ಶಾಸಕರಿಗೆ ಕಾಂಗ್ರೆಸ್‌ ಗಾಳದ ಬೆನ್ನಲ್ಲೇ ಇಂದು ಜೆಡಿಎಸ್‌ ಸಭೆ - ಸಮಾಲೋಚನೆ, ಪಕ್ಷ ಬಲವರ್ದನೆ ಚರ್ಚೆ

| Published : Jan 12 2025, 08:19 AM IST

JDS

ಸಾರಾಂಶ

  ಕಾಂಗ್ರೆಸ್‌ ಪಕ್ಷವು ಪ್ರತಿಪಕ್ಷ ಜೆಡಿಎಸ್‌ನ ಸದಸ್ಯರನ್ನು ಸೆಳೆಯುವ ಕಾರ್ಯತಂತ್ರಕ್ಕೆ ಪ್ರತಿ ತಂತ್ರಗಾರಿಕೆ ರೂಪಿಸುವುದು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ  ಸದಸ್ಯತ್ವ ನೋಂದಣಿ ಹೆಚ್ಚಿಸಲು   ಜೆಡಿಎಸ್‌ ಮಹತ್ವದ ಸಭೆ ಕರೆಯಲಾಗಿದೆ.

ಬೆಂಗಳೂರು : ಆಡಳಿತರೂಢ ಕಾಂಗ್ರೆಸ್‌ ಪಕ್ಷವು ಪ್ರತಿಪಕ್ಷ ಜೆಡಿಎಸ್‌ನ ಸದಸ್ಯರನ್ನು ಸೆಳೆಯುವ ಕಾರ್ಯತಂತ್ರಕ್ಕೆ ಪ್ರತಿ ತಂತ್ರಗಾರಿಕೆ ರೂಪಿಸುವುದು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಹೆಚ್ಚಿಸಲು ಭಾನುವಾರ ಜೆಡಿಎಸ್‌ ಮಹತ್ವದ ಸಭೆ ಕರೆಯಲಾಗಿದೆ.

ಭಾನುವಾರ ಬೆಳಗ್ಗೆ 11ಗಂಟೆಗೆ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸೇರಿ ಪಕ್ಷದ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜೆಡಿಎಸ್‌ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಈ ಸಂಬಂಧ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದಲ್ಲದೇ ಪ್ರಚಲಿತ ರಾಜಕೀಯ ವಿದ್ಯಮಾನ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಪಕ್ಷದ ಸಂಘಟನೆ, ಸದಸ್ಯತ್ವ ನೋಂದಣಿ ಚುರುಕುಗೊಳಿಸುವುದು, ರಾಜ್ಯದ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವುದು ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲಿಗೆ ಕಾರಣವಾಗಿದ್ದ ನ್ಯೂನತೆಗಳನ್ನು ಸರಿಪಡಿಸುವುದು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳಾದ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಪಕ್ಷದ ಸದಸ್ಯತ್ವ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡಿ ಚರ್ಚೆ ನಡೆಸಲಾಗುತ್ತದೆ. ಪಕ್ಷದ ಸದಸ್ಯತ್ವ ಹೆಚ್ಚಿಸಿ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಯಲಿದ್ದು, ಪಕ್ಷ ಸಂಘಟಿಸಲು ಪ್ರವಾಸ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.