ಸಾರಾಂಶ
ರಾಜ್ಯದಲ್ಲಿ ಈ ಹಿಂದೆ ಎಂದೂ ದ್ವೇಷದ ರಾಜಕಾರಣ ಇರಲಿಲ್ಲ. ರಾಜ್ಯದಲ್ಲಿ ಆರೋಗ್ಯಕರ ರಾಜಕೀಯ ವಾತಾವರಣ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತಾ ಪರಿವಾರದಿಂದ ಬಂದವರು. ಈ ರೀತಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿಪಕ್ಷಗಳ ನಾಯಕರನ್ನು ಕಟ್ಟಿಹಾಕಲು ತನಿಖಾಸ್ತ್ರ ಪ್ರಯೋಗಕ್ಕೆ ರಾಜ್ಯಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ಕಟ್ಟಿಹಾಕುವುದು ರಾಜಕೀಯ ದ್ವೇಷವಾಗಿದೆ. ಇಂಥ ಬೆದರಿಕೆಗಳಿಗೆ ಪ್ರತಿಪಕ್ಷಗಳು ಹೆದರಲ್ಲ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಈ ಹಿಂದೆ ಎಂದೂ ದ್ವೇಷದ ರಾಜಕಾರಣ ಇರಲಿಲ್ಲ. ರಾಜ್ಯದಲ್ಲಿ ಆರೋಗ್ಯಕರ ರಾಜಕೀಯ ವಾತಾವರಣ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತಾ ಪರಿವಾರದಿಂದ ಬಂದವರು. ಈ ರೀತಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.ಸಿಎಂ ಸಿದ್ದರಾಮಯ್ಯನವರದ್ದು ಪ್ರತಿಪಕ್ಷಗಳನ್ನು ಬೆದರಿಸುವ ತಂತ್ರವಷ್ಟೆ. ಎಚ್.ಡಿ. ಕುಮಾರಸ್ವಾಮಿ ಅವರೂ ಬಹಳಷ್ಟು ಗಟ್ಟಿಯಾಗಿದ್ದು, ಎಲ್ಲವನ್ನೂ ಎದುರಿಸುತ್ತಾರೆ. ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಎರಡು ಸಲ ಮುಖ್ಯಮಂತ್ರಿ ಆದ ಅನುಭವ ಹೊಂದಿದ್ದಾರೆ. ಸರ್ಕಾರದ ದ್ವೇಷ ರಾಜಕಾರಣದ ವಿರುದ್ಧ ಚಳಿಗಾಲದ ಅಧಿವೇಶನದಲ್ಲಿ ಹೋರಾಡುತ್ತೇವೆ. ದ್ವೇಷ ರಾಜಕಾರಣದ ಬಿಸಿಯನ್ನು ಬೆಳಗಾವಿಯಲ್ಲಿ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.