ಕನ್ನಡಪ್ರಭ ವಾರ್ತೆ ಮದ್ದೂರು

ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭೆ ಸ್ಥಾನ ನೀಡಿದ್ದರೆ ರಾಜ್ಯಕ್ಕೆ ಗೌರವ ಕೊಟ್ಟಂತಾಗುತ್ತಿತ್ತು. ಇದು ನಮ್ಮ ಅಭಿಪ್ರಾಯ. ಇದರಲ್ಲಿ ರಾಜಕಾರಣ ಎಲ್ಲಿಂದ ಬಂತು ಎಂದು ಶಾಸಕ ಕೆ.ಎಂ.ಉದಯ್‌ ಪ್ರಶ್ನಿಸಿದರು.

ದೇವೇಗೌಡರು ಹಿರಿಯರು. ಕರ್ನಾಟಕದಿಂದ ಪ್ರಧಾನಿಯಾದ ಮೊದಲಿಗರು. ಅವರಿಗೆ 93 ವರ್ಷ ವಯಸ್ಸಾಗಿದ್ದರೂ ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವ ಹುಮ್ಮಸ್ಸು, ತುಡಿತ ಹೊಂದಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಬಗ್ಗೆ ಗೌರವ ಹೊಂದಿದ್ದಾರೆ. ಬಿಜೆಪಿ ಭಾಗವಾಗಿ ದೇವೇಗೌಡರು ಕೆಲಸ ಮಾಡುತ್ತಿದ್ದಾರೆ. ಅವರ ಹಿರಿತನ, ವ್ಯಕ್ತಿತ್ವಕ್ಕೆ ರಾಜ್ಯಸಭೆ ಸ್ಥಾನ ನೀಡಿ ಗೌರವಿಸಬೇಕಿತ್ತು. ಸಂಬಂಧ ಇಲ್ಲದ ವ್ಯಕ್ತಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ದೇವೇಗೌಡರು ಬೇರೆ ಪಕ್ಷದವರಾಗಿದ್ದರೂ ಅವರ ಬಗ್ಗೆ ನಮಗೆ ಗೌರವ- ಅಭಿಮಾನ ಇದೆ. ಬಿಜೆಪಿ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ಜೊತೆಯಲ್ಲಿ ಸೇರಿಸಿಕೊಂಡಿರುವುದೇ ನಿರ್ನಾಮ ಮಾಡಲು. ಎದುರಾಗಿ ಹೋದರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆಂಬ ಕಾರಣಕ್ಕೆ ಬಿಜೆಪಿ ತನ್ನೊಂದಿಗೆ ಸೇರಿಸಿಕೊಂಡಿದೆ. ಜೆಡಿಎಸ್ ಪಕ್ಷ ಮಾತ್ರವಲ್ಲ ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಹಂತ ಹಂತವಾಗಿ ಬಿಜೆಪಿ ಮುಗಿಸುತ್ತದೆ. ಆ ನಂತರ ಬಿಜೆಪಿ, ಕಾಂಗ್ರೆಸ್‌ನೊಂದಿಗೆ ನೇರ ಸ್ಪರ್ಧೆ ಮಾಡುವ ಉದ್ದೇಶ ಹೊಂದಿದೆ ಎಂದರು.

ಕುಮಾರಸ್ವಾಮಿ ಅವರು ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಭಯ ಶುರುವಾಗಿದೆ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಜೆಡಿಎಸ್- ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡರೆ ನಮಗೇಕೆ ಭಯ. ಆ ಪಕ್ಷಗಳ ಮೈತ್ರಿಯನ್ನು ಎದುರಿಸಿ ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಪ್ರತ್ಯುತ್ತರ ನೀಡಿದರು.


ಮಂಡ್ಯ ಜಿಲ್ಲೆಗೆ 2 ಸಚಿವರ ಸ್ಥಾನ ಕೇಳಿದ್ದೇವೆ. ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಮುಖ್ಯಮಂತ್ರಿ ಆಗಿರುವುದರಿಂದ ಹೆಚ್ಚಾಗಿ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಜನರು ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಅದರಂತೆ ಮದ್ದೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತೇನೆ ಎಂದಷ್ಟೇ ಹೇಳಿದರು.