ಸಾರಾಂಶ
ಒಂದು ಕಾಲು ಹೊರಗಿರಿಸಿ ರಾಜಕೀಯ ಮಾಡುತ್ತಿದ್ದೀಯ. ತಾಕತ್ ಇದ್ದರೆ ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ತೋರಿಸು’ ಎಂದು ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ವಿಶ್ವನಾಥ್ ಅಬ್ಬರಿಸಿದ್ದಾರೆ.
ಬೆಂಗಳೂರು : ‘ನೀನು ಯಾವತ್ತಿದ್ದರೂ ಪಕ್ಷ ಬಿಟ್ಟು ಹೋಗುವವನೇ. ಹೋಗುವುದಾದರೆ ಹೋಗು. ಪಕ್ಷ ಶುದ್ಧವಾಗಲಿ. ಒಂದು ಕಾಲು ಹೊರಗಿರಿಸಿ ರಾಜಕೀಯ ಮಾಡುತ್ತಿದ್ದೀಯ. ತಾಕತ್ ಇದ್ದರೆ ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ತೋರಿಸು’ ಎಂದು ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಏಕವಚನದಲ್ಲೇ ಅಬ್ಬರಿಸಿದ್ದಾರೆ.
‘ನೀವು ಸಚಿವರಾಗಿದ್ದಾಗ ತೋರಿದ ದುರಹಂಕಾರ, ಶಾಸಕರು, ಮಂತ್ರಿಗಳ ಕರೆ ಸ್ವೀಕರಿಸದಿರುವುದು, ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಸೇರಿಸದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಕ್ಷೇತ್ರದಲ್ಲಿ ಸೋಲು ಅನುಭವಿಸಿದಿರಿ’ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಹಾಗೂ ನಾಯಕರ ಬಗ್ಗೆ ಮಾತನಾಡುವಾಗ ಹುಷಾರ್ ಎಂದು ಸುಧಾಕರ್ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದರು.
ಸುಧಾಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದುರಹಂಕಾರಿ, ಸರ್ವಾಧಿಕಾರಿ ಪದ ಬಳಸಿದ್ದಾರೆ. ಪರೋಕ್ಷವಾಗಿ ನನ್ನ ಯಲಹಂಕ ಕ್ಷೇತ್ರ ಹಾಗೂ ಕಾರ್ಯಕರ್ತರ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾನು ಮಾತನಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ಎರಡೆರಡು ಖಾತೆ ಪಡೆದು, ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತೆಗೆದುಕೊಂಡರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋತಿರಿ? ಪಕ್ಷದ ವರಿಷ್ಠರು, ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ನಾವು ಆ ಸ್ಥಾನಕ್ಕೆ ಗೌರವ ಕೊಡಬೇಕು. ನನಗೂ ಸೇರಿ ಕೆಲವರಿಗೆ ರಾಜ್ಯಾಧ್ಯಕ್ಷರ ಮೇಲೆ ಸಣ್ಣ ಪುಟ್ಟ ಅಸಮಾಧಾನ ಇರಬಹುದು. ಹಾಗಂತ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನ ಹೆಸರು ಚಲಾವಣೆಗೆ ಬಂದಿತು. ನಾನೇನು ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ನಿಮಗೆ ಟಿಕೆಟ್ ಸಿಗುವುದಿಲ್ಲ ಎಂದು ನೀವು ಏನೆಲ್ಲಾ ಮಾತನಾಡಿದಿರಿ? ಕೊನೆಗೆ, ಪಕ್ಷದ ವರಿಷ್ಠರು ತೀರ್ಮಾನಿಸಿ ನಿಮಗೆ ಟಿಕೆಟ್ ಕೊಟ್ಟರು. ಈ ನಡುವೆ ನೀವು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾತುಕತೆ ಮಾಡಿದ್ದು ಸುಳ್ಳೇ? ನೀವು ಕಾಂಗ್ರೆಸ್‌ನವರನ್ನು ಸಂಪರ್ಕಿಸಿರಲಿಲ್ಲ ಎಂದು ಪ್ರಮಾಣ ಮಾಡಿ, ನಾನೂ ಪ್ರಮಾಣ ಮಾಡುತ್ತೇನೆ. ಆಗ ನಿಮ್ಮ ಪಕ್ಷ ನಿಷ್ಠೆ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು.
ಆಂತರಿಕ ಪ್ರಜಾಪ್ರಭುತ್ವ ಇದೆ:
ಸುಧಾಕರ್ ಅವರೇ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಜಿಲ್ಲಾಧ್ಯಕ್ಷರ ನೇಮಕದ ವೇಳೆ ಕ್ಷೇತ್ರದ ಉಸ್ತುವಾರಿ, ಸಹ ಉಸ್ತುವಾರಿ, ಎಂಟು ಮಂಡಲದ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ಮೂರು ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗಿತ್ತು. ಅದರಂತೆ ಈಗ ಸಂದೀಪ್ ರೆಡ್ಡಿಯನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ. ಸಂದೀಪ್ ರೆಡ್ಡಿ ನನ್ನ ಹಿಂಬಾಲಕ ಅಲ್ಲ. ನಿನ್ನ ಸಂಬಂಧಿಕ ಎಂದು ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹತಾಶೆಯಾಗಿ ಪಕ್ಷ ಹಾಗೂ ನಾಯಕರ ಬಗ್ಗೆ ಬಹಿರಂಗ ಚರ್ಚೆ ಮಾಡುವುದು ತಪ್ಪು. ಅಸಮಾಧಾನ ಇದ್ದರೆ ನೇರವಾಗಿ ರಾಜ್ಯಾಧ್ಯಕ್ಷರನ್ನೇ ಕೇಳಿ. ಈಗ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಂದೀಪ್ ರೆಡ್ಡಿ ನನ್ನ ಶಿಷ್ಯ ಅಲ್ಲ. ಬಿಜೆಪಿ ಶಿಷ್ಯ. ಐದಾರು ತಿಂಗಳು ಆತನೊಂದಿಗೆ ಕೆಲಸ ಮಾಡಿ, ಸರಿ ಕಾಣಿಸದಿದ್ದರೆ ರಾಜ್ಯದ ನಾಯಕರು, ವರಿಷ್ಠರ ಗಮನಕ್ಕೆ ತರಬೇಕು. ಅದು ಬಿಟ್ಟು, ಪಕ್ಷದ ತೀರ್ಮಾನದ ವಿರುದ್ಧ ಮಾತನಾಡುವುದು ಸರಿಯಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕು. ಅನಾವಶ್ಯವಾಗಿ ನನ್ನ ಬಗ್ಗೆ, ಕ್ಷೇತ್ರದ ಬಗ್ಗೆ ಮಾತನಾಡಿದರೆ ನಾನು ಸುಮ್ಮನೆ ಇರುವುದಿಲ್ಲ. ನಾನು ಬೇರೆ ರೀತಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ವಿಶ್ವನಾಥ್ ಗುಡುಗಿದರು.
ಕೋವಿಡ್ ಅವ್ಯವಹಾರದಿಂದ ಪಕ್ಷಕ್ಕೆ ಸೋಲು:
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಕೋವಿಡ್ ಅವ್ಯವಹಾರ ಕಾರಣ. ನೀವೂ ಸೇರಿ ಕೆಲ ಮಂತ್ರಿಗಳ ದುರಂಹಕಾರ ಕಾರಣ. ನೀವು ಪಕ್ಷಕ್ಕೆ ಬಾರದಿದ್ದರೆ, ನಾವು ವಿರೋಧ ಪಕ್ಷದಲ್ಲಿ ಕೂರುತ್ತಿದ್ದೆವು. ನಂತರ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಗೆಲುವು ಸಾಧಿಸುತ್ತಿದ್ದೆವು. ನಿಮ್ಮಿಂದಲೇ ನಮ್ಮ ಪಕ್ಷಕ್ಕೆ ಸೋಲಾಯಿತು ಎಂದು ಹರಿಹಾಯ್ದರು.
ನಿನಗೆ ನನ್ನ ಸಹವಾಸ ಗೊತ್ತಿಲ್ಲ. ನಾನು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ. 45 ವರ್ಷದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ನೂರಕ್ಕೆ ನೂರು ನೀನು ಬಿಜೆಪಿಯಲ್ಲಿ ಇರುವುದಿಲ್ಲ. ಇಂದಲ್ಲ ನಾಳೆ ನೀನು ಪಕ್ಷ ಬಿಡುತ್ತೀಯ. ಒಂದು ಕಾಲು ಹೊರಗೆ ಇರಿಸಿ ರಾಜಕೀಯ ಮಾಡುತ್ತಿದ್ದೀಯ? ಅಧಿಕಾರ ಸಿಗುವ ಕಡೆ ಹೋಗುತ್ತೀಯ. ಪಕ್ಷದಿಂದ ಹೋಗುವುದಾದರೆ ಹೋಗು. ಪಕ್ಷ ಶುದ್ಧವಾಗಲಿ. ಪಕ್ಷಕ್ಕಾಗಿ ದುಡಿದ ಸಾಕಷ್ಟು ಹಿರಿಯ ಮನೆಯಲ್ಲೇ ಇದ್ದಾರೆ. ಹಿರಿಯ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದು ಏಕವಚನದಲ್ಲಿ ಕಿಡಿಕಾರಿದರು.
ಸುಧಾಕರ್ ಪಕ್ಷದ ವಿರುದ್ಧ ಮಾತನಾಡಿ ಡ್ಯಾಮೇಜ್ ಮಾಡಬೇಡ. ಇಷ್ಟ ಇದ್ದರೆ ಪಕ್ಷದಲ್ಲಿ ಇರು. ಇಲ್ಲವಾದರೆ ಪಕ್ಷ ಬಿಟ್ಟು ಹೋಗು. ನಿನ್ನಂತಹ ಲಕ್ಷಾಂತರ ಮಂದಿ ಬಿಜೆಪಿ ಪಕ್ಷದಲ್ಲಿದ್ದಾರೆ.
-ಎಸ್.ಆರ್.ವಿಶ್ವನಾಥ್, ಶಾಸಕ