'ಸಿಎಂ 16ನೇ ಬಜೆಟ್ಟು ಹಲವಾರು ಆರ್ಥಿಕ ಬಿಕ್ಕಟ್ಟು - ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಪರಿಣಿತಿ'

| N/A | Published : Mar 18 2025, 11:10 AM IST

Basavaraj Bommai
'ಸಿಎಂ 16ನೇ ಬಜೆಟ್ಟು ಹಲವಾರು ಆರ್ಥಿಕ ಬಿಕ್ಕಟ್ಟು - ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಪರಿಣಿತಿ'
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿಗಾಗಿ ಹಣ ಹೊಂದಿಸಲಾಗದೇ ಸಾಲ ಮಾಡಿ ಜನರಿಗೆ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ । ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಪರಿಣಿತಿ

ಸಿಎಂ 16ನೇ ಬಜೆಟ್ಟು ಹಲವಾರು ಆರ್ಥಿಕ ಬಿಕ್ಕಟ್ಟು

-ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರು

ಬಜೆಟ್ ಅಂದಾಜನ್ನು ವಾಸ್ತವಕ್ಕಿಂತ ಅತಿ ಹೆಚ್ಚು ಹಿಗ್ಗಿಸಿ ದೊಡ್ಡ ಪ್ರಮಾಣದ ಸಾಲ ಪಡೆದು ರಾಜಸ್ವ ವೆಚ್ಚಕ್ಕೆ ಅಂದರೆ ಸಂಬಳ, ಪಿಂಚಣಿ, ಸಾಲ ಮರುಪಾವತಿ ಮತ್ತು ಎಲ್ಲ ರೀತಿಯ ಸಬ್ಸಿಡಿಗಳು (ಗ್ಯಾರಂಟಿಗಳು) ಮಾಡುವುದರಿಂದ ಪ್ರತಿಯೊಬ್ಬ ರಾಜ್ಯದ ನಾಗರಿಕರ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಬರುವ ದಿನಗಳಲ್ಲಿ ಸಾಲ ಮರುಪಾವತಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ಕಾಲ ದೂರವಿಲ್ಲ.

ಕರ್ನಾಟಕ ರಾಜ್ಯದ 2025-26ರ ಆಯವ್ಯಯ ಸಿಎಂ ಸಿದ್ದರಾಮಯ್ಯ ಅವರ 16ನೇಯ ಬಜೆಟ್ ಆಗಿರುವುದು, ಹದಿನಾರು ಆರ್ಥಿಕ ಸವಾಲುಗಳನ್ನು ತಂದೊಡ್ಡಿದೆ. ಕೊವಿಡ್ ನಂತರ 2021-22, 2022-23 ಎರಡು ವರ್ಷ ಆರ್ಥಿಕ ಬಲವರ್ಧನೆಯ ದಾರಿಯನ್ನು ಮುಂದುವರೆಸದೇ ಆರ್ಥಿಕತೆಗಿಂತ ರಾಜಕಾರಣ ಬಹಳ ಪ್ರಾಮುಖ್ಯ ಎಂದು ತೀರ್ಮಾನಿಸಿ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ತಂದ ಪರಿಣಾಮ ಪ್ರತಿ ವರ್ಷ ₹50 ಸಾವಿರ ಕೋಟಿಗಿಂತ ಹೆಚ್ಚು ಅನುದಾನ ಅಭಿವೃದ್ಧಿಗೆ ಖರ್ಚಾಗದೇ ಇರುವುದು ಆರ್ಥಿಕ ಬಲವರ್ಧನೆಗೆ ಬಹಳ ದೊಡ್ಡ ಪೆಟ್ಟು ಕೊಟ್ಟಿದೆ. ಇದರ ಪರಿಣಾಮ ಒಂದು ರಾಜ್ಯಸ್ವ ಕೊರತೆಯ ಎರಡನೇ ವರ್ಷದ ಬಜೆಟ್ಟು ಅಲ್ಲದೇ ಈ ಎರಡು ವರ್ಷದಲ್ಲಿ ಅತಿ ಹೆಚ್ಚು ಸಾಲ ಪಡೆದಿರುವುದೇ ಇದಕ್ಕೆ ಸಾಕ್ಷಿ.

ಕಳೆದ ವರ್ಷ ₹27,353 ಕೋಟಿ ಕೊರತೆ ಬಜೆಟನ್ನು ಕೊಟ್ಟು ಈ ವರ್ಷ ₹19,262 ಕೊರತೆ ಬಜೆಟ್ ಮಂಡಿಸಿರುವುದು ಆರ್ಥಿಕ ಸರಿದಾರಿಗೆ ರಾಜ್ಯವನ್ನು ತರಲು ವಿಫಲವಾಗಿರುವುದು ಬಹಳ ಸ್ಪಷ್ಟ. ಒಂದು ಬಜೆಟ್ ಅಂದಾಜುಗಳನ್ನು ವಾಸ್ತವಿಕಾಂಶದಲ್ಲಿ ಹೋಲಿಸಿದಾಗ ರಾಜ್ಯ ಸರ್ಕಾರದ ಹಣಕಾಸು ನಿರ್ವಹಣೆ ಗೊತ್ತಾಗುವುದು. ಕಳೆದ ವರ್ಷ ₹3,68,674 ಕೋಟಿ ಒಟ್ಟು ಆದಾಯ ಎಂದು ಅಂದಾಜಿಸಿದ ಸಿದ್ದರಾಮಯ್ಯ ಬಜೆಟ್ಟು ಸಾಧನೆ ಮಾಡಿದ್ದು ₹3,58,650 ಕೋಟಿ ಅಂದರೆ ₹10 ಸಾವಿರ ಕೋಟಿ ಆದಾಯ ಕೊರತೆಯಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಬಜೆಟ್ಟಿನ ಅಂದಾಜಿಗಿಂತ ಸುಮಾರು ₹3000 ಕೋಟಿ ಹೆಚ್ಚು ಅನುದಾನ ಕೊಟ್ಟರೂ ಕೂಡ ಈ ಕೊರತೆಯಾಗಿರುವುದು. ಕಳೆದ ವರ್ಷ ₹3,71,381 ಕೋಟಿ ಒಟ್ಟು ವೆಚ್ಚ ಅಂದಾಜಿಸಿದ್ದು, ಆದರೆ, ಈ ವರ್ಷ ಕೇವಲ ₹3 ಲಕ್ಷ 65 ಸಾವಿರ ಕೋಟಿ ವೆಚ್ಚ ಮಾಡಿದ್ದು, ₹5 ಸಾವಿರ ಕೋಟಿ ವೆಚ್ಚವೂ ಕಡಿಮೆಯಾಗಿದೆ. ಮೇಲೆ ಕಾಣಿಸಿದ ಅಂಕಿ ಅಂಶಗಳು 2025-26ನೇ ಸಾಲಿನ ರಾಜ್ಯ ಬಜೆಟ್ಟಿನ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಿದೆ.

ಯುಪಿಎ ಅವಧಿಯಲ್ಲಿ ಹೆಚ್ಚು ವಿತ್ತೀಯ ಕೊರತೆ

ಕೇಂದ್ರ ಸರ್ಕಾರ ಅತಿ ಹೆಚ್ಚು ಸಾಲ ಮಾಡುತ್ತಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2009 ರಿಂದ 2013-14ಕ್ಕೆ ವಿತ್ತೀಯ ಕೊರತೆಯನ್ನು 6.8% ವರೆಗೂ ತೆಗೆದುಕೊಂಡು ಹೋಗಿದ್ದರು ಎನ್ನುವುದನ್ನು ‌ಮರೆಯಬಾರದು. 2020 ರವರೆಗೂ ಎನ್‌ಡಿಎ ಸರ್ಕಾರ ವಿತ್ತೀಯ ಕೊರತೆಯನ್ನು ಸರಾಸರಿ 3.5% ವರೆಗೂ ಕಾಯ್ದುಕೊಂಡು ಬಂದಿತ್ತು. 2021-22 ರಲ್ಲಿ ಕೊವಿಡ್ ಕಾರಣದಿಂದ 6.8% ವರೆಗೆ ಹೆಚ್ಚಳವಾಗಿದೆ. ಈಗ 2025-26ರಲ್ಲಿ 4.5% ಗೆ ಇಳಿಸಿದ್ದು ಆರ್ಥಿಕ ಶಿಸ್ತು ಪಾಲನೆ ಮಾಡಿ, ಆರ್ಥಿಕ ಸುಸ್ಥಿತಿಗೆ ತಂದಿರುವುದು ನರೇಂದ್ರ ಮೋದಿ ಸರ್ಕಾರದ ಸಾಧನೆ. ಆದರೆ, ಸಿದ್ದರಾಮಯ್ಯ ಅವರು ಎರಡು ವರ್ಷದ ಕೊವಿಡ್ ನಂತರ 2022-23ಕ್ಕೆ ವಿತ್ತೀಯ ಕೊರತೆ ಒಟ್ಟು ಜಿಎಸ್‌ಡಿಪಿಯ ಶೇ 2.14 ಇದ್ದದ್ದು ಈಗ ಶೇ 2.95 ಗೆ ಬಂದಿರುವುದು ಸಾಲ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಪರಿಣಿತಿ ಪಡೆದಿರುವುದು ಬಹಳ ಸ್ಪಷ್ಟ. ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡುವ ಬದಲು ತಮ್ಮ ಗುರಿ ಮತ್ತು ಸಾಧನೆ ಏನೆಂದು ಒಂದು ಸಾರಿ ಪರಾಮರ್ಷಿಸಿದರೆ ಸತ್ಯ ಗೊತ್ತಾಗುವುದು.

ಜನರ ಮೇಲೆ ಹೆಚ್ಚಿದ ಸಾಲದ ಹೊರೆ

ಬಜೆಟ್ ಅಂದಾಜನ್ನು ವಾಸ್ತವಕ್ಕಿಂತ ಅತಿ ಹೆಚ್ಚು ಹಿಗ್ಗಿಸಿ ದೊಡ್ಡ ಪ್ರಮಾಣದ ಸಾಲ ಪಡೆದು ರಾಜಸ್ವ ವೆಚ್ಚಕ್ಕೆ ಅಂದರೆ ಸಂಬಳ, ಪಿಂಚಣಿ, ಸಾಲ ಮರುಪಾವತಿ ಮತ್ತು ಎಲ್ಲ ರೀತಿಯ ಸಬ್ಸಿಡಿಗಳು (ಗ್ಯಾರಂಟಿಗಳು) ಮಾಡುವುದರಿಂದ ಪ್ರತಿಯೊಬ್ಬ ರಾಜ್ಯದ ನಾಗರಿಕರ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಬರುವ ದಿನಗಳಲ್ಲಿ ಸಾಲ ಮರುಪಾವತಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ಕಾಲ ದೂರವಿಲ್ಲ. ಬಿಜೆಪಿ ಸರ್ಕಾರ 2022-23 ರಲ್ಲಿ ಕೇವಲ ₹64 ಸಾವಿರ ಕೋಟಿ ಸಾಲವನ್ನು ಎತ್ತಿತ್ತು. ಅದು ಈಗ ₹1 ಲಕ್ಷ 16 ಸಾವಿರ ಕೋಟಿಗೆ ಏರಿದೆ. ಹಾಗೂ ರಾಜ್ಯದ ಒಟ್ಟು ಸಾಲ 2022-23ಕ್ಕೆ ₹5.23 ಲಕ್ಷ ಕೋಟಿ ಇದ್ದದ್ದು 2025-26ಕ್ಕೆ ₹7 ಲಕ್ಷ 65 ಸಾವಿರ ಕೋಟಿಗೆ ಏರಿದೆ ಅಂದರೆ ಈ ವರ್ಷದ ಕೊನೆಗೆ ಸಿದ್ದರಾಮಯ್ಯ ಅವರು ₹2 ಲಕ್ಷದ 41 ಸಾವಿರ ಕೋಟಿ ಹೆಚ್ಚು ಸಾಲ ಪಡೆದು ರಾಜ್ಯಭಾರ ಮಾಡುತ್ತಿರುವುದು ಸ್ಪಷ್ಟ.

ಸಾಲವನ್ನು ಎತ್ತಿ ಬಂಡವಾಳ ವೆಚ್ಚಕ್ಕೆ ಬಳಸುವುದು ಆರ್ಥಿಕ ನ್ಯಾಯ. ಆದರೆ, 2022-23ಕ್ಕೆ ನಮ್ಮ ಜಿಎಸ್‌ಡಿಪಿಗೆ ಶೇ 20.8% ಬಂಡವಾಳ ವೆಚ್ಚವಿದ್ದು, 2024-25ಕ್ಕೆ ಶೇ 16% ಕ್ಕೆ ಇಳಿದಿರುವುದು ಅನುಪಯುಕ್ತ ವೆಚ್ಚಕ್ಕೆ ಸಾಲದ ಮೊತ್ತ ಬಳಕೆ ಆಗುತ್ತಿರುವುದು ಬಹಳ ಸ್ಪಷ್ಟ. ಕಳೆದ ವರ್ಷ ಬಜೆಟ್‌ನಲ್ಲಿ ಮತ್ತು ಬಜೆಟ್ ಹೊರಗಡೆ ಅಬಕಾರಿ, ಮೋಟಾರ್ ವೆಹಿಕಲ್ ತೆರಿಗೆ, ಸ್ಟಾಂಪ್ ಡ್ಯೂಟಿ, ಪೆಟ್ರೋಲ್-ಡಿಸೇಲ್ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿ ಸುಮಾರು ₹40 ಸಾವಿರ ಕೋಟಿ ಹೆಚ್ಚುವರಿ ಜನರ ಮೇಲೆ ಹೊಸ ತೆರಿಗೆ ಹೊರೆ ಹಾಕಿದ ಸಿದ್ದರಾಮಯ್ಯ ಅವರು, 2025-26ರಲ್ಲಿ ಕೊರತೆ ಬಜೆಟ್ ಮಂಡನೆ ಮಾಡುವ ದುಸ್ಥಿತಿಗೆ ರಾಜ್ಯದ ಹಣಕಾಸು ಸ್ಥಿತಿ ತಂದಿದ್ದಾರೆ.

ಕೇಂದ್ರದ ಯೋಜನೆ ನಮ್ಮದೆಂದ ಸಿಎಂ

ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ವಿಶೇಷ ಏನೆಂದರೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮ ಸಾಧನೆ ಎಂದು ಬಿಂಬಿಸಿರುವುದು. ಉದಾಹರಣೆಗೆ ಬೆಂಗಳೂರು ಸೇಫ್ ಸಿಟಿ ಯೋಜನೆ ಕೇಂದ್ರದ ಅನುದಾನದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅನುಷ್ಠಾನಗೊಂಡಿತ್ತು. ಓಲಂಪಿಕ್‌ಗೆ ಯುವಕರನ್ನು ಸಿದ್ಧಪಡಿಸುವ ಯೋಜನೆ ಬಿಜೆಪಿ ಸರ್ಕಾರದಲ್ಲಿ ಸಿದ್ಧವಾಗಿತ್ತು. ಬೆಳಗಾವಿ ಜಿಲ್ಲೆಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ ₹100 ಕೋಟಿ ಕೊಟ್ಟಿರುವುದು ತಮ್ಮ ಯೋಜನೆ ಎಂದು ಬಿಂಬಿಸುತ್ತಿರುವುದು, ಪಾಸ್ಕಾನ್ ಕಂಪನಿಗೆ ಬಿಜೆಪಿ ಸರ್ಕಾರದಲ್ಲಿಯೇ ಅನುಮತಿ ಕೊಟ್ಟಿದ್ದು ಅದನ್ನು ತಮ್ಮ ಸಾಧನೆ ಎಂದು ಬೀಗುತ್ತಿರುವುದು. ಬಿಜಾಪುರ ವಿಮಾನ ನಿಲ್ದಾಣ ಬಿಜೆಪಿ ಸರ್ಕಾರದಲ್ಲಿಯೇ ಬಹುತೇಕ ಕಾಮಗಾರಿ ಮುಗಿದಿರುವುದು ತಮ್ಮ ಸಾಧನೆ ಎಂದು ಬಜೆಟ್‌ನಲ್ಲಿ ಹೇಳಿಕೊಂಡಿರುವುದು, ಮೈಸೂರು ಏರ್ಪೋರ್ಟ್‌ ವಿಸ್ತರಣೆ ಬಿಜೆಪಿ ಸರ್ಕಾರದಲ್ಲಿಯೇ ಪ್ರಾರಂಭ ಮಾಡಿರುವುದು, ಇದಲ್ಲದೇ ಜಲ ಜೀವನ್ ಮಿಷನ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ಯೋಜನೆಗಳಿಗೆ ಶೇ.50% ರಷ್ಟು ಅನುದಾನ ಕೇಂದ್ರ ಸರ್ಕಾರದಿಂದ ಬಂದಿರುವುದನ್ನು ಸಿದ್ದರಾಮಯ್ಯ ಮರೆ ಮಾಚುತ್ತಿದ್ದಾರೆ.

ಸಕಾಲಕ್ಕೆ ಯಾವುದೂ ಲಭ್ಯವಿಲ್ಲ

ಯಾವ ಸರ್ಕಾರದಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಿಂಚಣಿ ಆಗುವುದಿಲ್ಲವೋ ಮತ್ತು ಹೊರ ಗುತ್ತಿಗೆ ಮತ್ತು ಗೌರವ ಆಧಾರದ ಮೇಲೆ ಕೆಲಸ ಮಾಡುವವರಿಗೆ ಸಂಬಳ ಆಗುವುದಿಲ್ಲವೋ, ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಸಂಬಳ ಸಿಗುವುದಿಲ್ಲವೋ, ಆಸ್ಪತ್ರೆಗೆ ಔಷಧಿಗೆ ಹಣದ ಕೊರತೆ, ಶಾಲಾ ಕೊಠಡಿ ಕಟ್ಟಡ ಅರ್ಧಕ್ಕೆ ನಿಲ್ಲಿಸಿರುವಂಥದ್ದು, ರಾಜ್ಯದ ಮೂಲ ಸೌಕರ್ಯಕ್ಕೆ ಹಣ ಇಲ್ಲ ಎಂದು ಶಾಸಕರು ಕೂಗುವುದು, ರೈತರ ಬೆಳೆ ನಷ್ಟಕ್ಕೆ ಸಕಾಲದಲ್ಲಿ ಪರಿಹಾರ ಕೊಡದಿರುವುದು, ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿಯನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದು, ಹಳ್ಳಿಗಳಲ್ಲಿ ಗ್ರಾಮೀಣ ರಸ್ತೆಗಳು, ಕುಡಿಯುವ ನೀರು ಅಧೋಗತಿಗೆ ಹೋಗಿರುವುದು, ಶಹರದಲ್ಲಿ ರಸ್ತೆ ಗುಂಡಿ ಮುಚ್ಚದಿರುವುದು, ಪ್ರಾದೇಶಿಕ ಅಸಮತೋಲನ, ಕಲ್ಯಾಣ ಕರ್ನಾಟಕ ಭಾಗಕ್ಕೆ ನಯಾಪೈಸೆ ಬಿಡುಗಡೆ ಮಾಡದಿರುವುದು, ಎಸ್ಸಿ ಎಸ್ಟಿಗೆ ನಿಗದಿಯಾಗಿರುವ ನಿಗಮ ಮತ್ತು ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಮಾಡದಿರುವುದು. ಅಭಿವೃದ್ಧಿ ಮತ್ತು ಜನಕಲ್ಯಾಣ ಶೂನ್ಯವಲ್ಲದೇ ಮತ್ತೇನು?