ಮನೆಹಾಳರ ಜತೆ ಬಿವೈ ವಿಜಯೇಂದ್ರ ಹೋದರೆ ಸಿಡಿದೇಳುವೆ: ವಿ.ಸೋಮಣ್ಣ

| Published : Jan 07 2024, 01:30 AM IST / Updated: Jan 07 2024, 01:21 PM IST

V_Somanna

ಸಾರಾಂಶ

ಬಿಜೆಪಿಯಲ್ಲಿ ನನ್ನನ್ನು ಸೋಲಿಸಿದವರ ಜೊತೆ ಸೋರಿದರೆ, ಮನೆಹಾಳರ ಜೊತೆ ಬಿವೈ ವಿಜಯೇಂದ್ರ ಹೋದರೆ ಸಿಡಿದೇಳುವೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ 

ಬೆಂಗಳೂರು: ಚಾಮರಾಜನಗರದಲ್ಲಿ ನನ್ನ ಸೋಲಿಗೆ ಕಾರಣರಾದ ಅಯೋಗ್ಯರು ಮತ್ತು ಮನೆಹಾಳರ ಜೊತೆಗೆ ಅಂಟಿಕೊಂಡು ತೆರೆಮರೆಯಲ್ಲಿ ರಾಜಕಾರಣ ನಡೆಸಲು ಹೋದರೆ ನಾನು ಸಿಡಿದೇಳುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಖಾರವಾಗಿ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಏಕೆಂದರೆ, ಅವರು ಪಕ್ಷದ ರಾಜ್ಯಾಧ್ಯಕ್ಷರು. ಅವರು ಚಾಮರಾಜನಗರಕ್ಕೆ ಹೋಗಿರುವುದಕ್ಕೂ ನನಗೂ ಸಂಬಂಧವಿಲ್ಲ. ಆದರೆ, ಅಲ್ಲಿ ನನ್ನ ಸೋಲಿಗೆ ಯಾರು ಕಾರಣ ಎಂಬುದು ಎಲ್ಲವೂ ಅವರಿಗೆ ಗೊತ್ತಿದೆ. ಅದನ್ನು ಸರಿಪಡಿಸುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಅವರೊಂದಿಗೆ ಅಂಟಿಕೊಂಡು ಹೋಗುತ್ತೇನೆ ಎಂದರೆ, ನಾನು ಬೇರೆ ಮಾತನಾಡಬೇಕಾಗುತ್ತದೆ ಎಂದು ಖಡಕ್‌ ಆಗಿ ಹೇಳಿದರು.

ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಎಲ್ಲವನ್ನೂ ನಾನು ಮಾತನಾಡುವುದಿಲ್ಲ. ಆತ ಯುವಕ ಇದ್ದಾನೆ. ಆತ ಬೆಳೆಯಬೇಕು ಎಂಬ ಆಸೆ ಇದ್ದರೆ ನಮಗೆ ಆಗಿರುವ ಅನನುಕೂಲ ಸರಿಪಡಿಸಬೇಕು. ಇದಕ್ಕೆ ಕಾರಣ ಆದವರನ್ನೇ ಜತೆಯಲ್ಲಿ ಇರಿಸಿಕೊಂಡು ತೆರೆಮರೆಯಲ್ಲಿ ರಾಜಕಾರಣ ನಡೆಸುತ್ತೇನೆ ಎಂದರೆ, ಅದು ಸಾಧ್ಯವಿಲ್ಲ. 

ಅದಕ್ಕೆ ಅವಕಾಶ ಕೊಟ್ಟರೆ ನಾನು ಸಿಡಿದೇಳುತ್ತೇನೆ ಎಂದು ಬಿ.ವೈ.ವಿಜಯೇಂದ್ರಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.ವಿಧಾನಸಭಾ ಚುನಾವಣೆ ವೇಳೆ ಸುದ್ದಿಗೋಷ್ಠಿ ಮಾಡಿ, ಮನೆ ಮನೆಗೆ ಏನೆಲ್ಲಾ ಹಂಚಿದರು, ವಾಟ್ಸಾಪ್‌ ಕರೆ ಮಾಡಿ ಏನೆಲ್ಲಾ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. 

ನೀನು ಸಿಕ್ಕ ಅವಕಾಶ ಬಳಸಿಕೊಂಡು ರಾಜ್ಯದಲ್ಲಿ ದೊಡ್ಡ ನಾಯಕನಾಗಿ ಬೆಳೆಯಬೇಕು ಎಂದರೆ, ಇಂತಹ ಅಯೋಗ್ಯರು ಮತ್ತು ಮನೆಹಾಳರನ್ನು ಜತೆಯಲ್ಲಿ ಇರಿಸಿಕೊಳ್ಳಬಾರದು. ಈ ಬಗ್ಗೆ ಸೂಕ್ಷ್ಮವಾಗಿ ಹೇಳಿ ಕಳುಹಿಸಿದ್ದೇನೆ. ಅದನ್ನು ಮಾಡುವುದು ಅಥವಾ ಬಿಡುವುದು ಅವರಿಗೆ ಬಿಟ್ಟಿದ್ದು. ಇದರ ಹೊರತಾಗಿ ಪಕ್ಷದಲ್ಲಿ ಬೇರೆ ಯಾರ ಬಗ್ಗೆಯೂ ನನಗೆ ಏನಿಲ್ಲ ಎಂದರು.

ಬಿ.ವೈ.ವಿಜಯೇಂದ್ರಗೆ ಚಿಕ್ಕ ವಯಸ್ಸಿಗೆ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ನಮ್ಮಂತವರ ಮೇಲೆ ಗದಾ ಪ್ರಹಾರ ಮಾಡಲು ಬಳಸಿದರೆ ಏನಾಗಲಿದೆ ಎಂಬುದರ ಬಗ್ಗೆಯೂ ಚಿಂತಿಸಬೇಕು. ಅವರಿಗೆ ಒಳ್ಳೇದಾಗಲಿ. ನಾನು ಇದನ್ನೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಅವರು ಬಿಡಬೇಕಾಗುತ್ತದೆ ಎಂದು ಸೋಮಣ್ಣ ಹೇಳಿದರು.