ಬರ ಪರಿಹಾರ ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್‌

| Published : Mar 24 2024, 01:34 AM IST / Updated: Mar 24 2024, 07:51 AM IST

ಸಾರಾಂಶ

ಬರ ಪರಿಹಾರ ಪಡೆಯುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರ ಪರಿಹಾರ ಪಡೆಯುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ.

ರಾಜ್ಯದ 223 ತಾಲೂಕುಗಳಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯಂತೆ 18,171 ಕೋಟಿ ರು. ಗಳ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಶನಿವಾರ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಪರಿಹಾರ ಮತ್ತು ಅನುದಾನಕ್ಕಾಗಿ ಈಗಾಗಲೇ ಹಲವು ಸಂದರ್ಭದಲ್ಲಿ ಹಲವು ರಾಜ್ಯಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿವೆ. ಆದರೆ, ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರವೊಂದು ಸುಪ್ರೀಂಕೋರ್ಟ್‌ಗೆ ಹೋಗಿರುವುದು ಇದೇ ಮೊದಲು ಎನ್ನಲಾಗಿದೆ.

ಈ ಹಿಂದೆ ಜಿಎಸ್‌ಟಿ ಪರಿಹಾರಕ್ಕಾಗಿ ತಮಿಳುನಾಡು ಸರ್ಕಾರ, ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. 

ಅಲ್ಲದೆ, ಕೇರಳ ಸರ್ಕಾರ ಅರ್ಜಿ ಸಲ್ಲಿಕೆ ವೇಳೆ ಕರ್ನಾಟಕ ಸರ್ಕಾರಕ್ಕೆ ಕೈಜೋಡಿಸುವಂತೆ ಕೋರಿತ್ತು. ಆದರೆ, ಕರ್ನಾಟಕ ಸರ್ಕಾರ ಅದಕ್ಕೆ ನಿರಾಕರಿಸಿತ್ತು.

1 ತಿಂಗಳ ಚರ್ಚೆ ನಂತರ ರಿಟ್‌: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಹಿರಿಯ ಸಚಿವರು, ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜತೆಗೆ ಕಳೆದೊಂದು ತಿಂಗಳಿನಿಂದ ಚರ್ಚೆ ನಡೆಸಿದ್ದಾರೆ. 

ಆ ವೇಳೆ ಒಂದು ತಿಂಗಳವರೆಗೆ ಕಾದು ನೋಡುವ ಬಗ್ಗೆಯೂ ನಿರ್ಧರಿಸಲಾಯಿತು. ಆದರೆ, ಕೇಂದ್ರ ಸರ್ಕಾರ ಪರಿಹಾರ ನೀಡದ ಕಾರಣ ಅಂತಿಮವಾಗಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ಬೆಳೆ ನಷ್ಟದ ಪರಿಹಾರಕ್ಕಾಗಿ 4,663.112 ಕೋಟಿ ರು., ಬರಗಾಲದಿಂದ ಸಮಸ್ಯೆಗೊಳಗಾಗಿರುವ ಕುಟುಂಬಗಳಿಗೆ ಪರಿಹಾರ ನೀಡಲು 12,577.9 ಕೋಟಿ ರು., ಕುಡಿಯುವ ನೀರು ಪೂರೈಕೆಗೆ 566.78 ಕೋಟಿ ರು., ಜಾನುವಾರು ಆರೈಕೆಗೆ 363.68 ಕೋಟಿ ರು. ಸೇರಿದಂತೆ 18,171.44 ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರಲ್ಲೇನಿದೆ?
ಬರ, ಪ್ರವಾಹ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡುವ ಸಲುವಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005 ರೂಪಿಸಲಾಗಿದೆ. 

ಅದರ ಪ್ರಕಾರ ಬರ ಅಥವಾ ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ಒಂದು ವಾರದಲ್ಲಿ ಕೇಂದ್ರ ಆಂತರಿಕ ಸಚಿವಾಲಯ ತಂಡವು ರಾಜ್ಯಕ್ಕಾಗಮಿಸಿ ಪ್ರಕೃತಿ ವಿಕೋಪ ಪರಿಸ್ಥಿತಿ ಅಧ್ಯಯನ ನಡೆಸುತ್ತದೆ. 

ನಂತರ ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತದೆ. ಕೇಂದ್ರ ಸರ್ಕಾರವು ವರದಿ ಬಂದ ಒಂದು ತಿಂಗಳಲ್ಲಿ ರಾಜ್ಯಕ್ಕೆ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಎಂದು ಕಾಯ್ದೆಯಲ್ಲಿದೆ. ಆದರೆ, ಆ ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ಏನು ಕ್ರಮ ಎಂಬ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಅಂಶವಿಲ್ಲ.

ಕರ್ನಾಟಕ ಅರ್ಜಿಯ ಪ್ರಮುಖ ಅಂಶಗಳು

* ಸಂವಿಧಾನದ 32ನೇ ವಿಧಿ ಅಡಿಯಲ್ಲಿ ರಿಟ್‌ ಅರ್ಜಿ ಸಲ್ಲಿಕೆ

* 2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಶೇ.25ರಷ್ಟು ಮಳೆ ಕೊರತೆ

* ರಾಜ್ಯದ 196 ತಾಲೂಕುಗಳಲ್ಲಿ ತೀವ್ರ ಬರ ಹಾಗೂ 27 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ

* ಬರ ಪರಿಸ್ಥಿತಿಯಿಂದ ಈವರೆಗೆ 35,162 ಕೋಟಿ ಮೌಲ್ಯದ ಬೆಳೆ ನಾಶ

* ರಾಜ್ಯದಿಂದ ನಾಲ್ಕು ಬಾರಿ ಬರ ಮೌಲ್ಯಮಾಪನ ಮಾಡಲಾಗಿದೆ

* ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಮನವಿ ಪತ್ರ ಸಲ್ಲಿಸಿದರೂ ಕಾನೂನು ಪ್ರಕಾರ ಪರಿಹಾರ ನೀಡಿಲ್ಲ

* ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಬೇಕು