ಸಾರಾಂಶ
‘ಪ್ರಸಕ್ತ ಅವಧಿಯ ಐದು ವರ್ಷವೂ ನಾನೇ ಮುಖ್ಯಮಂತ್ರಿ. ಮುಂದಿನ ಅವಧಿಯ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ನಾನೇ ಮುಖ್ಯಮಂತ್ರಿ ಆಗಿ ಇರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆ : ‘ಪ್ರಸಕ್ತ ಅವಧಿಯ ಐದು ವರ್ಷವೂ ನಾನೇ ಮುಖ್ಯಮಂತ್ರಿ. ಮುಂದಿನ ಅವಧಿಯ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ನಾನೇ ಮುಖ್ಯಮಂತ್ರಿ ಆಗಿ ಇರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬುಧವಾರದ ಕಲಾಪದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಸದಸ್ಯರ ನೇಮಕಕ್ಕೆ ಆಕ್ಷೇಪಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ಕಳೆದ ಅವಧಿಯಲ್ಲಿ (2013-18) ಸಿದ್ದರಾಮಯ್ಯ ಅವರು ಹೇಯ್....ಅಶೋಕ ಬರೆದುಕೊಳ್ಳಪ್ಪ, ನಾನೇ ಪರ್ಮನೆಂಟು’ ಎಂದಿದ್ದರು.
ಆದರೆ ಆ ನಂತರ ಕಾಣೆಯಾಗಿ ಹೋದರು. ಕಾಣದಂತೆ ಮಾಯವಾದನೋ ನಮ್ಮ ಶಿವಾ ಎಂಬಂತಾದರು. ಈಗ ಮತ್ತೆ ನಾನೇ ಬರ್ತೀನಿ ಅಂತಿದ್ದಾರೆ ಎಂದು ಕಾಲೆಳೆದರು.
ಇದೇ ವೇಳೆ ರಾಜ್ಯದಲ್ಲಿ ಪವರ್ ಶೇರಿಂಗ್ (ಅಧಿಕಾರ ಹಂಚಿಕೆ) ವಿಚಾರವಾಗಿ ಅನೇಕ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಐದೂ ವರ್ಷ ಪೂರೈಸಲಿ ಎಂದು ನಾವು ಬಯಸುತ್ತೇವೆ ಎಂದು ಅಶೋಕ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ‘ಹೌದು ಈ ಐದು ವರ್ಷ ಅಲ್ರೀ, ಮತ್ತೆ ಮುಂದಿನ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು.
ಆಗಲೂ ನೀವೇ ಮುಖ್ಯಮಂತ್ರಿ ಆಗಿರುತ್ತೀರಾ ಎಂಬ ಬಿಜೆಪಿ ಸದಸ್ಯರ ಪ್ರಶ್ನೆಗೆ, ‘ಹೌದು ನಾನೇ ಇರುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದರು.