ಸಾರಾಂಶ
ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡಿಕೆ ಸಂಬಂಧ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಅವಧಿ ಮುಗಿಯಲು ಇನ್ನೂ ಮೂರು ದಿನ ಬಾಕಿ ಇದ್ದರೂ ಬೆಂಗಳೂರು ಸೇರಿ ಮಹಾನಗರ ಪಾಲಿಕೆಗಳಲ್ಲಿ ಕಡಿಮೆ ಪ್ರಮಾಣದ ಸಮೀಕ್ಷೆಯಾಗಿರುವುದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರು ಅಸಮಧಾನಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡಿಕೆ ಸಂಬಂಧ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಅವಧಿ ಮುಗಿಯಲು ಇನ್ನೂ ಮೂರು ದಿನ ಬಾಕಿ ಇದ್ದರೂ ಬೆಂಗಳೂರು ಸೇರಿ ಮಹಾನಗರ ಪಾಲಿಕೆಗಳಲ್ಲಿ ಕಡಿಮೆ ಪ್ರಮಾಣದ ಸಮೀಕ್ಷೆಯಾಗಿರುವುದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರು ಅಸಮಧಾನಗೊಂಡಿದ್ದಾರೆ.ಮಂಗಳವಾರ ನಗರದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ. 84 ಹಾಗೂ ನಗರ ಪ್ರದೇಶಗಳಲ್ಲಿ ಶೇ.50ರಷ್ಟು ಸಹ ಸಮೀಕ್ಷೆ ನಡೆಯದ ಬಗ್ಗೆ ಕಳವಳ ವ್ಯಕ್ತವಾಯಿತು. ಸಭೆಯಲ್ಲಿ ಮಾತನಾಡಿದ ಅನೇಕ ಮುಖಂಡರು ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಅನೇಕರು ತಮ್ಮ ಪ್ರದೇಶಗಳಿಗೆ ಬಂದಿಲ್ಲ. ಸರ್ವರ್ ಸಮಸ್ಯೆಯಾಗುತ್ತಿದೆ ಎಂದು ಗಣತಿದಾರರು ದೂರುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ಆಯೋಗಕ್ಕೆ ತಿಳಿಸುವಂತೆ ಆಗ್ರಹಿಸಿದರು.
ಮುಖಂಡರಿಗೆ ಸಮಾಧಾನ ಮಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಎಲ್ಲ ಸಮಸ್ಯೆಗಳನ್ನು ಬರೆದುಕೊಂಡು ಆಯೋಗದ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದರು. ಇದೇ ವೇಳೆ ಸಮೀಕ್ಷೆ ಯಶಸ್ವಿಯಾಗಲು ಸ್ಥಳೀಯ ಮುಖಂಡರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹಿರಿಯ ನಾಯಕರು ಮನವಿ ಮಾಡಿದರು.ಸಮೀಕ್ಷೆ ಅವಧಿ ವಿಸ್ತರಣೆ ಅನಿವಾರ್ಯ:
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ, ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಸಮೀಕ್ಷೆ ಸಮಂಜಸವಾಗಿ ನಡೆಯುತ್ತಿಲ್ಲ, ಗಣತಿದಾರರಿಗೆ ಸರಿಯಾಗಿ ವಿಷಯ ಗೊತ್ತಿಲ್ಲ, ಸರ್ವರ್ ಸಮಸ್ಯೆ ಇದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಎಲ್ಲ ವಿಷಯಗಳನ್ನು ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಗಮನಕ್ಕೆ ತಂದಿದ್ದೇವೆ. ರಾಜ್ಯದ ಕಟ್ಟ ಕಡೆಯ ಮನೆಯ ಸಮೀಕ್ಷೆಗೆ ಒಳಪಡಬೇಕು. ಅವರು ಮಾಹಿತಿ ಕೊಡುವವವರೆಗೆ ಸಮೀಕ್ಷೆಯನ್ನು ಅನಿವಾರ್ಯವಾಗಿ ಮುಂದುವರೆಸಬೇಕಾಗುತ್ತದೆ ಎಂದರು.ವಿಶೇಷವಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಸಮೀಕ್ಷೆ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇದೆ. ಸಮೀಕ್ಷೆ ಪೂರ್ಣವಾಗುವ ತನಕ ಏನೂ ಮಾಡಲು ಆಗುವುದಿಲ್ಲ, ಸಮಯ ವಿಸ್ತರಣೆ ಕೇಳುವುದಕ್ಕಿಂತ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಸಮೀಕ್ಷೆಯ ಪೂರ್ಣ ಮಾಹಿತಿ ತೆಗೆದುಕೊಂಡು ನ್ಯಾಯಮೂರ್ತಿಗಳು ತೀರ್ಮಾನ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಧರ್ಮಸೇನ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು.;Resize=(128,128))
;Resize=(128,128))
;Resize=(128,128))