ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್‌ ನಿಷೇಧ : ಪ್ರಿಯಾಂಕ್‌

| N/A | Published : Jul 05 2025, 01:48 AM IST / Updated: Jul 05 2025, 07:09 AM IST

ಸಾರಾಂಶ

ಆರ್‌ಎಸ್‌ಎಸ್‌ ದೇಶದ್ರೋಹಿ ಸಂಘಟನೆಯಾಗಿದ್ದು, ಮೂರು ಬಾರಿ ನಿಷೇಧಕ್ಕೊಳಗಾಗಿದೆ.   ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಆರ್‌ಎಸ್‌ಎಸ್‌ಗೆ ನಿಷೇಧ ಹೇರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ 

 ಕಲಬುರಗಿ :  ಆರ್‌ಎಸ್‌ಎಸ್‌ ದೇಶದ್ರೋಹಿ ಸಂಘಟನೆಯಾಗಿದ್ದು, ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಅದರ ಮೇಲಿನ ನಿಷೇಧ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಆರ್‌ಎಸ್‌ಎಸ್‌ಗೆ ನಿಷೇಧ ಹೇರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಯಾವ ಸಂಘಟನೆ ಜಾತಿ, ಕೋಮು ಭಾವನೆಯನ್ನು ಪ್ರಚೋದಿಸುವುದೋ ಅದು ದೇಶದ್ರೋಹಿ ಸಂಘಟನೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಆರ್‌ಎಸ್‌ಎಸ್‌ ಕಳೆದ 100 ವರ್ಷದಿಂದ ಕೋಮು ಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಈಗಾಗಲೇ ಮೂರು ಬಾರಿ ನಿಷೇಧ ಹೇರಲ್ಪಟ್ಟಿದ್ದ ಸಂಘಟನೆಯನ್ನು ಮತ್ತೆ ನಿಷೇಧಿಸಬೇಕು. ಅದರ ಮೇಲಿನ ಬ್ಯಾನ್ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುತ್ತೇವೆ ಎಂದರು.

ಆರ್‌ಎಸ್‌ಎಸ್‌ನವರು ದೇಶಪ್ರೇಮಿಗಳಾಗಿದ್ದರೆ ರಾಷ್ಟ್ರಧ್ವಜ ಹಾರಿಸಲು 50 ವರ್ಷ ಏಕೆ ತೆಗೆದುಕೊಳ್ಳುತ್ತಿದ್ದರು? ದೇಶದ ಐಕ್ಯತೆ, ಸಾಮರಸ್ಯ ಕಾಪಾಡಲು ಈ ಸಂಘಟನೆ ಇದುವರೆಗೂ ಮಾಡಿರುವ 10 ಕೆಲಸಗಳನ್ನು ಪಟ್ಟಿ ಮಾಡಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಇದೇ ವೇಳೆ, ಬಿಜೆಪಿ ವಿರುದ್ಧವೂ ಹರಿಹಾಯ್ದ ಸಚಿವರು, ಬಿಜೆಪಿಯವರು ಆರ್‌ಎಸ್‌ಎಸ್‌ನ ಚೇಲಾಗಳು ಎಂದು ತಿವಿದರು.

Read more Articles on