುಸ್ವಾಮಿಗೆ ಒಮ್ಮೆ ಕರೆ ಮಾಡಿ ಮಾತನಾಡುವುದಿದೆ, ಬರಲೇ ಎಂದಾಗ ಬರಬೇಡಿ ಅಂದರು. ಆದರೂ ಇನ್ನೊಮ್ಮೆ ಕೇಳಿ ನೋಡುತ್ತೇನೆ. ಒಪ್ಪಿಗೆ ಸೂಚಿಸಿದರೆ ಭೇಟಿಗೆ ಹೋಗುತ್ತೇನೆ. ಮಾಧುಸ್ವಾಮಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಕೆಲಸ ಮಾಡುತ್ತಿದ್ದೆ.
ಬಸವರಾಜುಗೆ ಟಿಕೆಟ್ ಕೊಟ್ಟಾಗಲೂ ಕೆಲಸ ಮಾಡಿದ್ದೇನೆ. ಮಾಧುಸ್ವಾಮಿ ಬುದ್ಧಿವಂತರು, ಪ್ರಜ್ಞಾವಂತರು, ಅವರ ತೀರ್ಮಾನ ಗೊತ್ತಿಲ್ಲವೆಂದರು. ಕೆ.ಎಸ್. ಈಶ್ವರಪ್ಪ ನಮ್ಮ ಪಕ್ಷದ ಬೆನ್ನೆಲುಬು, ಕೇಂದ್ರದ ನಾಯಕರು ಸರಿ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸೋಮಣ್ಣ ಉತ್ತರಿಸಿದರು.
ಈ ಮಧ್ಯೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಮಾಜ ಸೇವಕ ಎಸ್.ಪಿ. ಚಿದಾನಂದ ಅವರ ತುಮಕೂರಿನ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.