ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ!

| Published : Feb 07 2024, 01:46 AM IST / Updated: Feb 07 2024, 07:52 AM IST

Delhi Chalo

ಸಾರಾಂಶ

ತೆರಿಗೆ ಪಾಲು, ಅನುದಾನ ಹಂಚಿಕೆ ಮತ್ತು ಬರ ಪರಿಹಾರ ನೀಡುವುದರಲ್ಲಿ ತೋರುತ್ತಿರುವ ಮಲತಾಯಿ ಧೋರಣೆ ಹಾಗೂ ಈ ವಿಚಾರದಲ್ಲಿ ರಾಜ್ಯಕ್ಕೆ ಸತತವಾಗಿ ಆಗುತ್ತಿರುವ ಭಾರೀ ಅನ್ಯಾಯ ಖಂಡಿಸಿ ಕೇಂದ್ರದ ಸರ್ಕಾರದ ವಿರುದ್ಧ ರಾಜ್ಯದ ಕಾಂಗ್ರೆಸ್‌ ಸರ್ಕಾರ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆಯನ್ನು ಬುಧವಾರ ನಡೆಸಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತೆರಿಗೆ ಪಾಲು, ಅನುದಾನ ಹಂಚಿಕೆ ಮತ್ತು ಬರ ಪರಿಹಾರ ನೀಡುವುದರಲ್ಲಿ ತೋರುತ್ತಿರುವ ಮಲತಾಯಿ ಧೋರಣೆ ಹಾಗೂ ಈ ವಿಚಾರದಲ್ಲಿ ರಾಜ್ಯಕ್ಕೆ ಸತತವಾಗಿ ಆಗುತ್ತಿರುವ ಭಾರೀ ಅನ್ಯಾಯ ಖಂಡಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದ ಕಾಂಗ್ರೆಸ್‌ ಸರ್ಕಾರ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆಯನ್ನು ಬುಧವಾರ ನಡೆಸಲಿದೆ.

ತನ್ಮೂಲಕ ಕರ್ನಾಟಕ ರಾಜ್ಯ ಸರ್ಕಾರ ತನ್ನ ನೇತೃತ್ವದಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿ ಪ್ರತಿಭಟನೆ ಆಯೋಜಿಸುವ ಮೂಲಕ ರಾಜ್ಯದ ಮಟ್ಟಿಗೆ ಇತಿಹಾಸ ನಿರ್ಮಾಣಕ್ಕೆ ಮುಂದಾಗಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಇಡೀ ಸಚಿವ ಸಂಪುಟ, ಕಾಂಗ್ರೆಸ್‌ ಶಾಸಕರು, ಕೆಲ ಸಂಘಟನೆಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎನ್ನಲಾದ ತಾರತಮ್ಯ ಧೋರಣೆ ಬಗ್ಗೆ ಇಡೀ ದೇಶದ ಗಮನ ಸೆಳೆಯಲಾಗುತ್ತಿದೆ.

ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರಾದ ಡಾ.ಜಿ.ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ರಾಮಲಿಂಗಾ ರೆಡ್ಡಿ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಡಾ.ಎಂ.ಸಿ.ಸುಧಾಕರ್‌, ಜಮೀರ್‌ ಅಹಮದ್‌ ಸೇರಿದಂತೆ ರಾಜ್ಯ ಸರ್ಕಾರದ ಬಹುತೇಕ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಪ್ರಮುಖ ಮುಖಂಡರುಗಳು ಮಂಗಳವಾರ ರಾತ್ರಿಯೇ ದೆಹಲಿ ತಲುಪಿ ಅಲ್ಲಿನ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ಎಲ್ಲ ನಾಯಕರೂ ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ ಮಂತರ್‌ ಮುಂದೆ ಹಮ್ಮಿಕೊಂಡಿರುವ ‘ಚಲೋ ದಿಲ್ಲಿ’ ಹೋರಾಟದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಆರ್ಥಿಕ ಅನ್ಯಾಯದ ವಿರುದ್ಧ ಆಕ್ರೋಶದ ದನಿ ಮೊಳಗಿಸಲಿದ್ದಾರೆ. ಇವರ ಜೊತೆಗೆ ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ಸಂಸದ ಡಿ.ಕೆ. ಸುರೇಶ್‌ ಕೂಡ ಪ್ರತಿಟನೆಯಲ್ಲಿ ಕೈಜೋಡಿಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿದಂತೆ ಹೈಕಮಾಂಡ್‌ನ ಹಲವು ನಾಯಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ತಾರತಮ್ಯವನ್ನು ಪ್ರಶ್ನಿಸಲಿದ್ದಾರೆ. 

ಬಿಜೆಪಿ-ಜೆಡಿಎಸ್‌ನವರಿಗೂ ಆಹ್ವಾನ: ರಾಜ್ಯಕ್ಕೆ ಆಗುತ್ತಿರುವ ನಿರಂತರ ಆರ್ಥಿಕ ಅನ್ಯಾಯದ ವಿರುದ್ಧ ನಡೆಯುವ ಪ್ರತಿಭಟನೆಗೆ ಪಕ್ಷ ಭೇದ ಮರೆತು ಬಿಜೆಪಿ, ಜೆಡಿಎಸ್‌ನ ಸಂಸದರು, ಶಾಸಕರೂ ಭಾಗವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರಿದ್ದಾರೆ. 

ಅಲ್ಲದೆ, ಈ ಸಂಬಂಧ ರಾಜ್ಯದ ಎಲ್ಲ ಬಿಜೆಪಿ, ಜೆಡಿಎಸ್‌ನ ಸಂಸದರು, ರಾಜ್ಯಸಭಾ ಸದಸ್ಯರಿಗೂ ಪ್ರತ್ಯೇಕ ಪತ್ರಗಳನ್ನು ಬರೆದು ಪ್ರತಿಭಟನೆಗೆ ಕೈಜೋಡಿಸುವಂತೆ ಆಹ್ವಾನ ನೀಡಿದ್ದಾರೆ. 

ರಾಜ್ಯಕ್ಕೆ 8 ವರ್ಷದಲ್ಲಿ 1.87 ಲಕ್ಷ ಕೋಟಿ ರು. ನಷ್ಟ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇದ್ದ ಶೇ.4.72 ರಷ್ಟು ತೆರಿಗೆ ಪಾಲನ್ನು ಶೇ.3.64ಕ್ಕೆ ಇಳಿಸಿರುವುದರಿಂದ ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಬರೋಬ್ಬರಿ 62 ಸಾವಿರ ಕೋಟಿ ರು.ನಷ್ಟು ತಾರತಮ್ಯವಾಗಿದೆ. 

ರಾಜ್ಯದಲ್ಲಿ ತೀವ್ರ ಬರದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ 18 ಸಾವಿರ ಕೋಟಿ ರು.ಗಳಿಗೂ ಹೆಚ್ಚು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರೂ ಇದುವರೆಗೆ ಒಂದೂ ಪೈಸೆ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸರ್ಕಾರ ದೂರುತ್ತಿದೆ.

15ನೇ ಹಣಕಾಸು ಆಯೋಗವು ರಾಜ್ಯಕ್ಕೆ 5495 ಕೋಟಿ ರು. ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿದ್ದರೂ ನೀಡದೆ ಕೇಂದ್ರ ಅನ್ಯಾಯ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸಹಭಾಗಿತ್ವ ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. 

ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ 5300 ಕೋಟಿ ರು.ಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರದ ಆರ್ಥಿಕ ಅನ್ಯಾಯದಿಂದ ಕರ್ನಾಟಕಕ್ಕೆ 2017-18ರಿಂದ ಇದುವರೆಗೆ 1.87 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ‘ನಮ್ಮ ತೆರಿಗೆ ನಮ್ಮ ಹಕ್ಕು, ದಿಲ್ಲಿಗೆ ಹೋಗೋಣ ಬನ್ನಿ ಕೇಳೋಣ’ ಎಂಬ ಘೋಷವಾಕ್ಯಗಳೊಂದಿಗೆ ಪ್ರತಿಭಟನೆಗೆ ಮುಂದಾಗಿದೆ.