ಸಾರಾಂಶ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ..
ಬೆಂಗಳೂರು : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ..
ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಪಂಚ ಗ್ಯಾರಂಟಿಗಳ ಅನುಷ್ಠಾನವೂ ಸೇರಿದಂತೆ ಪ್ರಣಾಳಿಕೆ ಹಾಗೂ ಪ್ರತೀ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬರುತ್ತಿದೆ. ಎರಡು ವರ್ಷಗಳನ್ನು ಯಶಸ್ವಿಯಾಗಿ, ದಕ್ಷವಾಗಿ ಪೂರ್ಣಗೊಳಿಸುತ್ತಿರುವ ಈ ಸಂದರ್ಭವನ್ನು ಪಕ್ಷದ ಕಾರ್ಯಕರ್ತರ ಜೊತೆಗೆ ಸಂಭ್ರಮದಿಂದ ಆಚರಿಸುವ ಕುರಿತು ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಒಲವು ತೋರಿದರು ಎಂದು ಮೂಲಗಳು ತಿಳಿಸಿವೆ.
ಮಾ.21ಕ್ಕೆ ಅಧಿವೇಶನ ಮುಗಿಯಲಿದ್ದು ಏ.1ರಿಂದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ಸೂಚಿಸಿದ್ದಾರೆ.
ತಮಿಳುನಾಡು ಸರ್ಕಾರ ಆಹ್ವಾನ:
ಇನ್ನು, ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಮುಂದಾಗಿರುವುದರ ವಿರುದ್ಧ ತಮಿಳುನಾಡು ಸರ್ಕಾರ ಮಾ.22ರಂದು ಹೋರಾಟ ರೂಪಿಸುತ್ತಿದೆ. ಈ ಹೋರಾಟದಲ್ಲಿ ಭಾಗವಹಿಸಲು ನಮಗೂ ಆಹ್ವಾನ ನೀಡಿದೆ. ಆದರೆ, ಪಾಲ್ಗೊಳ್ಳಬೇಕಾ, ಬೇಡವಾ ಎಂದು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಸಭೆಯಲ್ಲಿ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.