ಈ ಎಂಪಿ ಚುನಾವಣೆ ಸೋತರೆ ನಾವು ಬದುಕಿದ್ದೂ ಸತ್ತಂತೆ: ಮಾಜಿ ಸಿಎಂ ಕುಮಾರಸ್ವಾಮಿ

| Published : Mar 16 2024, 01:51 AM IST

ಸಾರಾಂಶ

ದುಡ್ಡಿನ ಮೇಲೆ ಚುನಾವಣೆ ನಡೆಸಲು ಆಗುವುದಿಲ್ಲ. ಹಾಗೆ ಹಣದ ಮೇಲೆ ಚುನಾವಣೆ ನಡೆಯುವಂತಿದ್ದರೆ ನಿಖಿಲ್ ಸೋಲುತ್ತಿರಲಿಲ್ಲ. ಈಗ ದುಡ್ಡಿನ ಮೇಲೆ ಚುನಾವಣೆ ನಡೆಸಲು ಕಾಂಗ್ರೆಸ್ಸಿಗರು ಗುತ್ತಿಗೆದಾರರೊಬ್ಬರನ್ನು ಕರೆತಂದಿದ್ದಾರೆ. ನನ್ನ ಮಾಜಿ ಸ್ನೇಹಿತ ದುರಂಹಕಾರದಲ್ಲಿ ಮಾತನಾಡುತ್ತಿದ್ದಾರೆ. ನಾಟಿ ಸ್ಟೈಲ್‌ನಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದೀರೆ. ನಾವೂ ನಾಟಿ ಸ್ಟೈಲ್‌ನಲ್ಲೇ ಚುನಾವಣೆ ನಡೆಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿದರೆ ನಾವು ಬದುಕಿದ್ದೂ ಸತ್ತಂತೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭಾವುಕರಾಗಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಾತ್ಯತೀತ ಜನತಾದಳದಿಂದ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಂಡ್ಯ ಜನರು ಜೆಡಿಎಸ್ ಪಕ್ಷನ್ನು ಉಳಿಸಿದ್ದಾರೆ, ಬೆಳೆಸಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನ್ನು ಒಪ್ಪಲು ನಾನು ರೆಡಿಯಾಗಿಲ್ಲ. ನನ್ನ ಮಗನನ್ನು ಜನರು ಸೋಲಿಸಲಿಲ್ಲ. ಕೆಲವರ ಕುತಂತ್ರದಿಂದ ನಿಖಿಲ್ ಸೋತಿದ್ದಾನೆ. ಈ ಚುನಾವಣೆಯಲ್ಲೂ ನಾವು ಸೋತರೆ ಬದುಕಿದ್ದು ಸತ್ತ ಹಾಗೆ ಎಂದು ಕಠಿಣವಾಗಿ ನುಡಿದಿರು.

ದುಡ್ಡಿನ ಮೇಲೆ ಚುನಾವಣೆ ನಡೆಸಲು ಆಗುವುದಿಲ್ಲ. ಹಾಗೆ ಹಣದ ಮೇಲೆ ಚುನಾವಣೆ ನಡೆಯುವಂತಿದ್ದರೆ ನಿಖಿಲ್ ಸೋಲುತ್ತಿರಲಿಲ್ಲ. ಈಗ ದುಡ್ಡಿನ ಮೇಲೆ ಚುನಾವಣೆ ನಡೆಸಲು ಕಾಂಗ್ರೆಸ್ಸಿಗರು ಗುತ್ತಿಗೆದಾರರೊಬ್ಬರನ್ನು ಕರೆತಂದಿದ್ದಾರೆ. ನನ್ನ ಮಾಜಿ ಸ್ನೇಹಿತ ದುರಂಹಕಾರದಲ್ಲಿ ಮಾತನಾಡುತ್ತಿದ್ದಾರೆ. ನಾಟಿ ಸ್ಟೈಲ್‌ನಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದೀರೆ. ನಾವೂ ನಾಟಿ ಸ್ಟೈಲ್‌ನಲ್ಲೇ ಚುನಾವಣೆ ನಡೆಸುತ್ತೇವೆ ಎಂದು ಮಂಡ್ಯ ಕೈ ಅಭ್ಯರ್ಥಿ ಹಾಗೂ ಸಚಿವ ಚಲುವರಾಯಸ್ವಾಮಿಗೆ ನೀಡಿದರು.

ನಿಖಿಲ್ ಚುನಾವಣೆಗೆ ಪ್ರಾಮಾಣಿಕ ಕೆಲಸ ಮಾಡಿದೆ, ಕುಮಾರಸ್ವಾಮಿ ಸರ್ಕಾರ ಉಳಿಸಲು ಸಾಕಷ್ಟು ಶ್ರಮ ವಹಿಸಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆ ಮಹಾನುಭಾವ ನನ್ನ ಸ್ನೇಹಿತ ಏನೇನು ಮಾಡಿದ್ದಾನೆ ಎನ್ನುವುದೆಲ್ಲಾ ನಮಗೆ ಗೊತ್ತಿದೆ ಎಂದು ಅಣಕವಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ೯ ಸಾವಿರ ಕೋಟಿ ರು. ಹಣವನ್ನು ಅಭಿವೃದ್ಧಿ ಕೊಟ್ಟೆ. ಆಗ ಏನೇನು ಆಯ್ತು ಅನ್ನೋದೆಲ್ಲಾ ಎಲ್ಲರಿಗೂ ಗೊತ್ತು. ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ ನಿಜ. ನಾವೂ ಏನು ಜಿಲ್ಲೆಗೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ನಾನು ಹಾಗೂ ದೇವೇಗೌಡರು ಅಧಿಕಾರದಲ್ಲಿ ಇದ್ದದ್ದು ಕೆಲವು ವರ್ಷ ಮಾತ್ರ. ಅಷ್ಟರಲ್ಲಿ ಎಷ್ಟು ಕೊಡಬಹುದೋ ಅಷ್ಟನ್ನು ಕೊಟ್ಟಿದ್ದೇವೆ. ನನ್ನ ಕೈಯಲ್ಲಿ ಐದು ವರ್ಷ ಅಧಕಾರ ಇದ್ದಿದ್ರೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಕಥೆಯೇ ಬೇರೆಯಾಗಿರುತ್ತಿತ್ತು ಎಂದರು.