ಸಾರಾಂಶ
ನಿಜಕ್ಕೂ ಸಂಪುಟ ಪುನಾರಚನೆಯಾಗುವುದೇ? ಸಚಿವರು ಬದಲಾಗುವರೇ? ಈ ಬಾರಿ ಸಲೀಂಗೆ ಅವಕಾಶ ಸಿಗುವುದೇ? ಅಲ್ಪಸಂಖ್ಯಾತ ಸಿಎಂ ವಿಚಾರ ಚರ್ಚೆಗೆ ಬರುವುದಿಲ್ಲ ಏಕೆ? ಎಂಬಿತ್ಯಾದಿ ವಿಚಾರ ಬಗ್ಗೆ ಮಾತನಾಡಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್.
- ಸಲೀಂ ಅಹಮದ್,
- ಸರ್ಕಾರದ ಮುಖ್ಯ ಸಚೇತಕರು, ವಿಧಾನ ಪರಿಷತ್
ಸಂದರ್ಶನ - ಶ್ರೀಕಾಂತ ಎನ್.ಗೌಡಸಂದ್ರ
ವಿವಾದಗಳಿಂದ ಮಾರು ದೂರ ಉಳಿಯುವ, ಪಕ್ಷ ಕಟ್ಟುವ ವಿಚಾರದಲ್ಲಿ ಸೈಲೆಂಟ್ ಮೋಡ್‌ನಲ್ಲಿ ದುಡಿಯುವ ಮೃದು ಭಾಷಿ ಕಾಂಗ್ರೆಸ್ಸಿಗ ಸಲೀಂ ಅಹಮದ್. 44 ವರ್ಷಗಳಿಂದ ಪಕ್ಷ ಸಂಘಟನೆಯ ಪ್ರಮುಖ ಜವಾಬ್ದಾರಿ ನಿಭಾಯಿಸಿರುವ ಇವರು 30 ವರ್ಷಗಳ ಹಿಂದೆಯೇ ಪರಿಷತ್ ಸದಸ್ಯರಾಗಿದ್ದವರು. ಪಕ್ಷ ನಿಷ್ಠೆ ವಿಚಾರ ಬಂದರೆ ತಕ್ಷಣ ಹೊಳೆವ ಹೆಸರಾಗಿದ್ದರೂ ಅಧಿಕಾರಕ್ಕಾಗಿ ಹಕ್ಕೊತ್ತಾಯ ಮಾಡುವಲ್ಲಿ ಅವರದ್ದು ಮೆದು ಧ್ವನಿ. ಕಳೆದ ವಿಧಾನಸಭೆ ಚುನಾವಣೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಅವರು ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣದ ಟಾಸ್ಕ್ ಯಶಸ್ವಿಯಾಗಿ ನಿಭಾಯಿಸಿದವರು. ಎರಡೂವರೆ ದಶಕಗಳ ಹಿಂದೆಯೇ ಪರಿಷತ್ ಮುಖ್ಯಸಚೇತಕರಾಗಿ, ಮೂರು ಬಾರಿ ಪರಿಷತ್ ಸದಸ್ಯರಾಗಿ ಎಲ್ಲಾ ಅರ್ಹತೆ ಹೊಂದಿದ್ದರೂ ಈವರೆಗೆ ಅವರಿಗೆ ಸಚಿವ ಸ್ಥಾನ ಒಲಿದಿಲ್ಲ. ನವೆಂಬರ್ ಕ್ರಾಂತಿಯ ಚರ್ಚೆ ನಡುವೆ ಸಂಪುಟ ಪುನಾರಚನೆ ಮುಂಚೂಣಿಗೆ ಬಂದಿದೆ. ನಿಜಕ್ಕೂ ಸಂಪುಟ ಪುನಾರಚನೆಯಾಗುವುದೇ? ಡಜನ್‌ಗಟ್ಟಲೇ ಸಚಿವರು ಬದಲಾಗುವರೇ? ಈ ಬಾರಿಯಾದರೂ ಸಲೀಂಗೆ ಅವಕಾಶ ಸಿಗುವುದೇ? ದಲಿತ ಸಿಎಂ ವಿಚಾರ ಮುಂಚೂಣಿಗೆ ಬಂದರೂ ಅಲ್ಪಸಂಖ್ಯಾತ ಸಿಎಂ ವಿಚಾರ ಚರ್ಚೆಗೆ ಬರುವುದಿಲ್ಲ ಏಕೆ? ಎಂಬಿತ್ಯಾದಿ ವಿಚಾರ ಬಗ್ಗೆ ಮಾತನಾಡಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್.
- ನವೆಂಬರ್ ಕ್ರಾಂತಿ ಬಗ್ಗೆ ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಸಂಪುಟ ಪುನರ್ ರಚನೆ ಆಗಲಿದೆಯೇ?
ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಈಗಾಗಲೇ ನಮ್ಮ ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ. ಎಲ್ಲಾ ಸಚಿವರು ಸಮರ್ಥವಾಗಿ ಕೆಲಸ ಮಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ಇದರಲ್ಲಿ ಕೆಲ ಮಂತ್ರಿಗಳನ್ನು 2028ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂಬ ಚಿಂತನೆ ಪಕ್ಷಕ್ಕಿದೆ.
- ಕೆಲವರು ಡಜನ್ ಸಚಿವರು ಬದಲಾಗುತ್ತಾರೆ ಎನ್ನುತ್ತಾರೆ. ನೀವು ಅರ್ಧ ಸಂಪುಟ ಬದಲಾಗಲಿದೆ ಎಂದಿದ್ದೀರಿ. ಯಾವುದು ನಿಜ?
ಕೆಲ ಮಂತ್ರಿಗಳನ್ನು ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಚಿಂತನೆ ಇದೆ. ಅಂತಿಮವಾಗಿ ಎಷ್ಟು ಮಂದಿ? ಯಾರು? ಎಂಬುದೆಲ್ಲ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ.
- ಪುನರ್ ರಚನೆಗೊಂಡ ಸಂಪುಟದಲ್ಲಿ ಸಲೀಂ ಅಹಮದ್ ಇರುತ್ತಾರಾ?
ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನನಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ.
- ವಿಶ್ವಾಸ ಮಾತ್ರಾನಾ ಆಶ್ವಾಸನೆಯೂ ಸಿಕ್ಕಿದೆಯಾ?
ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ವಿಶ್ವಾಸವಿದೆ ಅಷ್ಟೇ.
- ಸರ್ಕಾರ ರಚನೆಯಾದಾಗಲೇ ಸಚಿವರಾಗಬೇಕೆಂದು ಬಯಸಿದ್ದಿರಲ್ಲಾ?
ನಾನು 44 ವರ್ಷಗಳಿಂದ ಶಿಸ್ತಿನಿಂದ ಪಕ್ಷದ ಕೆಲಸ ಮಾಡಿದ್ದೇನೆ. 2023ರ ಚುನಾವಣೆಗೆ ಮೊದಲು ಐದು ಮಂದಿ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದರು. ಅದರಲ್ಲಿ ಧ್ರುವನಾರಾಯಣ ಅವರ ಸಾವಿಗೀಡಾದರು. ಉಳಿದ ನಾಲ್ಕು ಮಂದಿಯಲ್ಲಿ ಮೂರು ಮಂದಿ ಸಚಿವರಾದರು (ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ) ನನಗೊಬ್ಬನಿಗೆ ಅವಕಾಶ ಸಿಗಲಿಲ್ಲ. ಆಗ ಬಹಳ ದುಃಖವಾಯಿತು. ಆದರೂ ನೋವು ನುಂಗಿಕೊಂಡು ಸರ್ಕಾರದಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ.
- ಸಲೀಂ ಅಹಮದ್ ಅವರಿಗೆ ಯಾಕೆ ಅವಕಾಶ ನೀಡಬೇಕು?
ನಾನು 44 ವರ್ಷಗಳಿಂದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿ ಪಕ್ಷಕ್ಕಾಗಿ ದುಡಿದಿದ್ದೇನೆ. 1987ರಲ್ಲಿ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷನಾಗಿದ್ದೆ. ಬಳಿಕ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷನಾಗಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಎಐಸಿಸಿ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದೇನೆ. 1996ರಲ್ಲಿ ಪರಿಷತ್ ಸದಸ್ಯನಾದ ನನಗೆ 2000 ರಲ್ಲೇ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಅವಕಾಶ ಸಿಗಬೇಕಾಗಿತ್ತು. ಕೃಷ್ಣ ಅವರು ಮನವೊಲಿಸಿ ಮುಖ್ಯಸಚೇತಕರಾಗಿ ನೇಮಿಸಿದ್ದರು. ಬಳಿಕ ಧರಂಸಿಂಗ್ ಅವಧಿಯಲ್ಲೂ ಸಚಿವ ಸ್ಥಾನ ಕೈ ತಪ್ಪಿತು. ಈಗ ಮೂರನೇ ಬಾರಿಗೆ ಪರಿಷತ್ ಸದಸ್ಯನಾಗಿದ್ದೇನೆ.
- ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನಿಮ್ಮ ಸೇವೆ ಪಕ್ಷ ಗುರುತಿಸಿಲ್ಲವೇ?
2023ರ ಚುನಾವಣೆಗೂ ಮೊದಲು ಮೂರೂವರೆ ವರ್ಷ ಬಹಳ ಕಷ್ಟಪಟ್ಟು ಕೆಪಿಸಿಸಿ ಅಧ್ಯಕ್ಷರಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇವೆ. ಕೊರೋನಾ ಸಂದರ್ಭದಲ್ಲಿ ಯಾರೂ ಹೊರಗೆ ಬರುತ್ತಿರಲಿಲ್ಲ. ಅಂತಹ ಸಮಯದಲ್ಲೂ ಒಂದೇ ಒಂದು ದಿನವೂ ರಜೆ ತೆಗೆದುಕೊಳ್ಳದೆ, ಕಚೇರಿ ಬಾಗಿಲು ಹಾಕದೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದೆ. ರಾಜ್ಯಾದ್ಯಂತ ಎಲ್ಲಾ ಕಾರ್ಯಕ್ರಮಗಳಿಗೂ ಸಿದ್ಧತೆ, ಉಸ್ತುವಾರಿ ವಹಿಸಿ ಸಹಕಾರ ನೀಡಿದ್ದೇನೆ.
- ಅದೇ, ನಿಮ್ಮ ಜತೆ ಇದ್ದ ಉಳಿದೆಲ್ಲ ಕಾರ್ಯಾಧ್ಯಕ್ಷರು ಸಚಿವರಾದರು, ನೀವು ಯಾಕೆ ಆಗಿಲ್ಲ?
ಯಾಕೆ ಮಾಡಲಿಲ್ಲ ಎಂಬುದು ಇಲ್ಲಿಯವರೆಗೂ ನನಗೆ ತಿಳಿದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 44 ವರ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಒಳ್ಳೆಯದಾಗುತ್ತದೆ ಎಂದು ನಂಬಿದ್ದೇನೆ.
- ಕಾರ್ಯಾಧ್ಯಕ್ಷರಾಗಿದ್ದಾಗ ಪಕ್ಷ ಸಂಘಟನೆಯಲ್ಲಿ ನಿಮ್ಮ ಸೇವೆಯೇನು?
ಕೆಪಿಸಿಸಿ ಕಾರ್ಯಾಧ್ಯಕ್ಷನಾದ ನಂತರ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತ ಕಾರಣ 15-16 ಕೇಸುಗಳು ನನ್ನ ಮೇಲೆ ಬಿದ್ದಿವೆ. ನನ್ನ ಮೇಲಿನ ಕೇಸುಗಳು ಬೇರೆ ಯಾವುದೋ ಕಾರಣಕ್ಕೆ ಹಾಕಿದವು ಅಲ್ಲ. ಮೇಕೆದಾಟು ಪಾದಯಾತ್ರೆ ಸೇರಿ ಪಕ್ಷಕ್ಕಾಗಿ, ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಪರ ಮಾಡಿದ ಹೋರಾಟಗಳಿಗಾಗಿ ಬಿದ್ದಿವೆ.
- ವಿಧಾನಪರಿಷತ್ ಸದಸ್ಯರು ಎಂಬ ಕಾರಣಕ್ಕಾಗಿ ಪಕ್ಷ ಗುರುತಿಸಿಲ್ಲವೇ?
ನಾನು ನಾಮನಿರ್ದೇಶಿತ ಸದಸ್ಯನಲ್ಲ. ಗದಗ, ಹಾವೇರಿ, ಧಾರವಾಡ ಮೂರು ಜಿಲ್ಲೆಗಳ 17 ವಿಧಾನಸಭೆಗಳ ಪ್ರತಿನಿಧಿಯಾಗಿ ಅತಿ ಹೆಚ್ಚು ಮತಗಳಿಂದ ಚುನಾಯಿತನಾಗಿರುವ ಶಾಸಕ. ಆಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ, ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ನನ್ನ ವಿರುದ್ಧ ಅಭ್ಯರ್ಥಿ. ಹೀಗಿದ್ದರೂ ಎಲ್ಲ ವರ್ಗಗಳ ಮನ್ನಣೆ ಪಡೆದು ಅತ್ಯಂತ ಹೆಚ್ಚು ಮತಗಳಿಂದ ಗೆದ್ದಿದ್ದೇನೆ.
- ಕಿತ್ತೂರು ಕರ್ನಾಟಕ ಭಾಗದ ಅಲ್ಪಸಂಖ್ಯಾತರು ಇತ್ತೀಚೆಗೆ ಸಚಿವರೇ ಆಗಿಲ್ಲ. ಇದು ಮಲತಾಯಿ ಧೋರಣೆಯೇ?
20 ವರ್ಷಕ್ಕೂ ಹೆಚ್ಚು ಕಾಲ ಆಗಿದೆ. 2005ರಲ್ಲಿ ಕೊನೆಯದಾಗಿ ಹುಬ್ಬಳ್ಳಿಯಿಂದ ಜಬ್ಬಾರ್‌ಖಾನ್ ಹೊನ್ನಾಳಿ ಅವರನ್ನು ಒಂದು ವರ್ಷದ ಅವಧಿಗೆ ಸಚಿವರನ್ನಾಗಿ ಮಾಡಿದ್ದರು. ಈ ಭಾಗದ ಏಳು ಜಿಲ್ಲೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಅವರು ಮಾತ್ರವಲ್ಲ ಎಲ್ಲಾ ವರ್ಗದ ಜನರೂ ನನ್ನನ್ನು ಸಚಿವ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಪಕ್ಷ ನಿರ್ಧಾರ ಮಾಡಬೇಕಷ್ಟೇ.
- ಸಚಿವ ಸ್ಥಾನಕ್ಕೆ ಸಲೀಂ ಅಹಮದ್ ಅವರ ಹಕ್ಕೊತ್ತಾಯ ಯಾವ ರೀತಿ ಇರಲಿದೆ?
ಹಕ್ಕೊತ್ತಾಯ ಎಂಬ ಮಾತೇ ಇಲ್ಲ. ನಾವು ಏನು ಕೆಲಸ ಮಾಡಿದ್ದೇವೆ. ಅದಕ್ಕೆ ಪ್ರತಿಫಲ ನಾನು ಬಯಸುತ್ತಿದ್ದೇನೆ. ಇದು ಪ್ರತಿಫಲಾಪೇಕ್ಷೆ ಅಷ್ಟೇ.
-ಒಂದೊಮ್ಮೆ ಅವಕಾಶ ಸಿಗದಿದ್ದರೆ ಮುಂದೇನು?
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ಈ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮಂತಹವರ ಪಾತ್ರವೂ ಇದೆ. ಹೀಗಾಗಿ ವಿಶ್ವಾಸವಿದೆ.
- ನವೆಂಬರ್ ಕ್ರಾಂತಿ ಸಂಪುಟ ಪುನರ್‌ರಚನೆಗೆ ಸೀಮಿತವೇ? ನಾಯಕತ್ವ ಬದಲಾವಣೆ ಬಗ್ಗೆ ಏನು ಹೇಳುತ್ತೀರಿ?
(ಜೋರಾಗಿ ನಗುತ್ತಾ...) ನೀವು ಏನು ಕೇಳುತ್ತಿದ್ದೀರಿ ಎಂಬುದು ನನಗೆ ಕೇಳಿಸುತ್ತಲೇ ಇಲ್ಲ.
- ಪ್ರತಿ ಬಾರಿ ಮುಖ್ಯಮಂತ್ರಿ ವಿಚಾರ ಬಂದಾಗಲೂ ಲಿಂಗಾಯತ, ಒಕ್ಕಲಿಗ, ದಲಿತ ಸಿಎಂ ಎಂಬ ಕೂಗು ಏಳುತ್ತದೆ. ಆದರೆ ಅಲ್ಪಸಂಖ್ಯಾತ ಕೂಗು ಯಾಕಿಲ್ಲ?
ಕಾಂಗ್ರೆಸ್ ಪಕ್ಷದ ಜತೆ ಅಲ್ಪಸಂಖ್ಯಾತರು ಗಟ್ಟಿಯಾಗಿ ನಿಲ್ಲುತ್ತಾರೆ ಎಂಬುದು ನಿಜ. ಆದರೆ, ನಮ್ಮದು ಹೈಕಮಾಂಡ್ ಪಕ್ಷ. ಅಂತಿಮ ತೀರ್ಮಾನ ಹೈಕಮಾಂಡ್ ಹಾಗೂ ಶಾಸಕರು ಚರ್ಚಿಸಿಯೇ ಆಗುತ್ತದೆ. ಹೀಗಾಗಿ ನಮ್ಮಲ್ಲಿ ಕೂಗುಗಳು ಇರುವುದಿಲ್ಲ.
- ಹಾಗಾದರೆ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಅಭಿಪ್ರಾಯ ಸ್ವಾತಂತ್ರ್ಯವಿಲ್ಲವೇ?
ನಮ್ಮದು ಶಿಸ್ತಿನ ಪಕ್ಷ. ಹಾಗಂತ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅಡ್ಡಿಯಿಲ್ಲ. ಹೀಗಾಗಿಯೇ ಎಲ್ಲರೂ ಮುಕ್ತವಾಗಿ ಮಾತನಾಡುತ್ತಾರೆ. ಬಿಜೆಪಿಯ ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ, ಮೋದಿ ಒಬ್ಬರೇ ಮಾತನಾಡಬೇಕು ಉಳಿದೆಲ್ಲರೂ ಬಾಯಿ ಮುಚ್ಚಿಕೊಂಡು ಕೇಳಬೇಕು ಎನ್ನುವ ಸಂಸ್ಕೃತಿ ಇಲ್ಲ.
- ದೆಹಲಿ ಬಾಂಬ್ ಸ್ಫೋಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಕೇಂದ್ರ ಸರ್ಕಾರದ ವೈಫಲ್ಯ. ದೇಶದ ಭದ್ರತೆ ಬಗ್ಗೆ ಪೊಳ್ಳು ಮಾತನಾಡುವ ಬಿಜೆಪಿ ನಾಯಕರು ದೇಶಕ್ಕೆ ಉತ್ತರ ಕೊಡಬೇಕು. ಅವರ ನಿರ್ಲಕ್ಷ್ಯ ವೈಫಲ್ಯದಿಂದ ಅಮೂಲ್ಯವಾದ ಜೀವಗಳು ಹೋಗಿವೆ.
- ಚುನಾವಣೆಗಳು ಬಂದಾಗಲೆಲ್ಲಾ ಸ್ಫೋಟಗಳು ಉಂಟಾಗುತ್ತಿವೆ ಎಂಬ ಆರೋಪವಿದೆಯಲ್ಲ?
ಈ ಬಗ್ಗೆ ತನಿಖೆಯಾಗಬೇಕು. ರಾಜ್ಯದಲ್ಲೂ ಬಹುತೇಕ ಎಲ್ಲಾ ಸ್ಫೋಟಗಳು ಬಿಜೆಪಿ ಅವಧಿಯಲ್ಲೇ ಆಗಿವೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಶಾಂತಿ, ನೆಮ್ಮದಿ ಸಹಬಾಳ್ವೆ ಇದೆ. ಇಂತಹ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
- ನೀವು ರಾಷ್ಟ್ರೀಯ ಸಂಘಟನೆಯಲ್ಲೂ ಇದ್ದವರು. ರಾಷ್ಟ್ರದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿದೆ?
ರಾಹುಲ್‌ಗಾಂಧಿ ಅವರು ವೋಟ್ ಚೋರಿ ಮೂಲಕ ದೇಶಾದ್ಯಂತ ಜನಜಾಗೃತಿ ಮೂಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗ ಸೇರಿ ವೋಟು ಕದ್ದಿರುವುದನ್ನು ಬಯಲಿಗೆ ಎಳೆದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಮತಗಳ್ಳತನದಿಂದಲೇ ಬಿಜೆಪಿ 80 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಇಲ್ಲದಿದ್ದರೆ ಅವರು 150 ಸ್ಥಾನಗಳನ್ನೂ ದಾಟುತ್ತಿರಲಿಲ್ಲ.
- 2029ರ ಚುನಾವಣೆಯಲ್ಲೂ ಇದೇ ಸ್ಥಿತಿ ಮುಂದುವರೆಯುತ್ತದೆಯೇ?
ಕಾಲ ಬದಲಾಗಲಿದೆ, ಜನರಿಗೆ ಅವರಿವಾಗಿದೆ. 2029ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದು ರಾಹುಲ್‌ಗಾಂಧಿ ದೇಶದ ಪ್ರಧಾನಮಂತ್ರಿ ಆಗುತ್ತಾರೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.
;Resize=(690,390))
)
;Resize=(128,128))
;Resize=(128,128))
;Resize=(128,128))