ದತ್ತಪೀಠ ಕೇಸ್‌ಗೂ ಮರುಜೀವ: ಬಿಜೆಪಿ

| Published : Jan 05 2024, 01:45 AM IST

ಸಾರಾಂಶ

30 ವರ್ಷಗಳ ಬಳಿಕ ಕರಸೇವಕರ ಬಂಧಿಸಿರುವ ಸರ್ಕಾರ ಇದೀಗ ಚಿಕ್ಕಮಗಳೂರಿನ ದತ್ತಪೀಠ ಗಲಾಟೆಯ ಪ್ರಕರಣಕ್ಕೂ ಮರುಜೀವ ನೀಡಿದ ಎಂದು ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಮಜನ್ಮಭೂಮಿ ಹೋರಾಟಗಾರರ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಯುತ್ತಿರುವ ಮಧ್ಯೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ದತ್ತಪೀಠ ಹೋರಾಟದ ಪ್ರಕರಣಗಳ ಮರುತನಿಖೆಗೆ ಮುಂದಾಗಿದೆ ಎಂದು ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಪಿ.ರಾಜೀವ್‌ ಆರೋಪಿಸಿದ್ದಾರೆ.

‘ರಾಮ ಜನ್ಮಭೂಮಿ ಹೋರಾಟದ 31 ವರ್ಷ ಹಳೆಯ ಪ್ರಕರಣಗಳನ್ನು ಕೆದಕಿ ಕರ ಸೇವಕರನ್ನು ಬಂಧಿಸಿದ್ದರ ಬೆನ್ನಲ್ಲೇ ಇದೀಗ 7 ವರ್ಷ ಹಳೆಯ ದತ್ತಪೀಠ ಪ್ರಕರಣವನ್ನು ಮರು ತನಿಖೆ ಮಾಡಿಸಿ ಕಾಂಗ್ರೆಸ್ ಸರ್ಕಾರ ದತ್ತಾತ್ರೇಯನ ಭಕ್ತರ ವಿರುದ್ಧವೂ ಷಡ್ಯಂತ್ರ ರೂಪಿಸಲು ಹೊರಟಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಅವರು, ಮೊನ್ನೆ ಕರಸೇವಕರು, ಇಂದು ದತ್ತ ಪೀಠದ ಹೋರಾಟಗಾರರನ್ನು ಬೆನ್ನು ಹತ್ತಲು ಪೋಲಿಸರಿಗೆ ಸೂಚಿಸಿದ್ದೀರಿ. ನೀವೆಷ್ಟೇ ಭಯ ಹುಟ್ಟಿಸಿದರೂ ರಾಮ ಭಕ್ತರ ಅಯೋಧ್ಯೆ ಭೇಟಿಯ ಸಂಖ್ಯೆ ಕ್ಷೀಣಿಸಲು ಸಾಧ್ಯವಾಗದು. ಬದಲಾಗಿ ಅದು ವಿಸ್ತಾರಗೊಳ್ಳುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ನಿಮ್ಮ ಹಿಂದೂ ದ್ವೇಷದ ಬೆಟ್ಟ ನಿಮಗೆಷ್ಟು ಬೇಕೋ ಅಗೆಯಿರಿ. ಇನ್ನಷ್ಟು ಆಳಕ್ಕೂ ಇಳಿದು ಬಗೆಯಿರಿ. ನಿಮಗೇನೂ ದಕ್ಕದು. ಹಿಂದೂ ಕಾರ್ಯಕರ್ತರ ಒಂದೇ ಒಂದು ರೋಮವನ್ನೂ ಕೊಂಕಿಸಲು ಸಾಧ್ಯವಾಗದು. ಹನುಮನ ಸುಡಲು ಹೋಗಿ ಲಂಕೆಗೆ ಬೆಂಕಿ ಹಚ್ಚಿಸಿಕೊಂಡ ರಾವಣನ ಸ್ಥಿತಿಗೆ ನಿಮ್ಮ ಸರ್ಕಾರ ತಲುಪುತ್ತಿದೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.

ಸಿದ್ದು ಹಿಂದೂ ವಿರೋಧಿ -ಯತ್ನಾಳ:

ತನಿಖೆಯಾಗಿರುವ ಪ್ರಕರಣದ ಮರು ತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ರಾಜ್ಯದ ಪೋಲಿಸರ ಈಗಿನ ಕೆಲಸವಾಗಿದೆ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಆರೋಪಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಹಿಂದೂ ವಿರೋಧಿ. ತನಿಖೆಯಾಗಿರುವ ಪ್ರಕರಣದ ಮರು ತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ರಾಜ್ಯದ ಪೋಲಿಸರ ಈಗಿನ ಕೆಲಸವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಸಿದ್ದರಾಮಯ್ಯ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.ಅಶಾಂತಿಯ ವಾತಾವರಣ ನಿರ್ಮಾಣ -ರಾಜೀವ್‌:ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಬಹಳ ದೊಡ್ಡ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಸರ್ಕಾರವೇ ಮುಂದಾಗಿದೆ ಎಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬಂತೆ ಈ ಸರ್ಕಾರವು ಜನತೆಯ ಭಾವನೆಯ ಜೊತೆ ಚೆಲ್ಲಾಟ ಆಡುತ್ತಿದೆ. ದತ್ತ ಪೀಠದ ಪ್ರಕರಣಗಳು ಮುಕ್ತಾಯ ಆಗಿದ್ದವು. ಅವುಗಳನ್ನು ರೀ ಓಪನ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಹಿಂದೂಗಳ ಬಗ್ಗೆ ಇರುವ ದ್ವೇಷವನ್ನು ತೋರಿಸಿದ್ದಾರೆ ಎಂದು ತಿಳಿಸಿದರು.