ನವದೆಹಲಿ: ಕ್ಷೇತ್ರ ಮರುವಿಂಗಡಣೆ ವೇಳೆ ಎಲ್ಲಾ ರಾಜ್ಯಗಳ ಸೀಟುಗಳ ಪ್ರಮಾಣವನ್ನು ಶೇ.50ರಷ್ಟು ಏರಿಸಲು ಕೇಂದ್ರ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿರುವ ಕಾರಣ, ಕರ್ನಾಟಕದ ಲೋಕಸಭಾ ಸ್ಥಾನ ಹಾಲಿ ಇರುವ 28ರಿಂದ 2029ರಲ್ಲಿ 42ಕ್ಕೆ ಏರಲಿದೆ.

ಅಂದರೆ ರಾಜ್ಯದಲ್ಲಿ ಭರ್ಜರಿ 49 ವರ್ಷಗಳ ಬಳಿಕ ಪ್ರಮಾಣ ಏರಿಕೆಗೆ ಮುನ್ನುಡಿ ಬರೆಯಲಾಗಿದೆ. ಆದರೆ ಇದು 2029ರ ಚುನಾವಣೆಯಲ್ಲಷ್ಟೇ ಜಾರಿಗೆ ಬರುವ ಕಾರಣ, 52 ವರ್ಷಗಳ ಬಳಿಕ ಏರಿಕೆ ಆದಂತೆ ಆಗಲಿದೆ.

2011ರ ಗಣತಿ ಅನ್ವಯ ಕರ್ನಾಟಕದ ಜನಸಂಖ್ಯೆ 6 ಕೋಟಿ ತಲುಪಿತ್ತು. ಆದರೆ ಸದ್ಯ ಜನಸಂಖ್ಯೆ ಬದಲು ಹಾಲಿ ಇರುವ ಸ್ಥಾನಗಳ ಶೇ.50ರಷ್ಟು ಹೆಚ್ಚುವರಿ ಸ್ಥಾನ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕಾರಣ ಕರ್ನಾಟಕದ ಲೋಕಸಭಾ ಸ್ಥಾನ 28ರಿಂದ 42ಕ್ಕೆ ಏರಲಿದೆ. ಈ ಮೂಲಕ ಲೋಕಸಭೆಯ 816 ಸ್ಥಾನಗಳಲ್ಲಿ ಕರ್ನಾಟಕದ ಪಾಲು ಶೇ.5.14ರಷ್ಟು ಇರಲಿದೆ. ಈವರೆಗೆ ಶೇ.5.15ರಷ್ಟು ಕರ್ನಾಟಕದ ಪಾಲಿತ್ತು. ಹೀಗಾಗಿ ಅಷ್ಟೇನು ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದು ವಿಶ್ಲೇಷಿಸಬಹುದಾಗಿದೆ.


ಸೀಟಿನ ಹಾದಿ:

1952ರಲ್ಲಿ ದೇಶದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕಕ್ಕೆ 11 ಲೋಕಸಭಾ ಸ್ಥಾನ ಕಲ್ಪಿಸಲಾಗಿತ್ತು. ಆಗ ರಾಜ್ಯದ ಜನಸಂಖ್ಯೆ 1.9 ಕೋಟಿಯಿಂದ 2 ಕೋಟಿಯಷ್ಟು ಇತ್ತು. ನಂತರ 1957ರ ಚುನಾವಣೆ ವೇಳೆ ಲೋಕಸಭಾ ಸ್ಥಾನ 26ಕ್ಕೆ ಹೆಚ್ಚಳವಾಯ್ತು. 1962ರಲ್ಲೂ ಇದೇ ಪ್ರಮಾಣ ಮುಂದುವರೆಯಿತು. 1967ರಲ್ಲಿ ರಾಜ್ಯದ ಲೋಕಸಭಾ ಸ್ಥಾನ 27ಕ್ಕೆ ಹೆಚ್ಚಳ ಮಾಡಲಾಗಿತ್ತು. 1971ರಲ್ಲೂ ಇದೇ ಸಂಖ್ಯೆ ಮುಂದುವರೆದಿತ್ತು. ಆದರೆ 1971ರ ಜನಗಣತಿಯ ಅಂಕಿ ಅಂಶ ಆಧರಿಸಿ (2.9 ಕೋಟಿ) 1977ರಲ್ಲಿ ರಾಜ್ಯದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 28ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಇದುವರೆಗೂ ಅದೇ ಸಂಖ್ಯೆ ಮುಂದುವರೆದಿದೆ.

ರಾಜ್ಯದಲ್ಲಿ ಲೋಕಸಭಾ ಸ್ಥಾನದ ಹಾದಿ

ವರ್ಷ ಸ್ಥಾನ

1952 11

1957 26

1962 26

1967 27

1971 27

1977 28