ಕೇಂದ್ರದ ಹಣ ನಿಮ್ಮಪ್ಪನ ಮನೆ ಆಸ್ತೀನಾ?: ಅನಂತಕುಮಾರ ಹೆಗಡೆ

| Published : Feb 25 2024, 01:49 AM IST / Updated: Feb 25 2024, 08:06 AM IST

ಸಾರಾಂಶ

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಮ್ಮ ತೆರಿಗೆ ಹಣ, ನಮ್ಮ ಹಕ್ಕು’ ಎನ್ನುತ್ತಾರೆ. ಕೇಂದ್ರ ಸರ್ಕಾರ ನೀಡಿದ ಸಾವಿರಾರು ಕೋಟಿ ರು. ಬಗ್ಗೆ ಲೆಕ್ಕ ಕೊಡಿ ಎಂದರೆ ನಾವು ಲೆಕ್ಕ ಕೊಡುವುದಿಲ್ಲ ಎನ್ನುತ್ತಾರೆ. ಕೇಂದ್ರದ ಹಣವೇನು ನಿಮ್ಮಪ್ಪನ ಮನೆ ಆಸ್ತೀನಾ?’ ಎಂದು ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಮ್ಮ ತೆರಿಗೆ ಹಣ, ನಮ್ಮ ಹಕ್ಕು’ ಎನ್ನುತ್ತಾರೆ. ಕೇಂದ್ರ ಸರ್ಕಾರ ನೀಡಿದ ಸಾವಿರಾರು ಕೋಟಿ ರು. ಬಗ್ಗೆ ಲೆಕ್ಕ ಕೊಡಿ ಎಂದರೆ ನಾವು ಲೆಕ್ಕ ಕೊಡುವುದಿಲ್ಲ ಎನ್ನುತ್ತಾರೆ. ಕೇಂದ್ರದ ಹಣವೇನು ನಿಮ್ಮಪ್ಪನ ಮನೆ ಆಸ್ತೀನಾ?’ ಎಂದು ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಇಂದೂರ ಗ್ರಾಮದಲ್ಲಿ ಬಿಜೆಪಿ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಆಡಳಿತದಲ್ಲಿರಲಿ. 

ರಾಜ್ಯ ಸರ್ಕಾರ ಪ್ರಸ್ತಾವನೆ ತೆಗೆದುಕೊಂಡು ಹೋಗಬೇಕು, ಅಲ್ಲಿ ಕುಳಿತುಕೊಂಡು ಮಾತನಾಡಬೇಕು. ಕೇಂದ್ರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ ಲೆಟರ್ ಬರೆಯುತ್ತಾರೆ. 

ದುರಹಂಕಾರದಿಂದ ಪತ್ರ ಬರೆದು, ಸಹಿ ಮಾಡುತ್ತಾರೆ. ಅವರ ದುರಹಂಕಾರ ಎಷ್ಟಿದೆಯೆಂದರೆ, ಆ ಪತ್ರವನ್ನು ನೋಡಿದ ಕೂಡಲೇ ಹರಿದು ಹಾಕಬೇಕೆನಿಸುತ್ತದೆ. ಮಟಕಾ, ಓಸಿ ಚೀಟಿಗಿರುವ ಬೆಲೆಯೂ ಮುಖ್ಯಮಂತ್ರಿಯ ಪತ್ರಕ್ಕಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ತೆರಿಗೆ ಹಣ ನೀಡಿಲ್ಲ ಎಂದರೆ ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶದವರಿಗೂ ಕಡಿಮೆ ಹಣ ಬಂದಿರಬೇಕಲ್ಲ. ಅವರು ಯಾಕೆ ಪ್ರತಿಭಟಿಸುತ್ತಿಲ್ಲ? ಅವರಿಗೆ ಇಲ್ಲದ ವೇದನೆ ಇವರಿಗೇಕೆ? ಎಂದು ಪ್ರಶ್ನಿಸಿದರು.

ದೇಗುಲದ ಹಣ ಮಸೀದಿ, ಚರ್ಚ್‌ಗಳಿಗೆ ಯಾಕೆ?
ನಮ್ಮ ಹಿಂದೂ ದೇವಾಲಯದ ಹಣವನ್ನು ಚರ್ಚ್ ಮತ್ತು ಮಸೀದಿಗೆ ಏಕೆ ಕೊಡುತ್ತೀರಿ ಎಂದು ನಾವು ಕೇಳಬೇಕೊ, ಬೇಡವೊ? ನಮ್ಮ ಹಳ್ಳಿಗಳಲ್ಲಿ ಸಾಕಷ್ಟು ದೇವಾಲಯಗಳು ಹಾಳು ಬಿದ್ದಿವೆ. 

ನಮ್ಮ ಹಿಂದೂಗಳ ಹಣವನ್ನು ಅದಕ್ಕೆ ಕೊಡಲಿ, ಶೇ.99ರಷ್ಟು ಹಿಂದೂಗಳು ಕಟ್ಟಿದ ತೆರಿಗೆಯಿಂದ ಸರ್ಕಾರ ನಡೆಯುತ್ತಿದೆ.

‘ಹಿಂದೂಗಳು ನೀಡಿದ ತೆರಿಗೆ, ಹಿಂದೂಗಳ ಹಕ್ಕು’ ಎಂದು ಕುಳಿತುಕೊಂಡರೆ ಪರಿಸ್ಥಿತಿ ಏನಾಗುತ್ತದೆ? ಹಿಂದೂ ಸಮಾಜವೆಂದರೆ ಬೇವರ್ಸಿ ಸಮಾಜವೆಂದು ತಿಳಿದುಕೊಂಡಿದ್ದೀರಾ? ಈ ಸಮಾಜಕ್ಕೆ ಹೇಳುವವರು, ಕೇಳುವರಾರು ಇಲ್ಲವೇನು? ಆದರೆ, ನಾವು ಹಾಗೆ ಮಾಡುವುದಿಲ್ಲ. 

ಹಿಂದೂಗಳು ವಿಶಾಲ ಮನೋಭಾವದವರು. ನಾವು ಬೇಕಾದರೆ ಹಸಿದು ಬೇರೆಯವರಿಗೆ ಅನ್ನ ನೀಡುತ್ತೇವೆ ಎಂದು ಕಿಡಿಕಾರಿದರು.

ಧರ್ಮ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಈ ದೇಶದಲ್ಲಿ ಧರ್ಮ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. 

ಕಳೆದ 1,000 ವರ್ಷದಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದವರನ್ನು ಮೆಟ್ಟಿ ನಿಂತು ಇಂದು ರಾಮ ಮಂದಿರ ನಿರ್ಮಿಸಲಾಗಿದೆ. ನಮ್ಮ ಸಮಾಜ ವಾಪಸ್ ಏಳುತ್ತಿದೆ. ಅದು ಮತ್ತೆ ನಿಧಾನವಾಗಬಾರದು. 

ಸಿದ್ದರಾಮಯ್ಯನವರಂತೆ ಮೋದಿ ಕೂಡ ದೇಶದ ಜನರಿಗೆ ಉಜ್ವಲ, ಉಜಾಲಾ, ರೈತರ ಖಾತೆಗೆ ₹ 6 ಸಾವಿರ... ಹೀಗೆ ಅನೇಕ ಗ್ಯಾರಂಟಿ ನೀಡಿದ್ದಾರೆ. ಆದರೆ, ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. 

ಮೋದಿ ಪ್ರಚಾರ ಬಯಸದೆ ಸಾಕಷ್ಟು ಯೋಜನೆ ಕೊಟ್ಟಿದ್ದಾರೆ. ಆ ಯೋಜನೆಗಳಿಂದ ದೇಶ ದಿವಾಳಿಯಾಗಿಲ್ಲ, ಬದಲಾಗಿ ಇನ್ನಷ್ಟು ಸಶಕ್ತವಾಗಿದೆ.

ಆದರೆ, ಸಿದ್ರಾಮುಲ್ಲಾಖಾನ್‌ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಾಗೂ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲೂ ಹಣವಿಲ್ಲ. 

ಹಿಂದುಳಿದ ಪರಿಶಿಷ್ಟ ಜಾತಿ, ಜನಾಂಗಕ್ಕಾಗಿ ನೀಡಲಾದ ₹11ಸಾವಿರ ಕೋಟಿ ನಾಪತ್ತೆ ಮಾಡಿದ್ದಾರೆ. ಇಷ್ಟು ಹೇಸಿಗೆ ಸರ್ಕಾರವನ್ನು ನಾವೆಂದು ನೋಡಿಲ್ಲ ಎಂದು ಗುಡುಗಿದರು.