ಸಾರಾಂಶ
ಇಂಡಿಯಾ ಕೂಟದ ಸಂಚಾಲಕ ಆಯ್ಕೆ ಇಂದು ನಡೆಯುತ್ತದೆ. ಈ ಸಭೆಯಲ್ಲಿ ಇಂಡಿಯಾ ಕೂಟದ ಸಂಚಾಲಕರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗೂಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕ ಮತ್ತು ಅಧ್ಯಕ್ಷರ ಆಯ್ಕೆ ಕುರಿತು ನಿರ್ಧರಿಸಲು ಕೂಟದ 14 ಪ್ರಮುಖ ಪಕ್ಷಗಳ ಮುಖ್ಯಸ್ಥರು ಶನಿವಾರ ವರ್ಚುವಲ್ ಸಭೆ ನಡೆಸಲಿದ್ದಾರೆ.
ಇನ್ನು ಕೂಟದ ಅಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಾಗೂ ಸಂಚಾಲಕರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನೇಮಿಸುವಂತೆ ಜನತಾ ದಳ (ಜೆಡಿಯು) ಒತ್ತಡ ಹೇರುತ್ತಿದೆ ಎನ್ನಲಾಗಿದೆ. ಸದ್ಯ ಇಂಡಿಯಾ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯ ಅನುಪಸ್ಥಿತಿ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಖ್ಯಾತರಾಗಿರುವ ಖರ್ಗೆ ಮತ್ತು ಉತ್ತರ ಭಾರತದಲ್ಲಿ ಪ್ರಸಿದ್ಧರಾಗಿರುವ ನಿತೀಶ್ ಆಯ್ಕೆ ಜನರಲ್ಲಿ ಕೂಟದ ಬಗ್ಗೆ ಉತ್ತಮ ಪರಿಣಾಮ ಬೀರಲಿದೆ ಎಂದು ಜೆಡಿಯು ಅಭಿಪ್ರಾಯ ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.ಆದರೆ ಈ ಹುದ್ದೆಗಳ ನೇಮಕ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳು ಅತೃಪ್ತಿ ಹೊಂದಿವೆ ಎಂದು ಕಾಂಗ್ರೆಸ್ ಅಷ್ಟೇನೂ ಉತ್ಸಾಹಿಯಾಗಿಲ್ಲ ಹಾಗೂ ಎಲ್ಲರ ಸಮ್ಮತಿ ಮೇರೆಗೆ ನಿತೀಶ್ ಅವರನ್ನು ಸಂಚಾಲಕರನ್ನಾಗಿ ನೇಮಿಸುವಲ್ಲಿ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ನಾಯಕರು ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಇತ್ತೀಚೆಗಷ್ಟೇ ಜೆಡಿಯು ಹಾಗೂ ಟಿಎಂಸಿಗಳು ತಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಮೈತ್ರಿಯಲ್ಲಿ ಬಿರುಕು ಮೂಡಿದೆ.