ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕೆಲವು ಅತೃಪ್ತ ಆತ್ಮಗಳ ಜೊತೆ ಸೇರಿರುವ ಸ್ವಪಕ್ಷೀಯರು ಪಕ್ಷವನ್ನು ಅಡಮಾನವಿಡುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗಂಭೀರವಾಗಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕೆಲವು ಅತೃಪ್ತ ಆತ್ಮಗಳ ಜೊತೆ ಸೇರಿರುವ ಸ್ವಪಕ್ಷೀಯರು ಪಕ್ಷವನ್ನು ಅಡಮಾನವಿಡುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗಂಭೀರವಾಗಿ ಆರೋಪಿಸಿದರು.ಜೆಡಿಎಸ್ ಪಕ್ಷದೊಳಗೆ ಅನೇಕ ಮುಖಂಡರು-ಕಾರ್ಯಕರ್ತರು ಬೇಸರದಲ್ಲಿದ್ದಾರೆ. ಅದಕ್ಕೆ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕಾರಣರಲ್ಲ. ನಮ್ಮ ಸ್ವಪಕ್ಷೀಯ ಮುಖಂಡರೇ ಕಾರಣ. ಅಧಿಕಾರ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ಜೆಡಿಎಸ್ ಪಕ್ಷವನ್ನು ಅಡಮಾನ ಇಡುವ ಆಸೆಯಲ್ಲಿದ್ದಾರೆ. ನನ್ನನ್ನು ರಾಜಕೀಯವಾಗಿ ಹೇಗೆ ಮುಗಿಸಬೇಕು, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಹೇಗೆಲ್ಲಾ ದಿಕ್ಕೆಡಿಸಬಹುದು ಎಂಬ ಪ್ರಯತ್ನದಲ್ಲಿ ಮುಂದುವರಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿದೆ ದೂಷಿಸಿದರು.ಕುಮಾರಸ್ವಾಮಿ ಅವರನ್ನು 2028ಕ್ಕೆ ಮುಖ್ಯಮಂತ್ರಿಯಾಗಿ ನೋಡಬೇಕು ಎಂದು ಎಲ್ಲರೂ ಕಾಯುತ್ತಿದ್ದಾರೆ. ನಾಡಿನ ಜನರ ಅಭಿಪ್ರಾಯವೂ ಅದೇ ಆಗಿದೆ. ಆದರೆ, ಪಕ್ಷದೊಳಗಿರುವ ಕೆಲವು ಮುಖಂಡರ ಬಯಕೆಯೇ ಬೇರೆಯಾಗಿದೆ. ಅದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈಗಲಾದರೂ ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವವರ ನಡವಳಿಕೆಗಳನ್ನು ದಾಖಲೆ ಸಮೇತ ಮಾಧ್ಯಮಗಳೆದುರು ಬಹಿರಂಗಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಜೆಡಿಎಸ್ ಹೆಸರಿನಲ್ಲಿ ಹಲವು ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದು ಕಾರ್ಯಕರ್ತರು ಹಾಗೂ ಇತರೆ ಮುಖಂಡರ ರಾಜಕೀಯ ಹಿನ್ನೆಡೆಗೆ ಕಾರಣವಾಗಿರುವ ಹಾಗೂ ಕುಟುಂಬ ಲಾಲಸೆಯುಳ್ಳವರ ವಿರುದ್ಧ ಜೆಡಿಎಸ್ ಸಂಘಟಿತವಾಗಿ ಹೋರಾಟ ನಡೆಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.ಕುಟುಂಬ ಹಾಗೂ ವೈಯಕ್ತಿಕ ಲಾಭಕ್ಕಾಗಿ ಜೆಡಿಎಸ್ ಪಕ್ಷದ ಅಡಿಪಾಯ ಅಲ್ಲಾಡಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದಾಗ ಕೆಲವರ ಷಡ್ಯಂತ್ರದ ವಿರುದ್ಧವಾಗಿ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಅನಿವಾರ್ಯವಾಗಿ ಕರೆತರಬೇಕಾಯಿತು ಎಂದು ವಿವರಿಸಿದರುಜಿಲ್ಲೆಯ ಅಧಿಕಾರ, ಅಭಿವೃದ್ಧಿ, ಸಹಕಾರ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲವೂ ಒಂದೇ ಕುಟುಂಬಕ್ಕೆ ಸೀಮಿತವಾಗಿರುವಾಗ ಲೋಕಸಭಾ ಸ್ಥಾನವೂ ದೊರೆತರೆ ಇತರ ಕಾರ್ಯಕರ್ತರು, ಮುಖಂಡರ ಪಾಡೇನು ಎಂಬ ಆತಂಕದಿಂದ ಒಮ್ಮತವಾಗಿ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಸಹಮತ ದೊರೆಯಿತು ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಸಭ್ಯತೆಯ ಮೆರಗಿದೆ. ಓರ್ವ ರಾಜಕಾರಣಿ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತವಾದಾಗ ಅವರ ಉತ್ತಮ ಯೋಗ್ಯತೆಯನ್ನು ಕಂಡು ಬೇರೆ ಪಕ್ಷದವರು ಸ್ವಾಗತಿಸಿದರೆ ಅದು ಗೌರವದ ರಾಜಕಾರಣ. ಆದರೆ, ಕೆಲವರು ಅನ್ಯ ಪಕ್ಷದ ಮುಖಂಡರ ಜೊತೆ ರಾಜಕೀಯ ಸಂಪರ್ಕವಿಟ್ಟುಕೊಂಡು ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನಿಸಿದರೂ ಕಾಂಗ್ರೆಸ್ಸಿಗರು ಅವರನ್ನು ತಿರಸ್ಕರಿಸಿದ್ದು, ಅವರ ನಡವಳಿಕೆಯನ್ನು ಬಿಂಬಿಸುತ್ತದೆ ಎಂದು ಛೇಡಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕೆಲವು ಮುಖಂಡರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಈ ನಡೆಗೆ ಅನೇಕರಿಂದ ಬೇಸರ ವ್ಯಕ್ತವಾಗಿದೆ. ಯಾರನ್ನು ತುಳಿಯಲು ಕೆಲವರು ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂಬುದು ನಮಗೆ ಅರಿವಿದೆ ಎಂದು ಕುಟುಕಿದರು.ಸ್ವಾಭಿಮಾನ ಕೆಣಕುವ ಪ್ರವೃತ್ತಿಗೆ ಅಂತ್ಯ: ಜೆಡಿಎಸ್ ಪಕ್ಷವನ್ನು ಅಡಮಾನ ಇಡುವ ಕುತಂತ್ರ ಬುದ್ಧಿ ಇರುವವರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆ ಸಾಗಿದೆ. ಜಿಲ್ಲೆಯ ಕೆಲವು ನಾಯಕರನ್ನು ಮುಗಿಸಲು ಷಡ್ಯಂತ್ರ ನಡೆದಿದೆ. ಆ ಮೂಲಕ ನಮ್ಮ ಸ್ವಾಭಿಮಾನವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಪ್ರವೃತ್ತಿಗೆ ನಾವು ಅಂತ್ಯವಾಡದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಜೆಡಿಎಸ್ ಪಕ್ಷದ ಶಿಥಿಲತೆಗೆ ಹುನ್ನಾರ ಮಾಡುತ್ತಿರುವವರ ನಡವಳಿಕೆ ಬಗ್ಗೆ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೂ ಅರಿವಿದ್ದು, ಇಂತಹವರ ಬಣ್ಣ ಅರಿತಿರುವ ವರಿಷ್ಠರು ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಹೇಳಿದರು.ಷಡ್ಯಂತ್ರಕ್ಕೆ ಜನ ಬೆಲೆ ಕೊಡಲ್ಲ: ಮಂಡ್ಯ ಜಿಲ್ಲೆಯ ಜನ ಸೂಕ್ತ ಕಾಲದಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳುವಲ್ಲಿ ನೈಪುಣ್ಯತೆ ಸಾಸಿದ್ದಾರೆ. ಜನಸೇವೆಯ ಬದ್ಧತೆಯಿಂದ ಸ್ವಾಭಿಮಾನದ ರಾಜಕೀಯ ಮಾಡುವವರಿಗೆ ಜನತೆ ಕೈಹಿಡಿಯುವ ವಿಶ್ವಾಸವಿದ್ದು, ಷಡ್ಯಂತ್ರಕ್ಕೆ ಬೆಲೆ ಸಿಗುವುದಿಲ್ಲ. ನಮ್ಮ ಕುಟುಂಬ ಪ್ರಾಮಾಣಿಕ ಜನಸೇವೆಯ ಮೂಲ ಉದ್ದೇಶದಿಂದ ರಾಜಕಾರಣ ಪ್ರವೇಶಿಸಿದ್ದು, ಸಾರ್ವಜನಿಕ ಬದುಕಿಗೆ ನಮ್ಮ ಸ್ವಂತದ್ದನ್ನು ಬಳುವಳಿಯಾಗಿ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಅವಿವೇಕತನ ಹಾಗೂ ಬೇಜವಾಬ್ದಾರಿ ನಡವಳಿಕೆಗೆ ಮಣೆ ಹಾಕುವುದಿಲ್ಲ ಎಂದು ತಿಳಿಸಿದರು. ಬಿಜೆಪಿ ಜೊತೆ ಮೈತ್ರಿಯಿಂದ ಬಹಳಷ್ಟು ಲಾಭವಾಗಿದೆ. ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿದ್ದಾರೆ. ನಮ್ಮ ಬೆಂಬಲದಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಜಯಗಳಿಸಲು ಸಾಧ್ಯವಾಗಿದೆ. ಜನಸಾಮಾನ್ಯರ ನಾಯಕರಾಗಿರುವ ಕುಮಾರಸ್ವಾಮಿ ಅವರಿಗೂ ಕೇಂದ್ರದಲ್ಲಿ ಮಹತ್ವದ ಖಾತೆ ದೊರೆತಿದೆ ಎಂದರು. ಶ್ರೀರಂಗಪಟ್ಟಣ ಶಾಸಕರ ಆರೋಪ
ಸೂಕ್ತವಾಗಿ ತನಿಖೆ ಆಗಲಿ: ರವೀಂದ್ರಮಂಡ್ಯ: ಶ್ರಿರಂಗಪಟ್ಟಣ ತಾಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಕೆಯಾಗಿದ್ದು, ಇದಕ್ಕೆ ಸಚಿವರು ಮತ್ತು ಅಧಿಕಾರಿಗಳ ಕೈವಾಡವಿದೆ ಎಂದು ಸ್ವತಃ ಕ್ಷೇತ್ರದ ಶಾಸಕರೇ ಅಲವತ್ತುಕೊಂಡಿದ್ದರೂ, ಅವರ ಆರೋಪದ ಕುರಿತು ಯಾವುದೇ ಕ್ರಮವಾಗದಿರುವುದು ಅಚ್ಚರಿ ಮೂಡಿಸಿದೆ ಎಂದು ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು. ಸ್ವತಃ ಆಡಳಿತ ಪಕ್ಷದ ಶಾಸಕರೇ ಇಂತಹ ಗಂಭೀರ ಆರೋಪ ಮಾಡಿ ನ್ಯಾಯ ಕೊಡಿಸಲು ಆಗ್ರಹಿಸಿದ್ದಾರೆ. ಈ ಚಿತಾವಣೆಗೆ ಯಾರ್ಯಾರು ಶಾಮೀಲಾಗಿದ್ದಾರೆ. ಸರ್ಕಾರಿ ಆಸ್ತಿ ಕಬಳಿಕೆ ಎಷ್ಟು ದಿನದಿಂದ ಸಾಗಿದೆ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ೧೬೮ ಕಲಂ ಜಾರಿಗೊಳಿಸಿ ಎರಡೇ ದಿನಕ್ಕೆ ಬಂದೋಬಸ್ತ್ ಬರಕಾಸ್ತುಗೊಳಿಸಿದ್ದಾರೆ. ಇದು ಬಿಹಾರ ರಾಜ್ಯದ ಆಡಳಿತವೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ರೈತರ ಅನುಕೂಲಕ್ಕೆ ಅಗತ್ಯವಿರುವ 8 ಕಿ.ಮೀ. ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಮನವೊಲಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದು, ತುಂಡು ಭೂಮಿ ಹೊಂದಿರುವ ರೈತರ ಜಮೀನು ಸ್ವಾಧೀನ ವಿಚಾರವಾಗಿ ರಾಜ್ಯ ಸರ್ಕಾರ ಆಸಕ್ತಿ ತಾಳಬೇಕು ಎಂದು ಆಗ್ರಹಿಸಿದರು.